Wednesday, August 17, 2022

Latest Posts

ತಂತ್ರಜ್ಞಾನ ಕಂಪನಿಗಳ ಜತೆಗೂಡಿ ಸರ್ಕಾರದ ‘ರೈತ ಮಾಹಿತಿ ಕೊಯ್ಲು’: ಅವಕಾಶಗಳೂ ಇವೆ, ಆತಂಕವೂ…

ಹೊಸದಿಗಂತ ಆನ್‌ಲೈನ್ ಡೆಸ್ಕ್:

ಕೃಷಿಕರಿಗೆ ಮಾರುಕಟ್ಟೆ ವಿಸ್ತರಿಸುವುದಾದರೆ ಅದಕ್ಕೆ ಮೊದಲನೆಯದಾಗಿ ಬೇಕಿರುವುದೇನು? ಭಾರತದ ಬೃಹತ್ ಕೃಷಿ ಸಮುದಾಯದ ಕೃಷಿಕಾರ್ಯಗಳ ಬಗ್ಗೆ ಹಲವು ಆಯಾಮಗಳಲ್ಲಿ ನಿಖರ ಅಂಕಿಅಂಶಗಳು ಬೇಕು. ಆ ಬಲದಲ್ಲಿ ಮಾತ್ರ ಮುಂದಿನ ಕಾರ್ಯಯೋಜನೆ ಸಾಧ್ಯವಾಗಬಲ್ಲದು.
ಇದಕ್ಕಾಗಿಯೇ ಈಗ ಕೇಂದ್ರ ಸರ್ಕಾರವು ತಂತ್ರಜ್ಞಾನದ ದೈತ್ಯ ಕಂಪನಿಗಳಾದ ಅಮೇಜಾನ್, ಮೈಕ್ರೋಸಾಫ್ಟ್ ಮತ್ತು ಸಿಸ್ಕೋ ಜತೆಗೆ ಒಡಂಬಡಿಕೆ ಮಾಡಿಕೊಂಡು ರೈತರಿಂದ ಡೇಟಾ ಸಂಗ್ರಹ ಕಾರ್ಯವನ್ನು ಯೋಜಿಸುತ್ತಿದೆ.
ಹಳೆಯ ಕೃಷಿ ಉದ್ಯಮವನ್ನು ಪರಿವರ್ತಿಸುವ ಉದ್ದೇಶವನ್ನು ಸರ್ಕಾರ ಹೊಂದಿದ್ದು, ಕಂಪನಿಗಳು ಕೈಜೋಡಿಸಿವೆ. ವಿಶ್ವದ ಎರಡನೇ ಅತಿಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರದಲ್ಲಿ ಆಹಾರ ಭದ್ರತೆಯನ್ನು ಖಚಿತಪಡಿಸಿಕೊಳ್ಳುವುದು ಮೋದಿ ಸರ್ಕಾರದ ಆದ್ಯತೆ.
ಇದರ ಭಾಗವಾಗಿಯೇ 2004 ರಿಂದ ಕೃಷಿ ಅಂಕಿಅಂಶಗಳನ್ನು ಸಂಗ್ರಹಿಸಲಾಗುತ್ತದೆ. ಬೆಳೆ ಉತ್ಪಾದನೆ, ಮಣ್ಣಿನ ಗುಣಮಟ್ಟ ಮತ್ತು ಭೂಮಿಯ ಹಿಡುವಳಿಯಂತಹ ಮಾಹಿತಿಯಿಂದ ನಿರ್ಮಿಸಲಾದ ಆಪ್ ಹಾಗೂ ಪರಿಕರಗಳಿಂದ ಡೇಟಾ ಸಂಗ್ರಹಿಸಲಾಗುತ್ತದೆ. ಇಳುವರಿ ಹೆಚ್ಚಿಸಲು ಇದು ರೈತರಿಗೂ ಸಹಾಯವಾಗಲಿದೆ ಎನ್ನುವುದು ಪ್ರಧಾನಿ ಮೋದಿ ಅವರ ವಿಚಾರವಾಗಿದೆ.
ಜಿಯೋ ಪ್ಲಾಟ್‌ಫಾರ್ಮ್ಸ್ ಲಿಮಿಟೆಡ್, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಐಟಿಸಿ ಲಿಮಿಟೆಡ್ ಕೂಡ ಕಾರ್ಯಕ್ರಮದಲ್ಲಿ ಭಾಗಿಯಾಗಿದೆ. ಗ್ರಾಮೀಣ ಆದಾಯವನ್ನು ಹೆಚ್ಚಿಸಲು, ಆಮದುಗಳನ್ನು ಕಡಿತಗೊಳಿಸಲು, ಆಹಾರ ಪೋಲಾಗುವುದನ್ನು ಕಡಿಮೆ ಮಾಡಲು ಮತ್ತು ಅಂತಿಮವಾಗಿ ಬ್ರೆಜಿಲ್, ಯುಎಸ್ ಮತ್ತು ಯೂರೋಪಿಯನ್ ಯೂನಿಯನ್‌ನಂತಹ ರಫ್ತುದಾರರೊಂದಿಗೆ ಸ್ಪರ್ಧಿಸಲು ಸರ್ಕಾರ ಈ ಯೋಜನೆ ಮಾಡಿದೆ.

ಬರುತ್ತಿವೆ ಟೀಕೆಗಳು
ಆದರೆ ಹೀಗೆ ದೊಡ್ಡ ಕಂಪನಿಗಳನ್ನು ಬಿಟ್ಟುಕೊಳ್ಳುವುದು ಭಾರತದಲ್ಲಿ ಬೆಳೆಯುತ್ತಿರುವ ದೇಶೀಯ ಕೃಷಿ-ತಂತ್ರಜ್ಞಾನ ಕಂಪನಿಗಳಿಗೆ ಹೊಡೆತ ಬಿದ್ದಂತಾಗುವುದಿಲ್ಲವೇ ಎಂಬ ಆತಂಕದ ಪ್ರಶ್ನೆಯೂ ಈಗ ಎದ್ದಿದೆ. ಏಕೆಂದರೆ ಅರ್ನೆಸ್ಟ್ ಮತ್ತು ಯಂಗ್ ಅಂದಾಜಿನ ಪ್ರಕಾರ 2025 ರವೇಳೆಗೆ ಸುಮಾರು 24 ಶತಕೋಟಿ ಡಾಲರ್ ಆದಾಯ ಗಳಿಸಬಹುದಾದ ಅಗ್ರಿ ಟೆಕ್ ವಲಯ ಈವರೆಗೆ ಕೇವಲ ಶೇ.1% ಮಾತ್ರ ತನ್ನ ಇರುವಿಕೆಯನ್ನು ಕಂಡುಕೊಂಡಿದೆ.
ಮೈಕ್ರೊಸಾಫ್ಟ್ ಈಗಾಗಲೇ 100 ಹಳ್ಳಿಗಳಲ್ಲಿ ಕೃತಕ ಬುದ್ಧಿಮತ್ತೆ ಮತ್ತು ಯಂತ್ರ ಕಲಿಕೆಗಳನ್ನು ಉಪಯೋಗಿಸಿಕೊಂಡು ತಂತ್ರಜ್ಞಾನ ವೇದಿಕೆ ಸಿದ್ಧಪಡಿಸುತ್ತಿದೆ. ಅಮೆಜಾನ್ ಅದಾಗಲೇ ರೈತರಿಗೆ ಕೆಲವು ಆ್ಯಪ್ ಗಳ ಮೂಲಕ ಮಾಹಿತಿ ಒದಗಿಸುತ್ತ ಅಲ್ಲಿಂದ ಅವರ ಮಾಹಿತಿ ಸಂಗ್ರಹ ಮಾಡುತ್ತಿದೆ.
ರೈತರ ಬೆಳೆಗಳು ಮತ್ತು ಬೆಳೆಯುತ್ತಿರುವ ನಿಖರ ವಿಧಾನಗಳ ಬಗ್ಗೆ ವಿಸ್ತೃತ ಮಾಹಿತಿಕೋಶ ಹೊಂದಿದ್ದರಷ್ಟೇ ಜಾಗತಿಕವಾಗಿ ಸ್ಪರ್ಧಿಸಲು ಸಾಧ್ಯ ಎಂಬುದರಲ್ಲಂತೂ ಯಾರಿಗೂ ಸಂಶಯವಿಲ್ಲ. ಆದರೆ ತಂತ್ರಜ್ಞಾನ ದೈತ್ಯರು ಭಾರತೀಯ ರೈತರ ಮಾಹಿತಿಗಳನ್ನು ಹೇಗೆಲ್ಲ ಉಪಯೋಗಿಸಿಕೊಂಡಾವು ಎಂಬ ಬಗ್ಗೆ ಆತಂಕ ಇದ್ದೇ ಇದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!