ಉಕ್ರೇನ್ ಯುದ್ಧಕದನದಲ್ಲಿ ಸಾವನ್ನಪ್ಪಿದ್ದ ನವೀನ್ ಮನೆಗೆ ರಾಜ್ಯಪಾಲರ ಭೇಟಿ

ಹೊಸದಿಗಂತ ವರದಿ, ಹಾವೇರಿ(ರಾಣೇಬೆನ್ನೂರ) :

ಉಕ್ರೇನ್ ಮತ್ತು ರಷ್ಯಾ ಯುದ್ಧದ ಸಂದರ್ಭದಲ್ಲಿ ಸಾವನ್ನಪ್ಪಿದ್ದ ತಾಲೂಕಿನ ಚಳಗೇರಿ ಗ್ರಾಮದ ವೈದ್ಯಕೀಯ ವಿದ್ಯಾರ್ಥಿ ನವೀನ ಮನೆಗೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಗುರುವಾರ ಭೇಟಿ ನೀಡಿ ಮೃತ ನವೀನ ಅವರ ಭಾವಚಿತ್ರಕ್ಕೆ ಶ್ರದ್ಧಾಂಜಲಿಯನ್ನು ಸಲ್ಲಿಸಿ ನಂತರ ನವೀನ್ ಅವರ ತಂದೆ ತಾಯಿಗೆ ಸಾಂತ್ವನ ಹೇಳಿ ಧೈರ್ಯ ತುಂಬಿದರು.
ಈ ಸಮಯದಲ್ಲಿ ರಾಜ್ಯಪಾಲರಿಗೆ ನವೀನ ಪೋಷಕರು ಶರಬತ್ ನೀಡಿ ಆತಿಥ್ಯ ಮಾಡಿದರು. ನಂತರ ರಾಜ್ಯಪಾಲರು ಸಾಂತ್ವನ ಹೇಳಿ ತೆರಳುವ ಸಂದರ್ಭದಲ್ಲಿ ಅತ್ಯಂತ ಸಂಸ್ಕಾರಯುತವಾಗಿ ನವೀನ್ ಕುಟುಂಬವರ್ಗದವರಿಗೂ ಮತ್ತು ನೆರೆದ ಎಲ್ಲರಿಗೂ ಅತೀ ವಿನಯದಿಂದ ತಲೆಬಾಗಿ ಕೈಮುಗಿದ ದೃಶ್ಯ ನಿಜಕ್ಕೂ ನಮ್ಮ ದೇಶದ ಸಂಸ್ಕೃತಿ ಸಂಸ್ಕಾರವನ್ನು ಎತ್ತಿ ಹಿಡಿಯುವಂತಿತ್ತು.
ರಾಜ್ಯಪಾಲರ ನಿರ್ಗಮನದ ನಂತರ ನವೀನ ತಂದೆ ಶೇಖರಪ್ಪ ಗ್ಯಾನಗೌಡ್ರ ಸುದ್ದಿಗಾರರೊಂದಿಗೆ ಮಾತನಾಡಿ, ಪ್ರತಿಭಾವಂತ ಮಗ ನವೀನ್ ನಿಧನವಾಗಿದ್ದು ಶೋಚನೀಯ ಸಂಗತಿ ಎಂದು ಅವರು ವಿಷಾಧವ್ಯಕ್ತಪಡಿಸಿದರು ಎಂದರು.
ಮಗನ ದೇಹ ಬಂದ ದಿನ ಅವರು ಮಧ್ಯಪ್ರದೇಶದಲ್ಲಿದ್ದ ಕಾರಣ ಏರಪೋರ್ಟ್‌ಗೆ ಬರಲು ಸಾಧ್ಯವಾಗಲಿಲ್ಲ. ನಿಮ್ಮ ಕಷ್ಟಸುಖಗಳಿಗೆ ಸದಾ ಸ್ಪಂದಿಸುವೆ. ರಾಜ್ಯಪಾಲ ಹುದ್ದೆ ಮುಗಿದರೂ ಸದಾ ನಿಮ್ಮೊಂದಿಗಿರುವೆ. ಮೈಸೂರಿನಲ್ಲಿ ಸೆಪ್ಟೆಂಬರ್ ತಿಂಗಳಿನಲ್ಲಿ ನವೀನ ಸಹೋದರನಿಗೆ ಗೋಲ್ಡ್ ಮೆಡಲ್‌ನ್ನು ತಾವೇ ಪ್ರದಾನ ಮಾಡಿದ್ದನ್ನು ಸಹ ಅವರು ಸ್ಮರಿಸಿಕೊಂಡರು ಎಂದರು.
ಚಳಗೇರಿ ಇದೊಂದು ಒಳ್ಳೆಯ ಗ್ರಾಮ ಅಲ್ಲಿ ಅನೇಕ ಹಿರಿಯರು ಸ್ವಾಮೀಜಿಗಳು ಇದ್ದಾರೆ. ಈ ಗ್ರಾಮದಲ್ಲಿ ಒಳ್ಳೆಯ ವಾತಾವರಣವಿದೆ. ಇಂತಹ ಗ್ರಾಮದಲ್ಲಿ ನವೀನ ಜನಿಸಿದ್ದ ಆತನ ಪುಣ್ಯ ಅದೇ ಕಾರಣಕ್ಕೇ ಏನೋ ದೇವರು ಆತನನ್ನು ಬೇಗ ಕರೆದುಕೊಂಡ ಅನಿಸುತ್ತೆ ಅಂತಾ ಅವರು ಬೇಸರ ವ್ಯಕ್ತಪಡಿಸಿದರು ಎಂದು ವಿವರಿಸಿದರು.
ಅಂತಿಮವಾಗಿ ನವೀನ್ ಅಗಲಿಕೆ ಬೇಸರದ ಸಂಗತಿಯಾದರೂ ರಾಜ್ಯ ಹಾಗೂ ದೇಶ ನಿಮ್ಮೊಂದಿಗೆ ಇರುತ್ತದೆ ಎಂದು ರಾಜ್ಯಪಾಲರು ತಮಗೆ ಧೈರ್ಯ ತುಂಬಿದರು ಎಂದು ಶೇಖರಗೌಡ ಹೇಳಿದರು.
ನವೀನ ತಾಯಿ ವಿಜಯಲಕ್ಷ್ಮಿ, ಗ್ರಾಮದ ಕಟಗಿಹಳ್ಳಿಮಠದ ಡಾ.ಮಹಾಂತೇಶ ಸ್ವಾಮಿಗಳು, ಶಾಸಕರ ಪತ್ನಿ ಮಂಗಳಗೌರಿ ಪೂಜಾರ, ಜಿಲ್ಲಾಧಿಕಾರಿ ಎಸ್.ಬಿ.ಶೆಟ್ಟೆಣ್ಣನವರ, ಹೆಚ್ಚುವರಿ ಎಸ್‌ಪಿ ವಿಜಯಕುಮಾರ ಸಂತೋಷ ಸೇರಿದಂತೆ ಮತ್ತಿತರರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!