ಹೊಸ ದಿಗಂತ ವರದಿ,ಮಡಿಕೇರಿ:
ನಿರಂತರ ಹುಲಿ ದಾಳಿಯಿಂದ ಜಿಲ್ಲೆಯಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಅಮಾಯಕರ ಜೀವ ಬಲಿಯಾದ ನಂತರ ಜನ ಸಹನೆ ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ ಎಂದು ತಿಳಿಸಿರುವ ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು, ಕಾನೂನು ಕೈಗೆತ್ತಿಕೊಳ್ಳುವ ಮೊದಲು ಸರ್ಕಾರ ಎಚ್ಚೆತ್ತುಕೊಳ್ಳಬೇಕೆಂದು ಒತ್ತಾಯಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಲಿ ದಾಳಿಯನ್ನು ನಿಯಂತ್ರಿಸುವಲ್ಲಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆ ಎಂದು ಆರೋಪಿಸಿದರು.
ಸರ್ಕಾರದಿಂದ ವನ್ಯಜೀವಿಗಳ ದಾಳಿಯನ್ನು ತಡೆಯಲು ಸಾಧ್ಯವಾಗದಿದ್ದಲ್ಲಿ ಜನರೇ ಕೋವಿಯನ್ನು ಕೈಗೆ ತೆಗೆದುಕೊಳ್ಳುವ ಆತಂಕವಿದೆ. ಕಾಡು ಪ್ರಾಣಿಗಳ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ, ಆದರೆ ಮಾನವ ಜೀವಕ್ಕೇ ಕುತ್ತು ಬಂದಾಗ ಹುಲಿಯನ್ನು ನೋಡಿಕೊಂಡು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದವರು, ವನ್ಯಜೀವಿಗಳ ದಾಳಿಯನ್ನು ನಿಯಂತ್ರಿಸಲು ಸರ್ಕಾರದಿಂದ ಸಾಧ್ಯವಾಗದಿದ್ದಲ್ಲಿ ಗುಂಡು ಹಾರಿಸಲು ಗ್ರಾಮಸ್ಥರಿಗೆ ಅವಕಾಶ ನೀಡಬೇಕೆಂದು ಒತ್ತಾಯಿಸಿದರು.
ಹುಲಿ ದಾಳಿಗೆ ಬಲಿಯಾದ ಬಾಲಕ ಹಾಗೂ ವೃದ್ಧೆಯ ಕುಟುಂಬಕ್ಕೆ 7.50 ಲಕ್ಷ ರೂ. ಪರಿಹಾರ ನೀಡುವುದಾಗಿ ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಆಧಾರ್ ಕಾರ್ಡ್ ಮತ್ತು ಪಡಿತರ ಚೀಟಿ ಇಲ್ಲದೆ ಪರಿಹಾರ ಸಿಗುವುದು ಕಷ್ಟ ಸಾಧ್ಯವಾಗಿದೆ. ಅಸಹಾಯಕರಿಗೆ ಅಗತ್ಯ ದಾಖಲೆಗಳನ್ನು ಒದಗಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕಾಗಿದೆ. ದಾಖಲೆ ಇಲ್ಲದವರನ್ನು ಪತ್ತೆ ಹಚ್ಚುವ ಕಾಳಜಿಯನ್ನು ಅಧಿಕಾರಿಗಳು ತೋರಬೇಕಿದೆ. ಆದರೆ ಇದ್ಯಾವುದನ್ನೂ ಸರ್ಕಾರ ಮಾಡುತ್ತಿಲ್ಲ, ವನ್ಯಜೀವಿಗಳನ್ನೂ ನಿಯಂತ್ರಿಸುತ್ತಿಲ್ಲ. ಏನೂ ಮಾಡಲಾಗದವರು ಸರ್ಕಾರ ಯಾಕೆ ನಡೆಸುತ್ತಿದ್ದಾರೆ ಎಂದು ವೀಣಾ ಅಚ್ಚಯ್ಯ ಖಾರವಾಗಿ ಪ್ರಶ್ನಿಸಿದರು.
ಒಂದು ಹುಲಿಯನ್ನು ಸೆರೆ ಹಿಡಿಯಲಾಗಿದೆಯಾದರೂ ಸೋಮವಾರ ಮತ್ತೆ ದಾಳಿ ಮಾಡಿರುವ ಬೇರೊಂದು ಹುಲಿ ಎರಡು ಹಸುಗಳನ್ನು ಕೊಂದು ಹಾಕಿದೆ. ಅಲ್ಲದೆ ಹುಲಿಯನ್ನು ಕಂಡು ಬಾಲಕಿಯೊಬ್ಬಳು ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ಭಾಗದಲ್ಲಿ ಸುಮಾರು ಏಳು ಹುಲಿಗಳು ಸಂಚರಿಸುತ್ತಿವೆ ಎಂದು ಆತಂಕ ವ್ಯಕ್ತಪಡಿಸಿದ ವೀಣಾ ಅಚ್ಚಯ್ಯ, ಹೊರ ಜಿಲ್ಲೆಗಳಲ್ಲಿ ಸೆರೆ ಹಿಡಿದ ಹುಲಿಗಳನ್ನು ಕೊಡಗಿಗೆ ತಂದು ಬಿಡುತ್ತಿರುವ ಬಗ್ಗೆ ಶಂಕೆ ಇದೆ. ಮಂಗಗಳನ್ನು ಕೂಡ ತಂದು ಬಿಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊಡಗಿನ ಜನರ ತಾಳ್ಮೆಗೂ ಒಂದು ಮಿತಿ ಇದೆ, ಸರ್ಕಾರದ ನಿರ್ಲಕ್ಷ್ಯವನ್ನು ಖಂಡಿಸಿ ರಾಜಕೀಯ ರಹಿತವಾಗಿ ಒಗ್ಗೂಡಿ ವಿಧಾನಸೌಧ ಚಲೋ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ವನ್ಯಜೀವಿ ದಾಳಿ ಕುರಿತು ಅಧಿವೇಶನದಲ್ಲಿ ಪ್ರಸ್ತಾಪಿಸುವುದಾಗಿ ಹೇಳಿದರು.
ಜಿಲ್ಲಾ ಕಾಂಗ್ರೆಸ್ ಪ್ರಮುಖ ಧರ್ಮಜ ಉತ್ತಪ್ಪ ಮಾತನಾಡಿ, ಬೇರೆ ಜಿಲ್ಲೆಗಳಲ್ಲಿ ಸೆರೆಯಾದ ನರಭಕ್ಷಕ ಹುಲಿಗಳನ್ನು ಮಧ್ಯರಾತ್ರಿ ತಂದು ದಕ್ಷಿಣ ಕೊಡಗು ಭಾಗದಲ್ಲಿ ಬಿಡುತ್ತಿದ್ದಾರೆ. ಕಳೆದ ಅನೇಕ ವರ್ಷಗಳಿಂದ ಹುಲಿ ದಾಳಿಯ ಪ್ರಕರಣಗಳನ್ನೇ ನೋಡದ ಕೊಡಗಿನಲ್ಲಿ ಇತ್ತೀಚಿನ ದಿನಗಳಲ್ಲಿ ಹುಲಿ ದಾಳಿ ಮಿತಿಮೀರುತ್ತಿರುವುದಕ್ಕೆ ಇದೇ ಕಾರಣವೆಂದು ಆರೋಪಿಸಿದರು.
ಜಿಲ್ಲಾ ಕಾಂಗ್ರೆಸ್ ವಕ್ತಾರ ಟಾಟುಮೊಣ್ಣಪ್ಪ ಮಾತನಾಡಿ ನಿಟ್ಟೂರು, ನಾಲ್ಕೇರಿ, ಬಿರುನಾಣಿ, ಸಿದ್ದಾಪುರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಸುಮಾರು 18 ರಿಂದ 20 ಹುಲಿಗಳು ಸಂಚರಿಸುತ್ತಿದ್ದು, ಕೊಡಗನ್ನು ಹುಲಿಧಾಮ ಮಾಡಲು ಹೊರಟಂತಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಹುಲಿಗಳ ದಾಳಿಯಿಂದ ಆಗುತ್ತಿರುವ ಅನಾಹುತಗಳಿಗೆ ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದರು ಹಾಗೂ ಶಾಸಕರುಗಳೇ ನೇರ ಹೊಣೆ ಎಂದು ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಪೊನ್ನಂಪೇಟೆ ತಾಲೂಕು ಅಧ್ಯಕ್ಷ ಮಿದೇರಿರ ನವೀನ್ ಹಾಗೂ ವಿಧಾನ ಪರಿಷತ್ ಸದಸ್ಯರ ಆಪ್ತ ಕಾರ್ಯದರ್ಶಿ ಬೊಳ್ಳಜಿರ ಬಿ.ಅಯ್ಯಪ್ಪ ಉಪಸ್ಥಿತರಿದ್ದರು.