Thursday, August 11, 2022

Latest Posts

ಗುಜರಾತ್ ವಿಜ್ಞಾನ ನಗರಿಗೆ ಮತ್ಸ್ಯ, ಯಂತ್ರಮಾನವ, ನಿಸರ್ಗ ಉದ್ಯಾನಗಳ ಮೆರಗು, ಏನಿವೆಲ್ಲ?

ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………

ಹೊಸದಿಗಂತ ಆನ್ ಲೈನ್ ಡೆಸ್ಕ್:

ಇಂದು ಸಾಯಂಕಾಲ ಪ್ರಧಾನಿ ನರೇಂದ್ರ ಮೋದಿ ಅಹಮದಾಬಾದಿನ ಸೈನ್ಸ್ ಸಿಟಿಯಲ್ಲಿ ಒಂದಿಷ್ಟು ಯೋಜನೆಗಳನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ. ಇವುಗಳಲ್ಲಿ ಕುತೂಹಲ ಕೆರಳಿಸಿರುವವು ಮುಖ್ಯವಾಗಿ ಮತ್ಸ್ಯ ಸಂಗ್ರಹಾಲಯ ಮತ್ತು ರೊಬೊಟಿಕ್ ಅರ್ಥಾತ್ ಯಂತ್ರಮಾನವ ಪ್ರದರ್ಶನಾಲಯ. ಜತೆಗೆ ನೇಚರ್ ಪಾರ್ಕ್ ಸಹ ಲೋಕಾರ್ಪಣೆಯಾಗಲಿದೆ.

ಏನಿದು ಅಹಮದಾಬಾದ್ ನ ಸೈನ್ಸ್ ಸಿಟಿ? 

ಇದು 1991ರಿಂದಲೇ ಸರ್ಕಾರ ನಡೆಸುವ ಸೊಸೈಟಿ ರೀತಿಯಲ್ಲಿ ಪ್ರಾರಂಭವಾಗಿ ಹಂತ ಹಂತವಾಗಿ ಬೇರೆ ಬೇರೆ ಆಕರ್ಷಣೆಗಳು ಜೋಡಣೆಯಾಗುತ್ತ ಬಂದಿವೆ. ಬಾಹ್ಯಾಕಾಶದ ಹಾಲ್, ವಿಜ್ಞಾನದ ಹಾಲ್ ಎಂದೆಲ್ಲ ರೂಪುಗೊಂಡಿವೆ. 2002ರಲ್ಲಿ ಇಲ್ಲಿಗೆ ಐಮ್ಯಾಕ್ಸ್ 3ಡಿ ಪ್ರದರ್ಶನ ಮಂದಿರ ಬಂದಾಗ ಅದು ದೇಶದಲ್ಲೇ ಪ್ರಥಮ ಎನ್ನಿಸಿಕೊಂಡಿತ್ತು. ಇಂಥ ವಿಜ್ಞಾನ ನಗರಿಗೆ ಈಗ ಮೀನು ಮತ್ತು ಯಂತ್ರಮಾನವ ಪ್ರದರ್ಶನಗಳು ಸೇರಿಕೊಳ್ಳುತ್ತಿವೆ.

ವಿಜ್ಞಾನಾಸಕ್ತರಿಗೆ, ಅದರಲ್ಲೂ ಹೊಸ ಪೀಳಿಗೆಗೆ ವಿಜ್ಞಾನವನ್ನು ಮನರಂಜನಾತ್ಮಕವಾಗಿ ಪರಿಚಯಿಸುವುದು ವಿಜ್ಞಾನ ನಗರಿಯ ಮೂಲ ಉದ್ದೇಶ. 

ಹೊಸ ಮತ್ಸ್ಯ ಸಂಗ್ರಹಾಲಯದಲ್ಲಿ ಏನಿರುತ್ತದೆ?

ಇದರ ಪ್ರಮುಖ ಆಕರ್ಷಣೆ ಎಂದರೆ ಶಾರ್ಕ್ ಸುರಂಗ. 28 ಮೀಟರ್ ಗಳ ಈ ಸುರಂಗದಲ್ಲಿ ಹಾದುಹೋಗುವಾಗ ಗ್ರೆ ರೀಫ್, ಬಾನೆಟ್ ಹೆಡ್, ಮತ್ತು ಜೆಬ್ರಾ ಜಾತಿಯ ಶಾರ್ಕ್ ಮೀನುಗಳನ್ನು ನೋಡಬಹುದಾಗಿದೆ. 15,000 ಚದರ ಮೀಟರ್ ವಿಸ್ತೀರ್ಣದಲ್ಲಿ 188 ಸಾಗರ ಪ್ರಬೇಧಗಳಿವೆ. ಉಭಯವಾಸಿಗಳು ಮತ್ತು ಪೆಂಗ್ವಿನ್ ಎಲ್ಲವನ್ನೂ ಸೇರಿ 11,690 ಜೀವಿಗಳು ಇಲ್ಲಿರುತ್ತವೆ. 

 

ಇವೆಲ್ಲವನ್ನೂ ಒಟ್ಟೂ 68 ಟ್ಯಾಂಕ್ ಗಳಲ್ಲಿ ಪ್ರದರ್ಶನಕ್ಕೆ ಲಭ್ಯವಾಗುವಂತೆ ಇಡಲಾಗುತ್ತದೆ. 

ನ್ಯೂಜಿಲೆಂಡ್ ನ ಮರೈನ್ ಸ್ಕೇಪ್ ಎಂಬ ಕಂಪನಿ ಇದನ್ನು ರೂಪಿಸಿದ್ದು, ಇದಕ್ಕೆ ಬೇಕಾಗುವ ಎಲ್ಲ ತಾಂತ್ರಿಕ ಸಹಕಾರವನ್ನು ಅದೇ ನೀಡಲಿದೆ. 

ಇದಕ್ಕೆ 200 ರುಪಾಯಿ ಪ್ರವೇಶ ದರ, ಆದರೆ ವಿದ್ಯಾರ್ಥಿಗಳಿಗೆ ರಿಯಾಯತಿ ಇದೆ.

ರೊಬಾಟಿಕ್ಸ್ ವಿಭಾಗದಲ್ಲಿ ಏನು ನೋಡಬಹುದು?

ಇದು ವಡೋದರಾ ಮೂಲದ ಕಂಪನಿಯಿಂದಲೇ ವಿನ್ಯಾಸವಾದಂಥದ್ದು. ಚಾಲಕ ರಹಿತ ವಾಹನಗಳು ಹೇಗೆ ಕಾರ್ಯ ನಿರ್ವಹಿಸುತ್ತವೆ ಎಂಬುದನ್ನು ಇಲ್ಲಿ ನೋಡಬಹುದು. ಇಲ್ಲಿನ ಕೆಫಟಿರಿಯಾದಲ್ಲಿ ಆಹಾರವನ್ನು ನೀಡುವವು ಮತ್ತು ಒಟ್ಟಾ ನಿರ್ವಹಣೆ ಮಾಡುವವರು ಯಂತ್ರಮಾನವರೇ ಆಗಿರುತ್ತಾರೆ. 

ವೈದ್ಯಕೀಯ ವಿಭಾಗ, ರಕ್ಷಣಾ ಕಾರ್ಯಾಚರಣೆಗಳಲ್ಲಿ ರೊಬಾಟ್ ಗಳು ಹೇಗೆ ಬಳಕೆಯಾಗುತ್ತವೆ ಎಂಬುದರ ಪ್ರಾತ್ಯಕ್ಷಿಕೆಯನ್ನು ಇಲ್ಲಿ ಕಾಣಬಹುದು. ಇಸ್ರೊ ಮತ್ತು ಡಿ ಆರ್ ಡಿ ಒಗಳು ತಮ್ಮ ಮಾನವ ರಹಿತ ಆಕಾಶ ವಾಹನಗಳನ್ನು ಪ್ರದರ್ಶನಕ್ಕಿಡುತ್ತವೆ. ರೊಬೊ ನಾಟ್ಯ ಮಂಟಪ ಎಂಬ ವಿಭಾಗವೊಂದು ರೂಪುಗೊಂಡಿದ್ದು ಇಲ್ಲಿ ಯಂತ್ರಮಾನವರ ಹಾಡು-ಕುಣಿತಗಳನ್ನು ಕಣ್ತುಂಬಿಸಿಕೊಳ್ಳಬಹುದು.

 

ನಿಸರ್ಗ ಉದ್ಯಾನ

ಸಸ್ಯ ಪ್ರಬೇಧ, ವೃಕ್ಷ ಜಗತ್ತುಗಳ ಆಸಕ್ತಿ ಇರುವವರಿಗೆ ರೂಪುಗೊಂಡಿದೆ. ಮುಂದಿನ ದಿನಗಳಲ್ಲಿ ರಸಾಯನಶಾಸ್ತ್ರಕ್ಕೆ ಸಂಬಂಧಿಸಿದಂತೆಯೂ ಪದಾರ್ಥಗಳನ್ನು ಜೋಡಿಸುವುದಾಗಿ ಹೇಳಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss