Thursday, August 11, 2022

Latest Posts

ಗೊಟಗೋಡಿ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವಕ್ಕೆ ಚಾಲನೆ ನೀಡಿದ ಪ್ರೊ.ಡಿ.ಬಿ.ನಾಯಕ್

ಹೊಸ ದಿಗಂತ ವರದಿ, ಹಾವೇರಿ:

ಏಷ್ಯಾದಲ್ಲೇ ಜಾನಪದ ಅಧ್ಯಯನಕ್ಕಾಗಿ ಸ್ಥಾಪನೆಗೊಂಡ ಮೊಟ್ಟಮೊದಲ ಹಾಗೂ ಏಕೈಕ ವಿಶ್ವವಿದ್ಯಾಲಯ ಎಂಬ ಕೀರ್ತಿಗೆ ಭಾಜನವಾಗಿರುವ ಹಾವೇರಿ ಜಿಲ್ಲೆಯ ಗೊಟಗೋಡಿಯಲ್ಲಿರುವ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಐದನೇ ಘಟಿಕೋತ್ಸವಕ್ಕೆ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್ ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದರು.
ಕುಲಾಧಿಪತಿ, ರಾಜ್ಯಪಾಲ ಹಾಗೂ ಕುಲಾಧಿಪತಿ, ಉನ್ನತ ಶಿಕ್ಷಣ ಸಚಿವರ ಅನುಪಸ್ಥಿತಿಯಲ್ಲಿ ಹಾವೇರಿ ಜಿಲ್ಲೆಯ ಶಿಗ್ಗಾಂವ ತಾಲೂಕಿನ ಗೊಟಗೋಡಿಯಲ್ಲಿರುವ ವಿಶ್ವವಿದ್ಯಾಲಯದ ಹಿರೇತಿಟ್ಟು ಬಯಲು ರಂಗಮಂದಿರದ ಆವರಣದಲ್ಲಿ ಮಂಗಳವಾರ ಕ.ಜಾ.ವಿ.ವಿಯ ಐದನೇ ಘಟಿಕೋತ್ಸವ ಸಮಾರಂಭ ಜರುಗಿತು.
ಘಟಿಕೋತ್ಸವ ಸಮಾರಂಭ ಆರಂಭವಾಗುವ ಮುನ್ನ ವಿವಿಯ ಮುಖ್ಯ ಆಡಳಿತ ಕಚೇರಿಯಿಂದ ಬಯಲು ರಂಗಮಂದಿರದವರೆಗೆ ಕುಲಪತಿಗಳು, ಮುಖ್ಯ ಅತಿಥಿಗಳನ್ನು ಜಾನಪದ ವಾಧ್ಯಗಳು, ಕಲಾ ಜಾಥಾದೊಂದಿಗೆ ಅದ್ದೂರಿಯಾಗಿ ಶಿಸ್ತುಬದ್ಧವಾಗಿ ವೇದಿಕೆಗೆ ಕರೆತರಲಾಯಿತು.
ಬೆಳಿಗ್ಗೆ ಆರಂಭಗೊಂಡ ಘಟಿಕೋತ್ಸವವನ್ನು ಜಾನಪದ ವಿವಿಯ ಕುಲಪತಿ ಪ್ರೊ.ಡಿ.ಬಿ.ನಾಯಕ್ ಚಾಲನೆ ನೀಡಿದರು.
ಅಂತರಾಷ್ಟ್ರೀಯ ವೀರಗಾಸೆ ಕಲಾವಿದರು ಕರ್ನಾಟಕ ಜಾನಪದ ಅಕಾಡೆಮಿ ಸೇರಿದಂತೆ ವಿವಿಧ ಅಕಾಡೆಮಿ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಮಗಳೂರ ಜಿಲ್ಲೆಯ ತರಿಕೆರೆ ತಾಲೂಕಿನ ಮಾಳೇನಹಳ್ಳಿ ಗ್ರಾಮದ ಎಂ.ಆರ್.ಬಸಪ್ಪ ಅವರಿಗೆ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ, ವಿವಿಧ ವಿಷಯದ 789 ಜನರಿಗೆ ಪಿ.ಎಚ್.ಡಿ., ಎಂ.ಎ. ಸೇರಿದಂತೆ ವಿವಿಧ ಪದವಿ ಹಾಗೂ ಡಿಪ್ಲೋಮಾ ಪದವಿ ಘೋಷಿಸಿದರು.
ಧಾರವಾಡ ಜಿಲ್ಲೆಯ ವರದಿಗಾರ ಬಸವರಾಜ ಹೊಂಗಲ್ ಸೇರಿದಂತೆ 19 ಜನರಿಗೆ ಪಿ.ಎಚ್.ಡಿ.ಪದವಿ ಪ್ರದಾನ ಮಾಡಲಾಯಿತು.
ಘಟಿಕೋತ್ಸವದಲ್ಲಿ 2018-19ನೇ ಸಾಲಿನ ಜಾನಪದ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ರ‍್ಯಾಂಕ್ ವಿಜೇತರಾದ ಹುಸೈನಸಾಬ ಪಿ. ಹಾಗೂ 2017-18ನೇ ಸಾಲಿನ ಜಾನಪದ ಸಾಹಿತ್ಯದ ಸ್ನಾತಕೋತ್ತರ ಪದವಿಯಲ್ಲಿ ರೂಪಾ ಮೂಡೇರ ಅವರಿಗೆ ಚಿನ್ನದ ಪದಕ ಹಾಗೂ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಉಳಿದಂತೆ ಅನೇಕರಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದರೊಂದಿಗೆ 39 ಜನ ಪಿಜಿ ಡಿಪ್ಲೋಮಾ, 476 ಡಿಪ್ಲೋಮಾ, 196 ವಿವಿಧ ಸರ್ಟಿಫಿಕೇಟ್ ಜಾನಪದ ಕೋರ್ಸ್‌ಗಳನ್ನು ಪೂರೈಸಿದವರಿಗೆ ಪ್ರಮಾಣಪತ್ರ ಪ್ರದಾನ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸಾಂಪ್ರದಾಯಿಕ ಉಡಿಗೆ ತೊಟ್ಟು ವಿದ್ಯಾರ್ಥಿಗಳು ಗಮನಸೆಳೆದರು. ವಿದ್ಯಾರ್ಥಿನಿಯರು ಬಂಗಾರದ ಅಂಚಿನ ಬಿಳಿಸಿರೆ ರವಿಕೆತೊಟ್ಟರೆ ವಿದ್ಯಾರ್ಥಿಗಳು ಸಾಂಪ್ರದಾಯಿಕವಾದ ಬಿಳಿ ಕಚ್ಚೆಪಂಚೆ, ಜುಬ್ಬಾ ಧರಿಸಿ ಘಟಿಕೋತ್ಸವದಲ್ಲಿ ಭಾಗವಹಿಸಿದ್ದರು.
ಕುಲಪತಿಗಳು ಸೇರಿದಂತೆ ಸಮಾರಂಭದಲ್ಲಿ ಭಾಗವಹಿಸಿದ ವಿವಿಧ ನಿಖಾಯದ ಡೀನ್‌ಗಳು ಬಿಳಿ ಬಣ್ಣದ ಕೋಟು, ಬಿಳಿ ಕಚ್ಚೆಪಂಚೆ, ತಲೆಗೆ ಬಣ್ಣದ ರುಮಾಲು ಸುತ್ತಿಕೊಂಡು ಘಟಿಕೋತ್ಸವದಲ್ಲಿ ಭಾಗವಹಿಸಿ ಸಾಂಪ್ರದಾಯಕ ಮೆರಗು ತಂದರು.
ಕುಲಸಚಿವ ಪ್ರೊ.ಕೆಎನ್ ಗಂಗಾನಾಯಕ್, ಮೌಲ್ಯಮಾಪನ ಕುಲಸಚಿವ ಪ್ರೊ.ಎನ್. ಮಂಜುನಾಥ ಸಾಲಿ, ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ ಪುರಸ್ಕೃತ ವೀರಗಾಸೆ ಕಲಾವಿದ ಎಂ.ಆರ್.ಬಸಪ್ಪ ಸೇರಿದಂತೆ ವಿವಿಧ ನಿಖಾಯಗಳ ಡೀನರು-ಮುಖ್ಯಸ್ಥರು, ವಿದ್ಯಾರ್ಥಿಗಳು, ಸಂಶೋಧನಾ ವಿದ್ಯಾರ್ಥಿಗಳು ವಿವಿಯ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಘಟಿಕೋತ್ಸವದಲ್ಲಿ ಪಾಲ್ಗೊಡಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss