ಹೊಸದಿಗಂತ ಡಿಜಿಟಲ್ ಡೆಸ್ಕ್:
ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿ ಇರುವ ತನಕ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದು ನಮ್ಮ ಬದ್ಧತೆ ಎಂಬುದಾಗಿ ಡಿಸಿಎಂ ಡಿ.ಕೆ ಶಿವಕುಮಾರ್ ಘೋಷಿಸಿದ್ದಾರೆ.
ವಿಧಾನಸಭೆಯಲ್ಲಿ ಪ್ರಶ್ನೋತ್ತರ ಕಲಾಪದ ವೇಳೆ ಶಾಸಕ ಎಂ.ಟಿ.ಕೃಷ್ಣಪ್ಪ ಅವರ, ಗ್ಯಾರಂಟಿ ಅನುಷ್ಠಾನ ಸಮಿತಿಗಳಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಕೂರಿಸಲಾಗಿದೆ. ಅವರಿಗೆ ವೇತನ ನೀಡಲಾಗುತ್ತಿದೆ ಎನ್ನುವ ಆಕ್ಷೇಪಕ್ಕೆ ಉತ್ತರ ನೀಡಲು ಮುಂದಾದಾಗ ಗದ್ದಲ ಎಬ್ಬಿಸಿದ ವಿಪಕ್ಷಗಳ ಸದಸ್ಯರಿಗೆ ಡಿಸಿಎಂ ಉತ್ತರ ನೀಡಿದರು.
ನಮ್ಮ ಜನ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರು. ಪ್ರತಿಯೊಂದು ಪದಾರ್ಥಗಳ ಬೆಲೆಯೂ ಹೆಚ್ಚಾಗಿತ್ತು. ಆದ ಕಾರಣಕ್ಕೆ ನಮ್ಮ ಸರ್ಕಾರ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿತು. ಈ ಯೋಜನೆಗಳಿಗೆ ನೂರಾರು ಟೀಕೆ- ಟಿಪ್ಪಣಿಗಳು ಬಂದವು. ಒಂದು ಕಾಳು ಕಡಿಮೆ ಕೊಟ್ಟರೂ ಸಹ ಸುಮ್ಮನಿರುವುದಿಲ್ಲ ಎಂದು ಯಡಿಯೂರಪ್ಪ ಅವರು ಹೇಳಿದರು. ಇದು ಕಾಂಗ್ರೆಸ್ ಸರ್ಕಾರದಿಂದ ಸಾಧ್ಯವೇ ಎಂದರು. ನಾವು ಅಧಿಕಾರಕ್ಕೆ ಬಂದ ಮೊದಲನೇ ದಿನವೇ ಐದು ಗ್ಯಾರಂಟಿಗಳಿಗೆ ಒಪ್ಪಿಗೆ ಕೊಟ್ಟು ಆದೇಶ ಹೊರಡಿಸಿದೆವು ಎಂದು ಹೇಳಿದರು.
ನಮಗೆ ಜನರ ಕಲ್ಯಾಣ ಮುಖ್ಯ. ಜೀವ ಇದ್ದರೆ ಜೀವನ. ಒಂದು ಗ್ಯಾಸ್ ಸಿಲಿಂಡರ್ ಬೆಲೆ ರೂ. 1,100, ಅಡುಗೆ ಎಣ್ಣೆ ಬೆಲೆ ರೂ.200 ಸೇರಿದಂತೆ, ಸಿಮೆಂಟ್, ಪೆಟ್ರೋಲ್, ಡಿಸೇಲ್ ಬೆಲೆ ಎಲ್ಲವೂ ಗಗನಕ್ಕೆ ಹೋಗಿತ್ತು. ಹೀಗಾಗಿ ಗ್ಯಾರಂಟಿ ಯೋಜನೆ ನೀಡಿದೆವು. ಈ ಗ್ಯಾರಂಟಿಗಳಿಗೆ ಅಂದು ಟೀಕೆ ಮಾಡಿದ ಬಿಜೆಪಿ, ಇಂದು ತನ್ನ ಆಡಳಿತವಿರುವ ದೆಹಲಿ, ಮಹಾರಾಷ್ಟ್ರ, ಮಧ್ಯಪ್ರದೇಶ ರಾಜ್ಯಗಳು ಸೇರಿದಂತೆ ಅನೇಕ ರಾಜ್ಯಗಳ ಸರ್ಕಾರಗಳು ಗ್ಯಾರಂಟಿಗಳನ್ನು ಜಾರಿಗೊಳಿಸಿವೆ ಎಂದು ಹೇಳಿದರು.