Friday, August 12, 2022

Latest Posts

ಚಿಕ್ಕಬಳ್ಳಾಪುರದಲ್ಲಿ 40 ವರ್ಷಗಳ ಬಳಿಕ ಮಹಾಮಳೆ: ಶೇ.50ಕ್ಕೂ ಹೆಚ್ಚು ಕೆರೆಗಳು ಭರ್ತಿ

ಹೊಸದಿಗಂತ ವರದಿ, ಚಿಕ್ಕಬಳ್ಳಾಪುರ:

ಬಯಲುಸೀಮೆಯಲ್ಲಿ 40 ವರ್ಷಗಳಲ್ಲಿ ಕಂಡು ಕೇಳರಿಯದ ಮಳೆಯಾಗುತ್ತಿದ್ದು, ಜಿಲ್ಲೆಯ ಶೇ.50ಕ್ಕೂ ಹೆಚ್ಚು ಕೆರೆಗಳು ತುಂಬಿರುವುದುರದಿಂದ ಬರುಡು ಭೂಮಿಗೆ ಜೀವ ಕಳೆ ಬಂದಂತಾಗಿದೆ.

ಜಿಲ್ಲೆಯಾದ್ಯಂತ ಕಳೆದ 20 ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಚಿಕ್ಕಬಳ್ಳಾಪುರ, ಗೌರಿಬಿದನೂರು, ಗುಡಿಬಂಡೆ, ಬಾಗೇಪಲ್ಲಿ, ಶಿಡ್ಲಘಟ್ಟ, ಚಿಂತಾಮಣಿ ತಾಲ್ಲೂಕುಗಳ ಬಹುಪಾಲು ಕೆರೆಗಳು ತುಂಬಿವೆ. ಅಲ್ಲದೆ ಕೆರೆ ಕುಂಟೆ, ನದಿಗಳು, ನಾಲೆಗಳು ತುಂಬಿ ಹರಿಯುತ್ತಿದ್ದು ಪ್ರವಾಹ ಭೀತಿ ಎದುರಾಗಿದೆ.

ಜಿಲ್ಲೆಯಲ್ಲಿ ಪ್ರತೀ ವರ್ಷದಂತೆ ಜನವರಿಯಿಂದ ಅಕ್ಟೋಬರ್ ವರೆಗೆ ಶೇ.648ಎಂ.ಎಂ ಸರಾಸರಿ ಮಳೆಯ ನಿರೀಕ್ಷೆ ಇತ್ತು. ಆದರೆ ಈ ವರ್ಷ ಇರುವರೆಗೂ ಶೇ.969ಎಂ.ಎಂ ರಷ್ಟು ಧಾಖಲೆಯ ಮಳೆಯಾಗಿದೆ. ಅಲ್ಲದೆ ಕಳೆದ 40 ವರ್ಷಗಳಿಂದ ಪ್ರತೀ ವರ್ಷ ಸರಾಸರಿ ಮಳೆಗಿಂದ ತೀರ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತಿತ್ತು. ಈ ವರ್ಷ ಸರಾಸರಿ ಮಳೆಗಿಂತ ಶೇ.49ಎಂ.ಎಂ ನಷ್ಟು ಅಧಿಕ ಮಳೆಯಾಗಿದೆ.

ಜಿಲ್ಲೆಯಲ್ಲಿ (ಜಿಲ್ಲಾ ಪಂಚಾಯ್ತಿ, ಸಣ್ಣ ನಿರಾವರಿ ಇಲಾಖೆಯ) 1841 ಕೆರೆಗಳಿವೆ ಇವುಗಳಲ್ಲಿ ಶೇ.50ರಷ್ಟು ಕೆರೆಗಳು ಈಗಾಗಲೇ ತುಂಬಿದ್ದು, ನಿರಂತರವಾಗಿ ಮಳೆಯಾಗುತ್ತಿರುವುದರಿಂದ ಕೆರೆಗಳಿಗೆ ಒಳ ಹರಿವು ಹೆಚ್ಚಿದ್ದು ಶೇ.90 ರಷ್ಟು ಕೆರೆಗಳು ತುಂಬಬಹುದೆಂದು ಅಂದಾಜಿಸಲಾಗಿದೆ.

ಜಿಲ್ಲೆಯಲ್ಲಿರುವ ಸಣ್ಣ ನಿರಾವರಿ ಇಲಾಖೆಯ 169 ಕೆರೆಗಳಲ್ಲಿ 100 ಕ್ಕೂ ಅಧಿಕ ಕೆರೆಗಳು ಈಗಾಗಲೇ ತುಂಬಿವೆ. ಇದುವರೆಗೂ 59 ಕೆರೆಗಳು ಶೇ.100 ರಷ್ಟು ತುಂಬಿದ್ದರೆ, 33ಕೆರೆಗಳು ಶೇ.51 ರಿಂದ 99 ರಷ್ಟು ಬರ್ತಿಯಾಗಿವೆ. ಉಳಿದ 33 ಕೆರೆಗಳು ಶೇ.31 ರಿಂದ 50ರಷ್ಟು ತುಂಬಿವೆ ಎಂದು ಇಲಾಖೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ನದಿಗಳಲ್ಲಿ ಹರಿದ ಜೀವ ಜಲ: ಜಿಲ್ಲೆಯಲ್ಲಿ ದಶಗಳ ನಂತರ ನದಿಗಳಿಲ್ಲಿ ನೀರು ಹರಿಯುತ್ತಿದ್ದೆ. ಪಾಪಾಘ್ನಿ, ಪೀನಾಕಿನಿ ಸೇರಿದಂತೆ ಹಲವು ನದಿಗಳಲ್ಲಿ ಕಳೆದ 10 ದಿನಗಳಿಂದ ಜೀವ ಜಲ ಹರಿಯುತ್ತಿರುವುದು ಜಿಲ್ಲೆಯ ಜನರನ್ನು ಪುಳಕಿತರನ್ನಾಗಿಸಿದೆ.

ತುಂಬಿದ ಕೆರೆಗಳು: ಜಿಲ್ಲೆಯ ದೊಡ್ಡ ಗೆರೆಗಳಾದ ಗುಡಿಬಂಡೆ ಅಮಾನಿ ಬೈರಸಾಗರ ಕೆರೆ, ಶ್ರೀನಿವಾಸ ಸಾಗರ, ಕಂದವಾರ ಕೆರೆ, ರಂಗಧಾಮ ಕೆರೆ, ಲಕ್ಷ್ಮೀಸಾಗರ ಕೆರೆ, ಅಗ್ರಹಾರ ಕೆರೆ, ಜಕ್ಕಲ ಮಡುಗು ಜಲಾಶಯ, ಕನ್ನಂಪಲ್ಲಿ ಕೆರೆ ಸೇರಿ ಸಾಕಷ್ಟು ಕೆರೆಗಳು‌ ಭರ್ತಿಯಾಗಿ ಕೊಡಿ ಹರಿಯುತ್ತಿವೆ.

ಗ್ರಾಮಗಳಿಗೆ ಜಲ ದಿಗ್ಭಂಧನ: ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಾದ್ಯಂತ ಕೆರೆ ಕುಂಟೆ ನದಿಗಳು ತುಂಬಿ ತುಳುಕುತ್ತಿವೆ. ಹಲವಾರು ಗ್ರಾಮಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಪ್ರವಾಹ ಭೀತಿ ಎದುರಾಗಿದ್ದರೆ, ಹಲವು ಗ್ರಾಮಗಳು ಜಲದಿಗ್ಬಂಧನಕ್ಕೆ ಒಳಗಾಗಿವೆ.

ಬೆಳೆ ಹಾನಿ: ಜಿಲ್ಲೆಯಾದ್ಯಂತ ಸಾವಿರಾರು ಹೆಕ್ಟೇರ್‌ಗಳಲ್ಲಿ ಕೊಟ್ಯಾಂತರ ರೂಪಾಯಿ ಮೌಲ್ಯದ ಬೆಳೆಗಳು ನಷ್ಟವಾಗಿದ್ದು, ಹಲವೆಡೆ ಮನೆಗಳಿಗೆ ನೀರು ನುಗ್ಗಿ ತೊಂದರೆ ಅನುಭವಿಸುವಂತಾಗಿದೆ. ಮತ್ತೊಂದೆಡೆ ಸಾಕಷ್ಟು ಕೆರೆಗಳು ಕಟ್ಟೆ ಒಡೆದಿವೆ. ಹಲವು ಕೆರೆ ಕಟ್ಟೆಗಳಿಗೆ ಹಾನಿಯಾಗಿದೆ. ಆದರೆ ಕೆರೆಗಳಿಗೆ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದ್ದು ಅಪಾಯವನ್ನು ಆಹ್ವಾನಿಸುವಂತಾಗಿದೆ.

ಸಹಾಯವಾಣಿ: ಜಿಲ್ಲಾಡಳಿತ ಈಗಾಗಲೇ ಜಿಲ್ಲೆಯಾದ್ಯಂತ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಅಲ್ಲದೆ ಪ್ರವಾಹದ ಭೀತಿಯಲ್ಲಿರುವ ಗ್ರಾಮಸ್ಥರ ನೆರವಿಗೆ 08156-277071 ಹಾಗೂ 277077 ಸಂಖ್ಯೆಯ ಸಹಾಯವಾಣಿ ಕೂಡ ಪ್ರಾರಂಭಿಸಿದೆ.

ಒಟ್ಟಿನಲ್ಲಿ ಜಿಲ್ಲೆಯಲ್ಲಿ ಕೊಯ್ಲಿಗೆ ಬಂದಿದ್ದ ಸಾವಿರಾರು ಹೆಕ್ಟೇರ್‌ಗಳ ಜೋಳ, ಭತ್ತ, ರಾಗಿ, ಅವರೆ ಬೆಳೆಗಳು ಕೊಚ್ಚಿಕೊಂಡು ಹೋಗಿದ್ದು, ರೈತರಿಗೆ ಸಂಕಷ್ಟ ಎದುರಾಗಿದ್ದರೂ ದಶಗಳಿಂದ ಮಳೆಕಾಣದೆ ಬರುಡಾಗಿದ್ದ ಜಿಲ್ಲೆಯಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಗೆ ಜೀವ ಕಳೆ ಬಂದಿದ್ದು, ಅಂತರ್ ಜಲ ಮಟ್ಟ ಹೆಚ್ಚುತ್ತಿರುವುದು ಜಿಲ್ಲೆಯ ಜನರಲ್ಲಿ ಹರ್ಷತುಂಬಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss