ಗುಜರಾತ್ ಗಲಭೆ: ತೀಸ್ತಾ, ಶ್ರೀಕುಮಾರ್​ ಜಾಮೀನು ಅರ್ಜಿ ವಜಾ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

2002ರ ಗುಜರಾತ್ ಗಲಭೆಗೆ ಸಂಬಂಧಿಸಿದಂತೆ ತೀಸ್ತಾ ಸೆಟಲ್ವಾಡ್ ಮತ್ತು ಹಿಂದಿನ ಪೊಲೀಸ್ ಡಿಜಿಪಿ ಆರ್​ಬಿ ಶ್ರೀಕುಮಾರ್ ಅವರಿಗೆ ಜಾಮೀನು ನೀಡಲು ಸೆಷನ್ಸ್​ ನ್ಯಾಯಾಲಯ ನಿರಾಕರಿಸಿದೆ.

ಈ ಮುನ್ನವಿಚಾರಣೆ ನಡೆಸಿದ್ದ ನ್ಯಾಯಾಲಯ ಇಬ್ಬರ ಜಾಮೀನು ನೀಡುವ ಕುರಿತಾದ ತೀರ್ಪು ಕಾಯ್ದಿಸಿರಿಸಿತ್ತು. ಇಬ್ಬರಿಗೂ ಜಾಮೀನು ನೀಡದಂತೆ ಸರ್ಕಾರ ಮನವಿ ಮಾಡಿತ್ತು.

2002ರ ಗುಜರಾತ್ ಗಲಭೆ ಕುರಿತಂತೆ ತೀಸ್ತಾ ಸೆಟಲ್ವಾಡ್ ಅವರ ಎನ್​ಜಿಓ ಪೊಲೀಸರಿಗೆ ಆಧಾರರಹಿತ ಮಾಹಿತಿಗಳನ್ನು ನೀಡಿದ ಆರೋಪದ ಮೇಲೆ, ಗುಜರಾತ್ ಕ್ರೈಂ ಬ್ರ್ಯಾಂಚ್ ಪೊಲೀಸರು ಜೂನ್ 26 ರಂದು ತೀಸ್ತಾರನ್ನು ಬಂಧಿಸಿದ್ದರು.

2002ರ ಗಲಭೆಯ ನಂತರ ಆಗಿನ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ತೇಜೋವಧೆ ಮಾಡಿ ಸರ್ಕಾರವನ್ನು ಅಸ್ಥಿರಗೊಳಿಸಲು ಆಗ ಸೋನಿಯಾ ಗಾಂಧಿ ಸಲಹೆಗಾರರಾಗಿದ್ದ ಕಾಂಗ್ರೆಸ್ ಮುಖಂಡ ದಿ. ಅಹ್ಮದ್ ಪಟೇಲ್​ರಿಂದ ತೀಸ್ತಾ, ಶ್ರೀಕುಮಾರ್ ಮತ್ತು ಮಾಜಿ ಐಪಿಎಸ್​ ಅಧಿಕಾರಿ ಸಂಜೀವ್ ಭಟ್ 30 ಲಕ್ಷ ರೂಪಾಯಿ ಪಡೆದಿದ್ದರು ಎಂದು ಈ ತಿಂಗಳ ಆರಂಭದಲ್ಲಿ ಎಸ್​ಐಟಿ ಸಲ್ಲಿಸಿದ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ತೀಸ್ತಾ, ಶ್ರೀಕುಮಾರ್ ಸಲ್ಲಿಸಿದ್ದ ಜಾಮೀನು ಅರ್ಜಿಯ ವಿರುದ್ಧ ಎಸ್‌ಐಟಿ ಎಸಿಪಿ ಬಿ.ಸಿ.ಸೋಲಂಕಿ ಮತ್ತು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್‌ಗಳಾದ ಮಿತೇಶ್ ಅಮೀನ್ ಮತ್ತು ಅಮಿತ್ ಪಟೇಲ್ ಅವರು ಸೆಷನ್ಸ್ ನ್ಯಾಯಾಲಯದಲ್ಲಿ ಅಫಿಡವಿಟ್ ಸಲ್ಲಿಸಿದ್ದರು. ಆರೋಪಿಗಳು ಕಾಂಗ್ರೆಸ್‌ನಿಂದ ಅಕ್ರಮ ಹಣ ಮತ್ತು ಇತರ ಪ್ರಯೋಜನಗಳನ್ನು ಪಡೆಯುವ ಉದ್ದೇಶದಿಂದ ದೊಡ್ಡ ಸಂಚು ರೂಪಿಸಿದ್ದರು ಎಂದು ಅಫಿಡವಿಟ್​ನಲ್ಲಿ ತಿಳಿಸಲಾಗಿದೆ.

ಅಹಮದಾಬಾದ್‌ನ ಮೆಟ್ರೋಪಾಲಿಟನ್ ನ್ಯಾಯಾಲಯವು ಜುಲೈ 2 ರಂದು ಸೆಟಲ್ವಾಡ್ ಮತ್ತು ಶ್ರೀಕುಮಾರ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಗುಜರಾತ್ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಅವರನ್ನು ಹಣವನ್ನು ದುರುಪಯೋಗಪಡಿಸಿಕೊಂಡ ಮತ್ತು ನಕಲಿ ದಾಖಲೆಗಳನ್ನು ಸೃಷ್ಟಿಸಿದ ಆರೋಪದ ಮೇಲೆ ಅಹಮದಾಬಾದ್ ಅಪರಾಧ ವಿಭಾಗದ ಪೊಲೀಸರು ಬಂಧಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!