Thursday, August 11, 2022

Latest Posts

ಸರ್ಕಾರಿ ಇಂಜಿನಿಯರಿಂಗ್ ಕಾಲೇಜು; ಶೈಕ್ಷಣಿಕ ವರ್ಷದಲ್ಲಿ ಎರಡು ಕೋರ್ಸ್‌ಗಳು ಆರಂಭ: ಸಚಿವ ಡಾ.ಅಶ್ವಥ್‌ನಾರಾಯಣ

ಹೊಸ ದಿಗಂತ ವರದಿ, ಚಿತ್ರದುರ್ಗ:

ಚಳ್ಳಕೆರೆ ನೂತನ ತಾಂತ್ರಿಕ ಮಹಾವಿದ್ಯಾಲಯದಲ್ಲಿ  ಇದೇ ವರ್ಷ ಎರಡು ಕೋರ್ಸ್‌ ಆರಂಭವಾಗಲಿದೆ ಎಂದು ಉನ್ನತ ಶಿಕ್ಷಣ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ, ಕೌಶಲ್ಯ ಅಭಿವೃದ್ದಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ ಸಚಿವ ಡಾ. ಸಿ.ಎನ್.ಅಶ್ವಥ್ ನಾರಾಯಣ್ ತಿಳಿಸಿದರು.
ಚಳ್ಳಕೆರೆಯಲ್ಲಿ ನೂತನವಾಗಿ ನಿರ್ಮಾಣ ಮಾಡಲಾಗಿರುವ ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯದ ಕಟ್ಟಡ ಹಾಗೂ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಸರ್ಕಾರಿ ತಾಂತ್ರಿಕ ಮಹಾವಿದ್ಯಾಲಯಕ್ಕೆ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡಲಾಗಿದ್ದು, ಅತ್ಯುತ್ತಮವಾದ ಸುಸಜ್ಜಿತವಾದ ಕಟ್ಟಡ ಇದಾಗಿದೆ. 15 ಎಕರೆ ವಿಸ್ತೀರ್ಣದಲ್ಲಿ ಕ್ಯಾಂಪಸ್ ಇದ್ದು, ಮುಂದಿನ ದಿನಗಳಲ್ಲಿ ಇಲ್ಲಿನ ಯುವ ಜನರಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ವರ್ಷ ಆರ್ಟಿಫಿಷಿಯಲ್ ಇಂಟಲಿಜೆಂಟ್ ಮತ್ತು ಮಷಿನ್ ಲರ್ನಿಂಗ್ ಹಾಗೂ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್‌ನೊಂದಿಗೆ ಕಾಲೇಜು ಆರಂಭವಾಗಲಿದೆ ಎಂದು ಹೇಳಿದರು.
ಇತ್ತೀಚಿನ ದಿನಗಳಲ್ಲಿ ರೋಬೋಟ್ ತಾಂತ್ರಿಕತೆ ಹೆಚ್ಚುತ್ತಿದೆ ಹಾಗೂ ಆಟೋಮೊಬೈಲ್‌ನಲ್ಲಿ ಇಂಧನ ವಾಹನಗಳ ಉತ್ಪಾದನೆ ಕಡಿಮೆ ಮಾಡಲಾಗುತ್ತಿದ್ದು ವಿದ್ಯುತ್ ಚಾಲಿತ ಹಾಗೂ ಸಿಎನ್‌ಜಿ ಸೇರಿದಂತೆ ಹೈಬ್ರೀಡ್ ವಾಹನಗಳಿಗೆ ಹೆಚ್ಚಿನ ಆದ್ಯತೆ ನೀಡಿರುವುದರಿಂದ ಆಟೋಮೊಬೈಲ್ ಇಂಜಿನಿಯರಿಂಗ್ ಕೋರ್ಸ್‌ಗೆ ಹೆಚ್ಚಿನ ಮಹತ್ವ ಬರಲಿದೆ. ಆಟೋ ಮೊಬೈಲ್ ಉತ್ಪಾದಕ ಪ್ಯಾಕೇಜ್ ಆಗಿ ಸರ್ಕಾರ ೨೬ ಸಾವಿರ ಕೋಟಿಯಷ್ಟು ಆರ್ಥಿಕ ಪ್ಯಾಕೇಜ್ ನೀಡಿದೆ ಎಂದರು.
ರಾಜ್ಯದಲ್ಲಿ 25 ಕಡೆ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಚಿತ್ರದುರ್ಗ, ಚಳ್ಳಕೆರೆಯಲ್ಲೂ ಸ್ಥಾಪಿಸಲಾಗಿದೆ. ಇಲ್ಲಿ ವ್ಯಾಸಂಗ ಮಾಡುವವರಿಗೆ ಉದ್ಯೋಗ ಭರವಸೆ ಇರುತ್ತದೆ. ಜಾಗತಿಕ ಮಟ್ಟದಲ್ಲಿ ಈ ಸಂಸ್ಥೆಯಿಂದ ಮಾಡಿದ ಸ್ಪರ್ಧೆಯಲ್ಲಿ ಐದು ಪ್ರಶಸ್ತಿಗಳನ್ನು ಪಡೆಯಲಾಗಿರುತ್ತದೆ. ಈ ಸಂಸ್ಥೆಗಳನ್ನು ನಡೆಸಲು ದೊಡ್ಡ ದೊಡ್ಡ ಕಂಪನಿಗಳ ಜೊತೆ ಒಡಂಬಡಿಕೆ ಮಾಡಿಕೊಳ್ಳಲಾಗಿರುತ್ತದೆ. ಈ ಸಂಸ್ಥೆಯಲ್ಲಿ ತರಬೇತಿ ಪಡೆಯುವವರಿಗೆ ಉದ್ಯೋಗ ಖಾತರಿ ಇರುತ್ತದೆ. ಈ ಜಿಲ್ಲೆಯ ಯುವ ಸಮೂಹ ಇದರ ಸದುಪಯೋಗ ಮಾಡಿಕೊಳ್ಳಬೇಕೆಂದರು.
ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಮಾತನಾಡಿ, ಕೊರೋನಾ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ತಾಂತ್ರಿಕ ಕೋರ್ಸ್ ವಿದ್ಯಾರ್ಥಿಗಳಿಗೆ ಉಚಿತವಾಗಿ ಟ್ಯಾಬ್ ವಿತರಣೆ ಮಾಡಲಾಗಿದೆ. ಇದರಿಂದ ಸಾಕಷ್ಟು ವಿದ್ಯಾರ್ಥಿಗಳಿಗೆ ಸಹಾಯವಾಗಿದೆ. ಇದೇ ರೀತಿ ಹಲವಾರು ಕಲ್ಯಾಣ ಯೋಜನೆಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ರಾಜ್ಯ ಸಚಿವ ಎ.ನಾರಾಯಣಸ್ವಾಮಿ ಮಾತನಾಡಿ, ದಲಿತರಿಗೆ, ರೈತರಿಗೆ ತಾಂತ್ರಿಕ ಸ್ಪರ್ಶವಾಗಬೇಕು. ಇದರಿಂದ ದೇಶ ಅಭಿವೃದ್ದಿ ಹೊಂದಲು ಸಾಧ್ಯವಾಗಲಿದೆ. ಎಂಎಸ್‌ಎಂಇ ರಡಿ ದೇಶದಲ್ಲಿ ಪ್ರತಿ ವರ್ಷ ೫೦ ಲಕ್ಷ ಜನರಿಗೆ ಕೌಶಲ್ಯ ತರಬೇತಿ ನೀಡಲಾಗುತ್ತಿದ್ದು ಉದ್ಯೋಗಾವಕಾಶ ಕಲ್ಪಿಸಿದ ಬಗ್ಗೆ ಪರಿಶೀಲನೆ ನಡೆಸಲಾಗುತ್ತದೆ ಎಂದರು.
ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆ ವಹಿಸಿ ಮಾತನಾಡಿ, ೧೫ ಎಕರೆ ವಿಸ್ತೀರ್ಣದಲ್ಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜು ಹಾಗೂ ೧೦ ಎಕರೆ ಜಾಗದಲ್ಲಿ ಸರ್ಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಜಿಟಿಟಿಸಿ ಕೇಂದ್ರದಿಂದ ತಾಲ್ಲೂಕಿನ ಯುವ ಸಮೂಹಕ್ಕೆ ಅನುಕೂಲವಾಗಲಿದೆ. ಇಂಜಿನಿಯರಿಂಗ್, ಜಿಟಿಟಿಸಿ ೨೦೧೮ ಕ್ಕಿಂತ ಮುಂಚೆ ಮಂಜೂರಾದರೂ ೨೦೧೮-೧೯, ೧೯-೨೦ ರಲ್ಲಿ ಹೆಚ್ಚಿನ ಪ್ರಗತಿ ಈ ಕಾಲೇಜುಗಳ ನಿರ್ಮಾಣದಲ್ಲಿ ಕಾಣಬಹುದಾಗಿದ್ದು, ಕ್ಷೇತ್ರದ ಜನರು ಇದರ ಅನುಕೂಲ ಮಾಡಿಕೊಳ್ಳಬೇಕೆಂದರು.
ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ, ಪೂರ್ಣಿಮಾ ಕೆ.ಶ್ರೀನಿವಾಸ್, ವಿಧಾನ ಪರಿಷತ್ ಸದಸ್ಯರಾದ ಡಾ.ವೈ.ಎ.ನಾರಾಯಣಸ್ವಾಮಿ, ಡಾ.ಕೆ.ಚಿದಾನಂದಗೌಡ, ನಗರಸಭೆ ಅಧ್ಯಕ್ಷೆ ಜಯಲಕ್ಷ್ಮಿ, ಉಪಾಧ್ಯಕ್ಷೆ ಜಯತುಬಿ, ಜಿಟಿಟಿಸಿ ಡಾ.ರಮೇಶ್, ಇಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲರಾದ ಬೇನಾಳ್ ಹಾಗೂ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss