ಗೋಟಬಾಯಾ ಅಧಿಕೃತ ರಾಜೀನಾಮೆ ಘೋಷಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:
ಹೆಚ್ಚುತ್ತಿರುವ ಪ್ರತಿಭಟನಾಕಾರರ ಒತ್ತಡದ ನಡುವೆ ಶ್ರೀಲಂಕಾ ಅಧ್ಯಕ್ಷ ಗೋಟಬಾಯಾ ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ. ಈ ಕುರಿತು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರಿಗೆ ಅಧಿಕೃತವಾಗಿ ಗೋಟಬಾಯಾ ತಿಳಿಸಿದ್ದಾರೆ.

ಇದಕ್ಕೂ ಮುನ್ನ ಜುಲೈ 13ರಂದು ರಾಜಪಕ್ಸೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಸ್ಪೀಕರ್‌ ಮಹಿಂದ ಯಾಪಾ ಅಬೇವರ್ಧನ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದರು. ಪ್ರಸ್ತುತ ರಾಜಪಕ್ಸೆಯವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದು ಪ್ರಧಾನಿ ರನೀಲ್‌ ವಿಕ್ರಮಸಿಂಘೆ ಕೂಡ ತಮ್ಮ ಸ್ಥಾನದಿಂದ ಕೆಳಗಿಳಿಯುವುದಾಗಿ ಹೇಳಿದ್ದಾರೆ.

ಇವರಿಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಮನೆಗಳಿಗೆ ದಾಳಿ ಮಾಡುವುದಾಗಿ ಪ್ರತಿಭಟನಾಕಾರರು ಬೆದರಿಕೆ ಹಾಕಿದ ಹಿನ್ನೆಲೆಯಲ್ಲಿ ರಾಜೀನಾಮೆ ಘೋಷಣೆಯಾಗಿದೆ. ಶ್ರೀಲಂಕಾವು ಹಿಂದೆಂದಿಗಿಂತಲೂ ಅತ್ಯಂತ ಕರಾಳವಾದ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿದ್ದು ಹದಗೆಡುತ್ತಿರುವ ಆರ್ಥಿಕ ಪರಿಸ್ಥಿತಿಯು ಹೆಚ್ಚುತ್ತಿರುವ ಉದ್ವಿಗ್ನತೆಗೆ ಕಾರಣವಾಗಿದೆ ಮತ್ತು ಕಳೆದ ಕೆಲವು ವಾರಗಳಲ್ಲಿ ನಾಗರಿಕರು ಮತ್ತು ಪೊಲೀಸ್ ಪಡೆ ಮತ್ತು ಸಶಸ್ತ್ರ ಪಡೆಗಳ ನಡುವೆ ಹಲವಾರು ಘರ್ಷಣೆಗಳು ವರದಿಯಾಗಿವೆ ಇಂಧನ ಕೇಂದ್ರಗಳಲ್ಲಿ ಸಾವಿರಾರು ಹತಾಶ ಸಾರ್ವಜನಿಕರು ಗಂಟೆಗಟ್ಟಲೆ ಮತ್ತು ಕೆಲವೊಮ್ಮೆ ದಿನಗಟ್ಟಲೆ ಸರತಿ ಸಾಲಿನಲ್ಲಿ ನಿಲ್ಲಬೇಕಾದ ಪರಿಸ್ಥಿತಿ ಉಂಟಾಗಿದೆ.

ಕಡಿಮೆಯಾದ ದೇಶೀಯ ಕೃಷಿ ಉತ್ಪಾದನೆ, ವಿದೇಶಿ ವಿನಿಮಯ ಮೀಸಲು ಕೊರತೆ ಮತ್ತು ಸ್ಥಳೀಯ ಕರೆನ್ಸಿ ಸವಕಳಿಯು ಜನರನ್ನು ಬಡತನಕ್ಕೆ ದೂಡುತ್ತಿದ್ದು ಹಸಿವಿನಿಂದ ಅನೇಕ ಕುಟುಂಬಗಳು ಕಂಗೆಟ್ಟಿವೆ. ಅರ್ಧಮಿಲಿಯನ್‌ ಗೂ ಅಧಿಕ ಜನರು ಬಡತನ ರೇಖೆಗಿಂತ ಕೆಳಗೆ ಕುಸಿದಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!