ನೇಮಕವಾದ ಕೆಲವೇ ಗಂಟೆಗಳಲ್ಲಿ ಕಾಂಗ್ರೆಸ್ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ಗುಲಾಂ ನಬಿ ಆಜಾದ್ ಗುಡ್ ಬೈ!

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಕಾಂಗ್ರೆಸ್‌ ಪಕ್ಷದ ಹಿರಿಯ ನಾಯಕ ಗುಲಾಂ ನಬಿ ಆಜಾದ್ ನೇಮಕವಾದ ಕೆಲವೇ ಗಂಟೆಗಳಲ್ಲಿ ಜಮ್ಮು ಮತ್ತು ಕಾಶ್ಮೀರದ ಕಾಂಗ್ರೆಸ್‌ನ ರಾಜಕೀಯ ವ್ಯವಹಾರಗಳ ಸಮಿತಿ ಮತ್ತು ಪ್ರಚಾರ ಸಮಿತಿಯ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

ವರದಿಗಳ ಪ್ರಕಾರ, ಎಐಸಿಸಿಯ ಉನ್ನತ ಪ್ಯಾನೆಲ್‌ಗಳ ಭಾಗವಾಗಿರುವ ಗುಲಾಂ ನಬಿ ಆಜಾದ್ ವಿಷಯದಲ್ಲಿ ತೆಗೆದುಕೊಂಡಿರುವ ಕ್ರಮವು ಅವರಿಗೆ ಅಗೌರವ ತೋರಿದಂತೆ ಎಂದು ಭಾವಿಸಲಾಗಿದೆ. ಆದ್ದರಿಂದ ರಾಜ್ಯ ಮಟ್ಟದಲ್ಲಿ ಕಾಂಗ್ರೆಸ್ ನೀಡಿದ ಎರಡೂ ಹುದ್ದೆಗಳಿಗೆ ಅವರು ರಾಜೀನಾಮೆ ನೀಡಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ಕಾಂಗ್ರೆಸ್‌ನ ಮರುಸಂಘಟನೆಯ ಬಗ್ಗೆ ಮಂಗಳವಾರ ಸಂಜೆ ಘೋಷಿಸಲಾದ ಕ್ರಮದ ಕುರಿತು ಗುಲಾಂ ನಬಿ ಆಜಾದ್ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಪ್ರಚಾರ ಸಮಿತಿ ಅಧ್ಯಕ್ಷ ಸ್ಥಾನವನ್ನು ತಮ್ಮ ಆರೋಗ್ಯ ಕಾರಣಗಳಿಂದಾಗಿ ವಹಿಸಿಕೊಳ್ಳಲು ನಿರಾಕರಿಸಿದ್ದಾರೆ. ಇದನ್ನು ಕಾಂಗ್ರೆಸ್ ನಾಯಕತ್ವಕ್ಕೆ ತಿಳಿಸಿರುವ ಅವರು, ತಮಗೆ ಜವಾಬ್ದಾರಿ ನೀಡಿದ ನಾಯಕತ್ವಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರ ಸಮಿತಿಯ ಮುಖ್ಯಸ್ಥ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಂದರ್ಭದಲ್ಲಿ ಗುಲಾಂ ನಬಿ ಆಜಾದ್ ತಮ್ಮ ಆರೋಗ್ಯದ ಕಾರಣಗಳನ್ನು ಉಲ್ಲೇಖಿಸಿದ್ದಾರೆ. ಆದರೆ ಉನ್ನತ ಆಡಳಿತದ ಬಗ್ಗೆ ಅವರು ಅಸಮಾಧಾನ ಹೊಂದಿದ್ದಾರೆ. ಹೊಸ ಹುದ್ದೆಯು ಅವರ ಸ್ಥಾನವನ್ನು ಕುಗ್ಗಿಸಿದಂತೆ ಕಂಡು ಬರುತ್ತಿದೆ ಎಂದು ಮೂಲಗಳು ತಿಳಿಸಿವೆ.

ಆಜಾದ್ ಪಕ್ಷದ ಹುದ್ದೆಗೆ ರಾಜೀನಾಮೆ ನೀಡಿರುವುದು ಕಾಂಗ್ರೆಸ್ ಪಕ್ಷದಲ್ಲಿ ಆಂತರಿಕ ಭಿನ್ನಾಭಿಪ್ರಾಯವನ್ನು ತೋರಿಸುತ್ತಿದೆ. ಇದು ಗಾಂಧಿ ಕುಟುಂಬವನ್ನು ಒಳಗೊಂಡಿರುವ ಪಕ್ಷದ ಹೈಕಮಾಂಡ್ ವಿರುದ್ಧ ಹಲವು ನಾಯಕರು ಬಂಡಾಯ ಬಾವುಟ ಹಾರಿಸುವುದಕ್ಕೂ ಕಾರಣವಾಗಬಹುದು. ಈ ಹಂತದಲ್ಲಿ ಜಮ್ಮು ಮತ್ತು ಕಾಶ್ಮೀರ ಘಟಕದ ಪುನಾರಚನೆಯು ಅನೇಕ ನಾಯಕರನ್ನು ಕೆರಳಿಸಿದೆ. ಆ ರಾಜ್ಯದ ಪಿಸಿಸಿ ಮುಖ್ಯಸ್ಥರ ನೇಮಕವನ್ನು ವಿರೋಧಿಸಿ ಕಾಂಗ್ರೆಸ್ ಮಾಜಿ ಶಾಸಕ ಗುಲ್ಜಾರ್ ಅಹ್ಮದ್ ವಾನಿ ಸಮನ್ವಯ ಸಮಿತಿಯಿಂದ ಈಗಾಗಲೇ ಕೆಳಗಿಳಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!