ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೆಂಗಳೂರಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಗೆ ಮತ್ತಷ್ಟು ಬಲ ನೀಡುವ ನಿಟ್ಟಿನಲ್ಲಿ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಎರಡು ಹೊಸ ಬಸ್ ಮಾರ್ಗಗಳನ್ನು ಪರಿಚಯಿಸಲು ಸಜ್ಜಾಗಿದೆ. ಸಾರಿಗೆ ಸೌಲಭ್ಯವನ್ನು ಸುಧಾರಿಸುವ ಪ್ರಯತ್ನದ ಭಾಗವಾಗಿ ಜುಲೈ 7ರಿಂದ ಈ ಹೊಸ ಮಾರ್ಗಗಳು ಕಾರ್ಯಾರಂಭಗೊಳ್ಳುತ್ತಿವೆ.
ಮೊದಲನೆಯದಾಗಿ, ಮಾರ್ಗ ಸಂಖ್ಯೆ 221-ಕೆಎಂ ಹೆಸರಿನಲ್ಲಿ, ಕೆಂಗೇರಿ ಟಿಟಿಎಂಸಿಯಿಂದ ಮಾಗಡಿ ಬಸ್ ನಿಲ್ದಾಣದವರೆಗೆ ಬಸ್ ಸೇವೆ ಆರಂಭವಾಗುತ್ತಿದೆ. ಈ ಮಾರ್ಗದಲ್ಲಿ 8 ಬಸ್‌ಗಳನ್ನು ನಿಯೋಜಿಸಲಾಗಿದ್ದು, ಕೊಮ್ಮಘಟ್ಟ, ಸೂಲಿಕೆರೆ, ಗುಲಗಂಜನಹಳ್ಳಿ ಕ್ರಾಸ್, ತಾವರೆಕೆರೆ, ಚೋಳನಾಯಕನಹಳ್ಳಿ, ಶಾನುಭೋಗನಹಳ್ಳಿ, ತಗಚಗುಪ್ಪೆ ಮತ್ತು ರಂಗನಾಥಪುರ ಎಂಬ ಪ್ರಮುಖ ಪ್ರದೇಶಗಳ ಮೂಲಕ ಸಾಗಲಿದೆ. ಇದರಿಂದ ಗ್ರಾಮೀಣ ಹಾಗೂ ನಗರ ಪ್ರದೇಶ ಭಾಗಗಳಿಗೆ ಉತ್ತಮ ಸಂಪರ್ಕ ಲಭ್ಯವಾಗಲಿದೆ.
ಇನ್ನೊಂದು ಮಾರ್ಗ ಸಂಖ್ಯೆ 238-ವಿಬಿ, ಕೆಂಪೇಗೌಡ ಬಸ್ ನಿಲ್ದಾಣದಿಂದ ಉಪ್ಕಾರ್ ಲೇಔಟ್‌ಗೆ ಸಂಪರ್ಕ ಕಲ್ಪಿಸುತ್ತಿದ್ದು, ಒಟ್ಟು 7 ಬಸ್‌ಗಳ ಸಂಚಾರ ಇದರಲ್ಲಿ ಒಳಗೊಂಡಿದೆ. ಈ ಮಾರ್ಗವು ಸುಜಾತ ಟಾಕೀಸ್, ವಿಜಯನಗರ, ಚಂದ್ರ ಲೇಔಟ್, ನಾಗರಭಾವಿ ಸರ್ಕಲ್, ಐಟಿಐ ಲೇಔಟ್, ಮುದ್ದಯ್ಯನಪಾಳ್ಯ, ಆರ್.ಟಿ.ಓ ಆಫೀಸ್, ವಿಶ್ವೇಶ್ವರಯ್ಯ ಲೇಔಟ್ ಮುಂತಾದ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸುತ್ತಿದೆ.
ವೇಳಾಪಟ್ಟಿಯ ಪ್ರಕಾರ, ಮಾರ್ಗ 221-ಕೆಎಂಗೆ ಸಂಬಂಧಿಸಿದಂತೆ, ಕೆಂಗೇರಿ ಟಿಟಿಎಂಸಿಯಿಂದ ಬೆಳಿಗ್ಗೆ 5:50 ರಿಂದ ರಾತ್ರಿ 8:05 ರವರೆಗೆ ಮತ್ತು ಮಾಗಡಿಯಿಂದ ಬೆಳಿಗ್ಗೆ 5:45 ರಿಂದ ರಾತ್ರಿ 8:15 ರವರೆಗೆ ಬಸ್‌ಗಳು ಲಭ್ಯವಿರುತ್ತವೆ. ಮಾರ್ಗ 238-ವಿಬಿ ಯಲ್ಲಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಳಿಗ್ಗೆ 5:55 ರಿಂದ ರಾತ್ರಿ 10:00ರ ತನಕ ಹಾಗೂ ಉಪ್ಕಾರ್ ಲೇಔಟ್‌ನಿಂದ ಬೆಳಿಗ್ಗೆ 5:00 ರಿಂದ ರಾತ್ರಿ 9:00ರ ವರೆಗೆ ಬಸ್‌ಗಳು ಸಂಚರಿಸಲಿವೆ.