Friday, March 5, 2021

Latest Posts

ವನ್ಯಜೀವಿ ಉಪಟಳ ತಡೆಯುವಲ್ಲಿ ಸರ್ಕಾರ ವಿಫಲ: ಹರೀಶ್ ಬೋಪಣ್ಣ ಆರೋಪ

ಹೊಸದಿಗಂತ ವರದಿ, ಕೊಡಗು:

ದಕ್ಷಿಣ ಕೊಡಗಿನಲ್ಲಿ ನಿರಂತರವಾಗಿರುವ ಹುಲಿ ದಾಳಿಗೆ ಅರಣ್ಯ ಇಲಾಖೆಯ ಕರ್ತವ್ಯ ಲೋಪ ಮತ್ತು ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಕೆಪಿಸಿಸಿ ಸದಸ್ಯ ಹರೀಶ್ ಬೋಪಣ್ಣ ಆರೋಪಿಸಿದ್ದಾರೆ.

ಶ್ರೀಮಂಗಲದಲ್ಲಿ ಎರಡು ಅಮಾಯಕ ಜೀವಗಳನ್ನು ಹುಲಿ ಬಲಿ ತೆಗೆದುಕೊಂಡ ಪ್ರಕರಣ ಆತಂಕಕಾರಿಯಾಗಿದ್ದು, ಸರ್ಕಾರ ತಕ್ಷಣ ಎಚ್ಚೆತ್ತುಕೊಳ್ಳಬೇಕೆಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೊಡಗಿನಲ್ಲಿ ವನ್ಯಜೀವಿಗಳ ದಾಳಿ ಮಿತಿ ಮೀರಿದೆ ಎನ್ನುವ ಮಾಹಿತಿ ಸರ್ಕಾರಕ್ಕಿದ್ದರೂ ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ತೋರಿರುವುದು ಮತ್ತು ಅರಣ್ಯ ಇಲಾಖೆಯ ಅಸಡ್ಡೆ ಈ ಘಟನೆಗೆ ಕಾರಣವಾಗಿದೆ ಎಂದು ಟೀಕಿಸಿದ್ದಾರೆ.

ಕೋವಿಡ್ ಸಂಕಷ್ಟ ಮತ್ತು ಪ್ರಾಕೃತಿಕ ವಿಕೋಪದಿಂದ ಈಗಾಗಲೇ ಕೊಡಗಿನ ಬೆಳೆಗಾರರು ಹಾಗೂ ಗ್ರಾಮೀಣ ಜನರು ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೇ ಕಳೆದ ಹಲವು ತಿಂಗಳುಗಳಿಂದ ಹುಲಿ ದಾಳಿ ನಿರಂತರವಾಗಿದೆ. ನೂರಾರು ಹಸುಗಳು ಸಾವನ್ನಪ್ಪಿದ್ದು, ಈಗ ಮಾನವ ಜೀವವವೂ ಬಲಿಯಾಗಿದೆ. ಮಳೆ ಮತ್ತು ಪ್ರಾಣಿಗಳ ದಾಳಿಯಿಂದ ಉಂಟಾದ ಬೆಳೆ ನಷ್ಟಕ್ಕೆ ಸೂಕ್ತ ಪರಿಹಾರವನ್ನು ಕೂಡ ಸರ್ಕಾರ ನೀಡುತ್ತಿಲ್ಲ ಎಂದು ಹರೀಶ್ ಬೋಪಣ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ತಕ್ಷಣ ವನ್ಯಜೀವಿಗಳ ದಾಳಿ ತಡೆಗೆ ಶಾಶ್ವತ ಯೋಜನೆಯೊಂದನ್ನು ಸರ್ಕಾರ ರೂಪಿಸಬೇಕು, ಜಿಲ್ಲಾಡಳಿತ ಈ ಕುರಿತು ಸಮಗ್ರ ವರದಿಯೊಂದನ್ನು ಸಿದ್ಧಪಡಿಸಬೇಕು ಮತ್ತು ಬೆಳೆ ನಷ್ಟವನ್ನು ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದಾರೆ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss