ಗ್ರಾಮ ಒನ್- ಹೀಗೆ ತೆರೆದುಕೊಂಡಿದೆ ಬೊಮ್ಮಾಯಿ ಸರ್ಕಾರದ ವಿಷನ್

ಹೊಸದಿಗಂತ ಡಿಜಿಟಲ್ ಡೆಸ್ಕ್

ಬೆಂಗಳೂರು: ಸರಕಾರದ ಸೇವೆಗಳನ್ನು ಜನರ ಮನೆಬಾಗಿಲಿಗೆ ತಲುಪಿಸುವ ಆಶಯದೊಂದಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ರಾಜ್ಯದ 12 ಜಿಲ್ಲೆಗಳಲ್ಲಿ 3026 ಗ್ರಾಮ ಒನ್ ಕೇಂದ್ರಗಳಿಗೆ ಜನವರಿ 26ರಂದು ಚಾಲನೆ ನೀಡಿದ್ದರು. ಈ ಗ್ರಾಮ ಒನ್ ಕಾರ್ಯನಿರ್ವಹಣೆ ಕುರಿತು ಪರಿಶೀಲನೆ ನಡೆಸಲು ಮುಖ್ಯಮಂತ್ರಿಯವರು ಶನಿವಾರ ಈ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಹಾಗೂ ಗ್ರಾಮ ಒನ್ ಆಪರೇಟರರೊಂದಿಗೆ ನಡೆಸಿದ ಸಂವಾದದಲ್ಲಿ, ಇದು ಕಾರ್ಯನಿರ್ವಹಿಸುವ ಬಗೆ ತೆರೆದುಕೊಂಡಿದೆ.

ಬೊಮ್ಮಾಯಿ ವಿವರಣೆಯಲ್ಲಿ ತೆರೆದುಕೊಂಡ ಗ್ರಾಮ ಒನ್ ರೂಪುರೇಷೆ

  • ರಾಜ್ಯದಲ್ಲಿ ಸುಮಾರು 4 ಲಕ್ಷ ಬಿಪಿಎಲ್ ಮತ್ತು ಎಪಿಎಲ್ ಕಾರ್ಡ್‌ಗಳಿಗೆ ಮಂಜೂರಾತಿ ನೀಡಲಾಗಿದೆ. ಇವುಗಳನ್ನು ಗ್ರಾಮ ಒನ್ ಕೇಂದ್ರಗಳ ಮೂಲಕ ವಿತರಿಸಲಾಗುವುದು
  • ಗ್ರಾಮ ಒನ್ ಸೇವಾ ಕೇಂದ್ರದ ಮೂಲಕ ಸರಕಾರ ತನ್ನ ಅಧಿಕಾರ ಮತ್ತು ಜವಾಬ್ದಾರಿ ಆಪರೇಟರ್ ಗಳಿಗೆ ವಹಿಸಲಾಗಿದೆ. ಜನರ ಬಳಿ ಸೌಜನ್ಯದಿಂದ ವರ್ತಿಸಿ, ಅವರ ಸಮಸ್ಯೆಗಳನ್ನು ಆಲಿಸಿ, ಪರಿಹಾರವನ್ನು ನೀಡಬೇಕೆಂದು ಮುಖ್ಯಮಂತ್ರಿಗಳು ಕಿವಿಮಾತು ಹೇಳಿದರು.
  • ಜನರು ಕಚೇರಿಗೆ ಅಲೆದಾಡುವುದನ್ನು ತಪ್ಪಿಸಿ ತ್ವರಿತವಾಗಿ ಸರಕಾರದ ಸೇವೆಯನ್ನು ಪೂರೈಸಬೇಕು. ಮಾಹಿತಿ ಕೊರತೆ ಇದ್ದರೆ ಸ್ಪಷ್ಟೀಕರಣ ನೀಡಬೇಕು. ಸೇವೆ ಪೂರೈಸಲು ಕಾನೂನಾತ್ಮಕವಾಗಿ ಸಾಧ್ಯವಾಗದಿದ್ದಲ್ಲಿ ಅರ್ಜಿಯ ತಿರಸ್ಕಾರಕ್ಕೆ ಸಕಾರಣವನ್ನು ನೀಡಬೇಕು. ತಿರಸ್ಕೃತ ಅರ್ಜಿಗಳ ಸಂಖ್ಯೆಯನ್ನು ಕಡಿಮೆಗೊಳಿಸಲು ಉನ್ನತ ಅಧಿಕಾರಿಗಳೊಂದಿಗೆ ಚರ್ಚಿಸಿ ಅವುಗಳನ್ನು ಬಗೆಹರಿಸಬೇಕು.
  • ಅರ್ಜಿಗಳು ಕಡಿಮೆ ಬಂದರೆ, ಅಲ್ಲಿ ಪ್ರಚಾರ ಹಾಗೂ ಸ್ಪಂದನೆಯ ಕೊರತೆಯನ್ನು ಬಿಂಬಿಸುತ್ತದೆ. ಹಿರಿಯ ನಾಗರಿಕರು, ಬಡವರು ಹಾಗೂ ಅಂಗವಿಕಲರಿಗಿರುವ ಕಾರ್ಯಕ್ರಮಗಳಿಗೆ ಹೆಚ್ಚು ಪ್ರಾಶಸ್ತ್ಯ ನೀಡಿ ಸೇವೆ ಒದಗಿಸಬೇಕು.

ಗ್ರಾಮ ಒನ್ ಕಾರ್ಯನಿರ್ವಾಹಕರಿಗೆ ಬಹುಮಾನದ ಉತ್ತೇಜನ

ಗ್ರಾಮ ಒನ್ ಕಂಪ್ಯೂಟರ್ ಆಪರೇಟರ್ ಗಳು ತಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಿಕೊಳ್ಳಲು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ 12 ತಿಂಗಳ ಅವಧಿಯಲ್ಲಿ ಪ್ರತಿ ವಾರ ಮೂರು ಉತ್ತಮ ಆಪರೇಟರ್ ಗಳನ್ನು ಆಯ್ಕೆ ಮಾಡಿ ಪ್ರಥಮ ಬಹುಮಾನ ₹ 10 ಸಾವಿರ, ದ್ವಿತೀಯ ಬಹುಮಾನ ₹ 7 ಸಾವಿರ ಹಾಗೂ ತೃತೀಯ ಬಹುಮಾನ ₹ 5 ಸಾವಿರವನ್ನು ಇ-ಆಡಳಿತ ಇಲಾಖೆ ವತಿಯಿಂದ ನೀಡಲಾಗುವುದು.  ಜಿಲ್ಲಾಮಟ್ಟದಲ್ಲಿ ಉತ್ತಮ ಕಾರ್ಯಕ್ಷಮತೆಯನ್ನು ಪ್ರದರ್ಶಿಸಿದ ಜಿಲ್ಲೆಗೆ ತಿಂಗಳಿಗೊಮ್ಮೆ ₹ 1ಲಕ್ಷ ಬಹುಮಾನವನ್ನು ನೀಡಲಾಗುವುದು ಎಂದು ತಿಳಿಸಿದರು.

ಗ್ರಾಮ ಒನ್ ಕಾರ್ಯನಿರ್ವಾಹಕರ ಅನುಭವಗಾಥೆ

ಸುಮಾರು ಒಂದು ತಾಸು ಕಾಲ ಗ್ರಾಮ ಒನ್ ಆಪರೇಟರುಗಳ ಅನುಭವ, ಅವರ ಕಾರ್ಯನಿರ್ವಹಣೆ, ಎದುರಿಸುತ್ತಿರುವ ತೊಡಕುಗಳ ಕುರಿತು ಮಾಹಿತಿ ಪಡೆದರು. ಗ್ರಾಮ ಒನ್ ಸೇವಾ ಕೇಂದ್ರ, ಅಧಿಕಾರದ ಕೇಂದ್ರವಲ್ಲ ಎಂದು ಕಿವಿಮಾತು ಹೇಳಿ ಅವರ ಜವಾಬ್ದಾರಿಯನ್ನು ಮನವರಿಕೆ ಮಾಡಿಕೊಟ್ಟರು. ಈ ಸಂದರ್ಭದಲ್ಲಿ ಹಲವು ಪ್ರತಿಕ್ರಿಯೆಗಳು ಹರಿದುಬಂದವು.

  • ಹಲವು ಯುವಕರು, ನಿರುದ್ಯೋಗಿಯಾಗಿದ್ದ ತಮಗೆ ಸ್ವಂತ ಊರಿನಲ್ಲೇ ಗ್ರಾಮ ಒನ್ ಆಪರೇಟರ್ ಆಗಿ ಕಾರ್ಯನಿರ್ವಹಿಸಲು ಅವಕಾಶ ದೊರೆತಿದ್ದಕ್ಕೆ ಹರ್ಷ ವ್ಯಕ್ತಪಡಿಸಿದರು.
  • ಗ್ರಾಮ ಒನ್ ಆಪರೇಟರುಗಳಾದ ಹಾವೇರಿಯ ಸಂಜೀವ ಕನವಳ್ಳಿ ಮತ್ತು ಬಳ್ಳಾರಿ ಜಿಲ್ಲೆಯ ಸುರೇಶ ಅವರು ಅಂಗವಿಕಲರು. ಈ ಯೋಜನೆಯಿಂದ ಅಂಗವಿಕಲ ಫಲಾನುಭವಿಗಳಿಗೆ ವಿವಿಧ ಸರಕಾರಿ ಕಚೇರಿಗಳ ಕೆಲಸಗಳಿಗೆ ಓಡಾಡುವುದು ತಪ್ಪಿದೆ ಎಂದು ಹರ್ಷ ವ್ಯಕ್ತಪಡಿಸಿದರು.
  • ಬೆಳಗ್ಗೆ 8ರಿಂದ ರಾತ್ರಿ 8ರ ವರೆಗೂ ತೆರೆದಿರುವುದರಿಂದ ತಮ್ಮ ಕೆಲಸಕ್ಕೆ ತೆರಳುವ ಮುನ್ನ ಅಥವಾ ಕೆಲಸ ಮುಗಿಸಿ ಹಿಂದಿರುಗಿದ ನಂತರವೂ ಅರ್ಜಿ ಸಲ್ಲಿಸಲು ಸಾಧ್ಯವಾಗುವುದರಿಂದ, ಗ್ರಾಮಸ್ಥರಿಗೆ ಅನುಕೂಲವಾಗಿದೆ ಎನ್ನುವ ಅನುಭವವನ್ನು ಬೆಳಗಾವಿಯ ಬಸವರಾಜ ಪೂಜಾರಿ ಮತ್ತಿತರರು ತೆರೆದಿಟ್ಟರು.
  • ತುಮಕೂರು ಜಿಲ್ಲೆಯ ಯುವತಿಯೊಬ್ಬರು ಮಾತನಾಡಿ, ನಮ್ಮ ಗ್ರಾಮದಲ್ಲಿ ಮಧ್ಯವರ್ತಿಗಳ ಮೇಲೆ ಜನ ಹೆಚ್ಚಾಗಿ ಅವಲಂಬಿಸಿದ್ದರು. ಈಗ ನೇರವಾಗಿ ತಮ್ಮ ಗ್ರಾಮದಲ್ಲೇ ಅರ್ಜಿ ಸಲ್ಲಿಸಲು, ಸೌಲಭ್ಯ ಪಡೆಯಲು ಅವರಿಗೆ ಅನುಕೂಲವಾಗಿದೆ. ಎಳೆ ಮಕ್ಕಳ ತಾಯಂದಿರು ತಮ್ಮ ಅನುಕೂಲವಾದ ಸಮಯದಲ್ಲಿ ಭೇಟಿ ನೀಡಿ ಗ್ರಾಮ ಒನ್ ಸೇವೆ ಪಡೆಯುತ್ತಿದ್ದಾರೆ ಎಂದು ವಿವರಿಸಿದರು.
  • ಸರಕಾರದ ಸೇವೆಗಳನ್ನು ಪಡೆಯಲು ಜನರು ನಡೆಸುತ್ತಿದ್ದ ಓಡಾಟ, ವಿಳಂಬವನ್ನು ಹತ್ತಿರದಿಂದ ನೋಡಿದ್ದೇನೆ. ಗ್ರಾಮ ಒನ್ ಯೋಜನೆ ಈ ಸಮಸ್ಯೆಗೆ ಉತ್ತಮ ಪರಿಹಾರ ಒದಗಿಸಿದೆ ಎನ್ನುವ ಉಡುಪಿ ಜಿಲ್ಲೆಯ ಶ್ರೀನಿವಾಸ ನಾಯಕ್, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ. ಈಗ ಗ್ರಾಮ ಒನ್ ಆಪರೇಟರ್.
  • ಬೀದರ್ ಜಿಲ್ಲೆಯಲ್ಲಿ ಲಿಂಗತ್ವ ಅಲ್ಪಸಂಖ್ಯಾತರಿಗೂ ಗ್ರಾಮ ಒನ್ ಫ್ರಾಂಚೈಸಿ ನೀಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿಗಳು ವಿವರಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!