Wednesday, August 10, 2022

Latest Posts

ಮೀನು ಸಾಕಾಣಿಕೆಗೆ ಹೆಚ್ಚಿನ ಉತ್ತೇಜನ: ಸಚಿವ ಎಸ್. ಅಂಗಾರ

ಹೊಸ ದಿಗಂತ ವರದಿ, ಕೋಲಾರ:

ಸತತ ಬರಗಾಲಕ್ಕೆ ತುತ್ತಾಗಿದ್ದ ಕೋಲಾರ ಜಿಲ್ಲೆ ಕೆಸಿ ವ್ಯಾಲಿ ನೀರು ಹರಿದು ಬಹುತೇಕ ಕೆರೆಗಳು ತುಂಬಿದ್ದು ಮೀನುಗಾರಿಕೆ ಇಲಾಖೆ ವತಿಯಿಂದ ಮೀನು ಸಾಕಾಣಿಕೆಗೆ ಮತ್ತಷ್ಟು ಉತ್ತೇಜನ ನೀಡಲಾಗುವುದು ಎಂದು ಮೀನುಗಾರಿಕೆ ಮತ್ತು ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಎ. ಅಂಗಾರ ತಿಳಿಸಿದರು.
ಸೋಮವಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಕುರುಡುಮಲೆ ವಿನಾಯಕ  ದೇವಸ್ಥಾನಕ್ಕೆ ಭೇಟಿ ನೀಡಿ ದೇವರಿಗೆ ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು ಮೀನುಗಾರಿಕೆ ಮತ್ತು ಬಂದರು ಇಲಾಖೆಗೆ ಸಂಬಂಧಪಟ್ಟ ಕಾಮಗಾರಿಕೆಗಳನ್ನು ಹಾಗೂ ಮೀನುಗಾರಿಕೆಯನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವುದಾಗಿ ತಿಳಿಸಿದರು.
ಬಂಗಾರಪೇಟೆ ತಾಲ್ಲೂಕಿನ ಮಾರ್ಕಂಡೇಯ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಆಗಮಿಸಿ ಸ್ವಚ್ಛತೆ ಮತ್ತು ನೈಮಲ್ಯಕ್ಕೆ ಹೆಚ್ಚಿನ ಕಾಳಜಿಯನ್ನು ವಹಿಸಿ ಎಂದು ಅಲ್ಲಿನ ಸಿಬ್ಬಂದಿಗೆ ಸೂಚಿಸಿದರು.
ಮೀನುಗಾರಿಕೆಗೆ ಸಂಬಂಧಿಸಿದ ಕಾಮಗಾರಿಗಳಿಗೆ ಅಗತ್ಯವಿರುವ ಸೌಲಭ್ಯಗಳನ್ನು ಇಲಾಖೆಗಳಿಗೆ ತಲುಪಿಸುತ್ತೇವೆ. ಜಿಲ್ಲೆಯ ಉತ್ತನೂರು ಆರ್‌ಎಎಸ್ ಫಾರ್ಮ್  ಮತ್ತು ವಿವಿಧ  ತಾಲ್ಲೂಕುಗಳಿಗೆ ಭೇಟಿ ನೀಡಿ, ಮೀನುಗಾರಿಕೆಯನ್ನು ಅಭಿವೃದ್ಧಿ ಪಡಿಸಿಸಲಾಗುವುದು ಎಂದು ತಿಳಿಸಿದರು.
ಬೇತಮಂಗಲ ಕೇಂದ್ರಕ್ಕೆ ಸಚಿವರ ಭೇಟಿ
ಕೆಜಿಎಫ್ ತಾಲ್ಲೂಕಿನ ಬೇತಮಂಗಲ ಮೀನುಮರಿ ಉತ್ಪಾದನಾ ಕೇಂದ್ರಕ್ಕೆ ಬೇಟಿ ನೀಡಿದ ಸಚಿವ ಅಂಗಾರ, ಮೀನುಗಾರಿಕೆಯಿಂದ ಯುವಕರಿಗೆ ಉದ್ಯೋಗವಕಾಶ ದೊರೆಯುವುದು ಮತ್ತು ಮೀನಿನ ಉತ್ಪಾದನೆಯೂ ಹೆಚ್ಚಾಗುವುದು. ಉತ್ಪಾದನೆಯ ಕೇಂದ್ರಗಳಲ್ಲಿ ಸೋಲಾರ್ ಪ್ಲಾಂಟ್ ಬಳಸುವುದರಿಂದ ಹೆಚ್ಚಿನ ವಿದ್ಯುತ್ ಶಕ್ತಿ ಉತ್ಪಾದನೆಯಿಂದ ಇಲಾಖೆ ಮತ್ತು ಸರ್ಕಾರಕ್ಕೆ ಆದಾಯ ಹೆಚ್ಚಾಗುವುದು ಎಂದು ತಿಳಿಸಿದರು.
ಮೀನುಮರಿ ಉತ್ಪಾದನಾ ಕೇಂದ್ರವನ್ನು ಪರಿಶೀಲನೆ ನಡೆಸಿದರು. ಯಾವ ತಳಿಯ ಮೀನುಗಳನ್ನು ಉತ್ಪಾದಿಸಲಾಗುತ್ತಿದೆ ಎಂದು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡರು. ನಂತರ ಮಾತನಾಡಿದ ಅವರು ಮೀನು ಉತ್ಪಾದನೆಯಿಂದ ಯುವಕರಿಗೆ ನಿರುದ್ಯೋಗ ಸಮಸ್ಯೆ ಬಗೆಹರಿಯುವುದು. ಮೀನಿನ ಉತ್ಪಾದನೆ ಹೆಚ್ಚಾಗುವುದು. ಕೇಂದ್ರ ಸರ್ಕಾರವು ಮತ್ಸ್ಯ ಯೋಜನೆಯಡಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಕೆಸಿ ವ್ಯಾಲಿ ನೀರಿನಿಂದ ಕೆರೆಗಳು ತುಂಬಿದ್ದು ಮೀನುಗಾರಿಕೆ ಹೆಚ್ಚಾಗುತ್ತದೆ. ಮೀನುಮರಿ ಉತ್ಪಾದನೆ ಕೇಂದ್ರಗಳಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲಾಗುವುದು. ಇದರಿಂದ ಸ್ವಂತ ವಿದ್ಯುತ್ ಶಕ್ತಿಯನ್ನು ಉತ್ಪಾದಿಸಬಹುದು ಮತ್ತು ಸರ್ಕಾರಕ್ಕೆ ಹೆಚ್ಚಿನ ಆದಾಯ ಬರುತ್ತದೆ. ಇಲಾಖೆಗಳು ಸ್ವಂತ: ಆರ್ಥಿಕ ಮೂಲಗಳನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಈ ಸಂದರ್ಭದಲ್ಲಿ ಅಂಬೇಡ್ಕರ್ ಅಭಿವೃದ್ದಿ ನಿಗಮದ ಅಧ್ಯಕ್ಷರು ಹಾಗೂ ಮುಳಬಾಗಿಲು ಕ್ಷೇತ್ರದ ಶಾಸಕ ಹೆಚ್ ನಾಗೇಶ್  ಸೇರಿದಂತೆ ಅಧಿಕಾರಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss