Monday, August 8, 2022

Latest Posts

ಗ್ರಾಂಡ್ ಅಲಯನ್ಸ್-ಮೈನರ್ ಪಾರ್ಟ್ನರ್: ದೇಶದಲ್ಲೀಗ ಕಾಂಗ್ರೆಸ್‌ಗೆ ಉಳಿದಿರುವ ದಾರಿ!

ಹೊಸದಿಗಂತ ಆನ್ ಲೈನ್ ಡೆಸ್ಕ್:

ದೇಶದಲ್ಲಿ ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆಯಲಿ, ಕಾಂಗ್ರೆಸ್ ಒಂದೋ ‘ಗ್ರಾಂಡ್ ಅಲಯನ್ಸ್ ’ ಒಂದು ಭಾಗ ಅಥವಾ ಪ್ರಮುಖ ಪ್ರಾದೇಶಿಕ ಪಕ್ಷವೊಂದರ ಕಿರಿಯ ಮಿತ್ರನಾಗಿ ಇರಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆ.ಇದು ಕಾಂಗ್ರೆಸ್ ನಾಯಕರು ಮತ್ತು ಕಾರ್ಯಕರ್ತರ ಪಾಳಯದಲ್ಲೀಗ ಚಿಂತೆ ಮತ್ತು ಭವಿಷ್ಯದ ಕುರಿತಂತೆ ಪ್ರಶ್ನಾರ್ಥಕ ಚಿಹ್ನೆಯನ್ನು ಹುಟ್ಟುಹಾಕಿದೆ.ಮತ್ತೆ ಕಾಂಗ್ರೆಸ್ ಅಧ್ಯಕ್ಷರಾಗಲು ರಾಹುಲ್ ಗಾಂಧಿ ನಡೆಸುತ್ತಿರುವ ಎಲ್ಲ ಕಸರತ್ತುಗಳ ಹೊರತಾಗಿಯೂ ಪಕ್ಷದ ಇಳಿಜಾರು ಪಯಣ ವೇಗವಾಗಿಯೇ ಸಾಗುತ್ತಿರುವಂತಿದೆ .
ಈಗ ೫ ರಾಜ್ಯ ವಿಧಾನಸಭಾ ಚುನಾವಣೆ ಎದುರಾಗಿದೆ.ಗ್ರಾಂಡ್ ಓಲ್ಡ್ ಪಾರ್ಟಿ ಎಂದು ಗುರುತಿಸಿಕೊಂಡಿರುವ ಕಾಂಗ್ರೆಸ್ ತಮಿಳ್ನಾಡಿನಲ್ಲಿ ಒಂದು ಕಾಲದಲ್ಲಿ ಆಡಳಿತ ನಡೆಸಿದ ಪಕ್ಷವಾಗಿದ್ದರೆ, ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷ ಡಿಎಂಕೆ ನೇತೃತ್ವದ ಮೈತ್ರಿಕೂಟದ ಒಂದು ಕಿರಿಯ ಪಾಲುದಾರನಾಗಿ ಇರಬೇಕಾಗಿ ಬಂದಿದೆ. ೨೩೪ ಸದಸ್ಯಬಲದ ತಮಿಳ್ನಾಡು ವಿಧಾನಸಭೆಯಲ್ಲಿ ಕಾಂಗ್ರೆಸಿಗೆ ಡಿಎಂಕೆ ಬಿಟ್ಟುಕೊಟ್ಟ ಸ್ಥಾನಗಳ ಸಂಖ್ಯೆ ಕೇವಲ ೨೫. ೨೦೨೦ರ ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಆರ್‌ಜೆಡಿ ನೇತೃತ್ವದ ಮೈತ್ರಿಕೂಟದಿಂದ ೭೦ ಸ್ಥಾನಗಳಲ್ಲಿ ರ್ಸ್ಪಸಲು ಅವಕಾಶ ಪಡೆದರೂ ಕೇವಲ ೧೯ ಸ್ಥಾನಗಳಲ್ಲಿ ಮಾತ್ರ ಗೆಲ್ಲಲು ಸಾಧ್ಯವಾಗಿರುವುದು ತಮಿಳ್ನಾಡಿನಲ್ಲಿ ಹೆಚ್ಚಿನ ಸೀಟು ಕೇಳುವ ಕಾಂಗ್ರೆಸ್‌ನ ಚೌಕಾಶಿಯ ಅವಕಾಶವನ್ನು ಇನ್ನಷ್ಟು ಕುಬ್ಜಗೊಳಿಸಿದೆ.
ಅಸ್ಸಾಮಿನಲ್ಲಿ ೨೦೧೬ರಲ್ಲಿ ಮತದಾರರು ಕಾಂಗ್ರೆಸನ್ನು ಅಧಿಕಾರದಿಂದ ಇಳಿಸಿ ಬಿಜೆಪಿಯನ್ನು ಅಧಿಕಾರಕ್ಕೇರಿಸಿದರು. ಇದೀಗ ಕಾಂಗ್ರೆಸ್ ಅಲ್ಲಿ ‘ಮಹಾಜೋತ್’ಹೆಸರಿನ ಮೈತ್ರಿಕೂಟ ಕಟ್ಟಿಕೊಂಡಿದೆ.ಮುಸ್ಲಿಂ ಮತೀಯವಾದಿ ಗುಂಪಾದ ಎಐಯುಡಿಎಫ್ ಜೊತೆ ಮೈತ್ರಿ ಮಾಡಿಕೊಂಡಿದೆ. ಅಲ್ಲಿ ಕಾಂಗ್ರೆಸ್ ಪರಿಸ್ಥಿತಿ ಎಷ್ಟು ಶೋಚನೀಯ ಎಂದರೆ ಈ ಕೋಮುವಾದಿ ಸಂಘಟನೆಗೆ ಅನೇಕ ಸ್ಥಾನಗಳನ್ನು ಬಿಟ್ಟುಕೊಡಬೇಕಾಗಿ ಬಂದಿರುವುದು ಕಾಂಗ್ರೆಸ್‌ನಲ್ಲೇ ಒಡಕನ್ನು ಸೃಷ್ಟಿಸಿದೆ. ರಾಷ್ಟ್ರೀಯ ಮಹಿಳಾ ಕಾಂಗ್ರೆಸ್‌ನ ಅಧ್ಯಕ್ಷೆಯೇ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಕೇರಳದಲ್ಲಿ ಕೂಡಾ ಎಡರಂಗ ವಿರುದ್ಧ ಉಂಟಾಗಿರುವ ಜನಾಭಿಪ್ರಾಯದ ಲಾಭ ಗಳಿಸುವಲ್ಲಿ ಯುಡಿಎಫ್ ವಿಶ್ವಾಸದ ಕೊರತೆಯಲ್ಲಿದೆ.ಈ ಬಾರಿ ಯುಡಿಎಫ್ ಮೈತ್ರಿಕೂಟದ ನೇತೃತ್ವ ವಹಿಸಿಯೂ ಕಾಂಗ್ರೆಸ್‌ನ ತಳಪಾಯ ಅಲುಗಾಡಲಾರಂಭಿಸಿದೆ.ಅಲ್ಲಿ ಆಳುವ ಎಡರಂಗದಿಂದ ತೀವ್ರ ಸವಾಲು ಎದುರಿಸಬೇಕಾಗಿ ಬಂದಿರುವ ಕಾಂಗ್ರೆಸ್‌ಗೆ ಹಿಂದಿನ ಚರ್ಚ್ ಬೆಂಬಲಿತ ಕೆಲವು ಮಿತ್ರಪಕ್ಷಗಳೇ ಕೈಕೊಡಲಾರಂಭಿಸಿವೆ. ಜೊತೆಗೆ ವರ್ಚಸ್ವೀ ನಾಯಕತ್ವದ ಕೊರತೆಯೂ ಎದುರಾಗಿದೆ. ಸ್ವತಃ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಪ್ರತಿನಿಧಿಸುತ್ತಿರುವ ವಯನಾಡಿನಲ್ಲೇ ನಾಲ್ವರು ರಾಜ್ಯಮಟ್ಟದ ಪ್ರಮುಖ ಕಾಂಗ್ರೆಸ್ ನಾಯಕರು ರಾಜೀನಾಮೆ ನೀಡಿದ್ದಾರೆ. ಇವರು ಬುಡಗಟ್ಟು ಮತ್ತು ಹಿಂದುಳಿದ ವರ್ಗಗಳಿಗೆ ಸೇರಿದವರೆಂಬುದು ಗಮನಾರ್ಹ.
ಚುನಾವಣೆ ಎದುರಿಸಲಿರುವ ಪಶ್ಚಿಮ ಬಂಗಾಳದಲ್ಲಿ ಇದ್ದುದರಲ್ಲಿ ಅತಿಹೆಚ್ಚು ಅಂದರೆ ೯೨ ಸ್ಥಾನಗಳನ್ನು ಮಹಾಮೈತ್ರಿಕೂಟದ ನಾಯಕತ್ವ ವಹಿಸಿರುವ ಸಿಪಿಎಂನಿಂದ ಪಡೆಯಲು ಶಕ್ತವಾಗಿದೆ.ಆದರೆ ಅಲ್ಲಿ ಆಳುವ ಟಿಎಂಸಿ ಮತ್ತು ಬಿಜೆಪಿ ನಡುವೆಯೇ ಪ್ರಮುಖ ಸ್ಪರ್ಧೆ ಈ ಬಾರಿ ನಡೆಯಲಿದ್ದು, ಸಿಪಿಎಂ , ಕಾಂಗ್ರೆಸ್ ಒಳಗೊಂಡ ಮಹಾಮೈತ್ರಿಕೂಟ ಮೂರನೇ ಸ್ಥಾನಕ್ಕಷ್ಟೇ ಹೋರಾಡುವಂತಾಗಿದೆ.
ಪಾಂಡಿಚೇರಿಯಲ್ಲಿ ಮೈತ್ರಿಕೂಟದ ಪ್ರಮುಖ ಪಾಲುದಾರನಾಗಿದ್ದಾಗ್ಯೂ ತನ್ನದೇ ಶಾಸಕರ ರಾಜೀನಾಮೆಯಿಂದ ಸರಕಾರ ಬಿದ್ದುಹೋಗುವಂತಾಗಿ ಇದೀಗ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಎದುರಿಸುವಂತಾಗಿದೆ.ಮೂಲಗಳೆನ್ನುವಂತೆ, ಸ್ವತಃ ಮಿತ್ರ ಪಕ್ಷ ಡಿಎಂಕೆಗೇ ಈ ಬಾರಿ ಪಾಂಡಿಚೇರಿಯಲ್ಲಿ ಕಾಂಗ್ರೆಸ್ ೨೦೧೬ರಲ್ಲಿ ಗಳಿಸಿದ ಸ್ಥಾನಗಳಷ್ಟನ್ನೂ ಗಳಿಸುವ ವಿಶ್ವಾಸವಿಲ್ಲ. ಮಾತ್ರವಲ್ಲ ಮೈತ್ರಿಕೂಟವನ್ನು ಒಟ್ಟಾಗಿ ಮುಂದಕ್ಕೊಯ್ಯುವ ಕಾಂಗ್ರೆಸ್ ಸಾಮರ್ಥ್ಯದ ಬಗೆಗೂ ಡಿಎಂಕೆಗೇ ಅನುಮಾನವುಂಟಾಗಿದೆ.
ಉತ್ತರಪ್ರದೇಶದಲ್ಲಿ ೨೦೧೭ರ ವಿಧಾನಸಭಾ ಚುನಾವಣೆಯಲ್ಲಿ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರ ಸಂಧಾನ ಕಾರಣದಿಂದ ಕಾಂಗ್ರೆಸ್ ಸಮಾಜವಾದಿ ಪಕ್ಷದಿಂದ ೧೦೬ ಸೀಟುಗಳನ್ನು ಪಡೆದರೂ ಕೇವಲ ೬ ಸ್ಥಾನಗಳಲ್ಲಷ್ಟೇ ಗೆಲ್ಲಲು ಶಕ್ತವಾಗಿತ್ತು.ಇದು ಕೂಡಾ ಮಹಾಮೈತ್ರಿಕೂಟಗಳಲ್ಲೂ ಕಾಂಗ್ರೆಸ್‌ನ ಚೌಕಾಶಿ ಸಾಮರ್ಥ್ಯವನ್ನು ದಿನದಿಂದ ದಿನಕ್ಕೆ ಕ್ಷೀಣವಾಗಿಸಲು ಕಾರಣವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss