ಸಮ ಸಮಾಜವನ್ನು ಒಡೆದು ಆಳುವ ನೀತಿ ಹೆಚ್ಚುತ್ತಿದೆ : ಟಿ.ಪಿ.ರಮೇಶ್ ಕಳವಳ

ಹೊಸದಿಗಂತ ವರದಿ ಮಡಿಕೇರಿ :
ಸಂವಿಧಾನವನ್ನು ತಿರುಚುವ ಮತ್ತು ಜಾತಿ ಧರ್ಮಗಳ ಹೆಸರಿನಲ್ಲಿ ಸಮ ಸಮಾಜವನ್ನು ಒಡೆದು ಆಳುವ ನೀತಿ ಹೆಚ್ಚಾಗುತ್ತಿದೆ ಎಂದು ಆರೋಪಿಸಿದ ಸಹಮತ ವೇದಿಕೆಯ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಅನ್ಯಾಯವನ್ನು ಪ್ರಶ್ನಿಸುವ ಮನೋಭಾವ ಬೆಳೆಯಬೇಕು ಎಂದು ಕರೆ ನೀಡಿದರು.
ಸಹಮತ ವೇದಿಕೆ ವತಿಯಿಂದ ನಗರದ ಪತ್ರಿಕಾ ಭವನದಲ್ಲಿ ನಡೆದ ಸಮಿತಿ ಸದಸ್ಯರ ಹಾಗೂ ಸಂಘ-ಸಂಸ್ಥೆಗಳ ಆಹ್ವಾನಿತರ ಸಭೆಯಲ್ಲಿ ಮಾತನಾಡಿದ ಅವರು, ಪ್ರಸ್ತುತ ದಿನಗಳಲ್ಲಿ ಸಮಾಜದಲ್ಲಿ ಸಮಾನತೆಯಿಂದ ಬದುಕಬೇಕಾದರೆ ಕಲ್ಯಾಣ ಕಾರ್ಯಕ್ರಮಗಳ ಅನಿವಾರ್ಯತೆ ಇದೆ ಎಂದು ಅಭಿಪ್ರಾಯಪಟ್ಟರು.
ಸಂವಿಧಾನದ ಆಶಯಗಳ ಪರ ಧ್ವನಿ ಎತ್ತಿ ಮಾತನಾಡಬೇಕು ಮತ್ತು ಅನ್ಯಾಯವನ್ನು ಎದುರಿಸಿ ನಡೆಯುವಂತಾಗಬೇಕು. ಪಠ್ಯ ಪುಸ್ತಕ ಮಕ್ಕಳ ಮುಂದಿನ ಭವಿಷ್ಯವನ್ನು ರೂಪಿಸುವ ದಾರಿದೀಪವಾಗಿದೆ. ಆದರೆ ಇಂದು ಪಠ್ಯ ಪರಿಷ್ಕರಿಸುವ ಮೂಲಕ ಗೊಂದಲದ ವಾತಾವರಣವನ್ನು ಸೃಷ್ಟಿಸಿ ಸಮಾಜದಲ್ಲಿ ಒಡಕು ಮೂಡಿಸಲಾಗುತ್ತಿದೆ ಎಂದು ಟೀಕಿಸಿದರು.
ಗೊಂದಲದಿಂದ ಕೂಡಿರುವ ಪರಿಷ್ಕೃತ ಪಠ್ಯ ಪುಸ್ತಕಗಳನ್ನು ಹಿಂದಕ್ಕೆ ಪಡೆಯಬೇಕೆಂದು ಅವರು ಒತ್ತಾಯಿಸಿದರು.
ಪ್ರಸ್ತುತ ದಿನಗಳಲ್ಲಿ ಜನರ ಮೂಲಭೂತ ಸಮಸ್ಯೆಗಳಿಗೆ ಸ್ಪಂದಿಸುವ ಅನಿವಾರ್ಯತೆ ಇದೆ. ಆದರೆ ಬಡವರಿಗೆ ಕನಿಷ್ಟ ಮನೆಗಳನ್ನು ಕೂಡಾ ನಿರ್ಮಿಸಿಕೊಡಲಾಗದ ಪರಿಸ್ಥಿತಿಯಲ್ಲಿ ವ್ಯವಸ್ಥೆ ಇದೆ. ಕಾಮಗಾರಿಗಳ ಹೆಸರಿನಲ್ಲಿ ಭ್ರಷ್ಟಾಚಾರ ಮಿತಿಮೀರುತ್ತಿದೆ ಎಂದು ಆರೋಪಿಸಿದ ಟಿ.ಪಿ.ರಮೇಶ್, ಅವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ಧ್ವನಿ ಎತ್ತುವ ಕಾರ್ಯವನ್ನು ಸಹಮತ ವೇದಿಕೆ ಮಾಡಲಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಮಾತನಾಡಿ, ರಾಷ್ಟ್ರಕವಿ ಕುವೆಂಪು ಅವರ ನಾಡಗೀತೆಯನ್ನು ತಿರುಚಿ ಬರೆದವರನ್ನು ಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ ಸೇರಿಸಿರುವುದು ವಿಪರ್ಯಾಸ. ಬಸವಣ್ಣನವರ ವಿಚಾರ ಇಂದಿಗೂ ಪ್ರಸ್ತುತ, ಆದರೆ ಅವರ ವಿಚಾರಗಳನ್ನು ಪುಸ್ತಕದಿಂದ ಕೈ ಬಿಟ್ಟಿರುವುದು ಖಂಡನೀಯ ಎಂದರು.
ಪ್ರಮುಖರಾದ ವಿ.ಪಿ.ಶಶಿಧರ್ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಮಕ್ಕಳ ಮನಸ್ಸನ್ನು ಮಲೀನಗೊಳಿಸುವ ಕಾರ್ಯ ಸದ್ದಿಲ್ಲದೆ ನಡೆಯುತ್ತಿದ್ದು, ಪುಸ್ತಕದ ಮೂಲಕ ಅತಿಕ್ರಮಣ ಮಾಡುವ ಕೆಲಸವಾಗುತ್ತಿದೆ ಎಂದು ಆರೋಪಿಸಿದರು. ಈ ರೀತಿಯ ಬೆಳವಣಿಗೆಗಳು ಅಪಾಯದ ಕರೆ ಗಂಟೆಯಾಗಿದ್ದು, ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು ಎಂದರು.
ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್.ದಿವಾಕರ್, ವಕ್ಫ್ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಕೆ.ಎ.ಯಾಕುಬ್ ಮತ್ತಿತರರು ಮಾತನಾಡಿದರು.
ಸಹಮತ ವೇದಿಕೆಯ ಪ್ರಮುಖರಾದ ಅಬ್ದುಲ್ ರೆಹಮಾನ್, ದೇವಯ್ಯ, ಬಿ.ವೈ.ರಾಜೇಶ್, ನವೀನ್ ಅಂಬೆಕಲ್, ಕೆ.ಜಿ.ಪೀಟರ್, ಹ್ಯಾರಿಸ್, ಉಪಸ್ಥಿತರಿದ್ದರು.
ಪ್ರಧಾನ ಕಾರ್ಯದರ್ಶಿ ಮುನೀರ್ ಅಹಮ್ಮದ್ ಸ್ವಾಗತಿಸಿ, ವಂದಿಸಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!