ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇರಳದ ಶಬರಿಮಲೆಗೆ ತೆರಳುವ ಅಯ್ಯಪ್ಪ ಸ್ವಾಮಿ ಭಕ್ತರು ವಿಮಾನಗಳಲ್ಲಿ ತೆಂಗಿನಕಾಯಿ ತೆಗೆದುಕೊಂಡು ಹೋಗಲು ನಾಗರಿಕ ವಿಮಾನಯಾನ ಭದ್ರತಾ ಸಂಸ್ಥೆ (ಬಿಸಿಎಎಸ್) ಅನುಮತಿ ನೀಡಿದೆ.
ಮುಂದಿನ ವರ್ಷದ ಜನವರಿ 20ರ ವರೆಗೆ ಈ ಅನುಮತಿಯು ಜಾರಿಯಲ್ಲಿ ಇರಲಿದೆ.
ಸದ್ಯದ ನಿಯಮಾವಳಿ ಅನ್ವಯ ಕ್ಯಾಬಿನ್ ಬ್ಯಾಗೇಜ್‌ನಲ್ಲಿ ತೆಂಗಿನಕಾಯಿ ಕೊಂಡೊಯ್ಯಲು ಅವಕಾಶವಿಲ್ಲ. ತೆಂಗಿನಕಾಯಿ ಹೊತ್ತಿ ಉರಿಯುವ ಗುಣ ಹೊಂದಿರುವುದರಿಂದ ಇದಕ್ಕೆ ನಿರ್ಬಂಧ ಹೇರಲಾಗಿದೆ.
ಇದೀಗ ನಿಲ್ದಾಣದಲ್ಲಿ ಎಕ್ಸ್ ರೇ ಮತ್ತು ಸ್ಫೋಟಕ ಪತ್ತೆ ಶೋಧಕದಿಂದ ಪರಿಶೀಲಿಸಿದ ಬಳಿಕವೇ ತೆಂಗಿನಕಾಯಿ ತೆಗೆದುಕೊಂಡು ಹೋಗಲು ಅನುಮತಿ ನೀಡಲಾಗುತ್ತದೆ ಎಂದು ಬಿಸಿಎಎಸ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನವೆಂಬರ್ ಮಧ್ಯಭಾಗದಿಂದ ಜನವರಿವರೆಗೆ ಶಬರಿಮಲೆಯು ಭಕ್ತರಿಗೆ ತೆರೆದಿರುತ್ತದೆ. ಈ ಅವಧಿಯಲ್ಲಿ ಲಕ್ಷಾಂತರ ಮಾಲೆಧಾರಿ ಭಕ್ತರು ಅಯ್ಯಪ್ಪ ಸ್ವಾಮಿಯ ದರುಶನಕ್ಕೆ ‘ಇಡುಮುಡಿ ಕಟ್ಟು’ ಸಹಿತ ತೆರಳುತ್ತಾರೆ. ಇದರಲ್ಲಿ ಪೂಜಾ ಸಾಮಗ್ರಿಗಳು ಮತ್ತು ತುಪ್ಪ ತುಂಬಿದ ತೆಂಗಿನಕಾಯಿ ಇರುತ್ತದೆ. ಇದು ದೇಗುಲದ ಪ್ರಮುಖ ಹರಕೆಗಳಲ್ಲಿ ಒಂದಾಗಿದೆ. ಇದರೊಟ್ಟಿಗೆ ಸಾಮಾನ್ಯ ತೆಂಗಿನಕಾಯಿಗಳನ್ನೂ ಕೊಂಡೊಯ್ಯುತ್ತಾರೆ.