IPL 2023 ಟ್ರೇಡಿಂಗ್: ಭಾರತೀಯ ಯುವ ವೇಗಿಗಾಗಿ 10 ಕೋಟಿ ಆಟಗಾರ ಲೂಕಿ ಫರ್ಗುಸನ್ ರನ್ನು KKR ಗೆ ಬಿಟ್ಟುಕೊಡಲು ಸಿದ್ಧವಾದ ಗುಜರಾತ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಐಪಿಎಲ್‌ 2023 ರ ಮಿನಿ ಹರಾಜಿಗೆ ಫ್ರಾಂಚೈಸಿಗಳು ಕೊನೆ ಹಂತದ ಸಿದ್ಧತೆಯಲ್ಲಿ ತೊಡಗಿಕೊಂಡಿವೆ. ಇದೀಗ ಐಪಿಎಲ್‌ ಟ್ರೇಡ್‌ ವಿಂಡೋ ತೆರೆದಿದ್ದು ತಂಡಗಳು ಬಿಡುಗಡೆ ಮಾಡಲು ಮತ್ತು ಉಳಿಸಿಕೊಳ್ಳಲು ಬಯಸುವ ಆಟಗಾರರೊಂದಿಗೆ ಒಪ್ಪಂದಗಳಿಗೆ ಸಹಿ ಹಾಕುವಲ್ಲಿ ನಿರತರಾಗಿದ್ದಾರೆ. ಟ್ರೇಡ್‌ ಆಗುವ ಆಟಗಾರರ ಲೀಸ್ಟ್‌ ಫೈನಲ್‌ ಮಾಡಲು ನವೆಂಬರ್ 15 ಕೊನೆಯ ದಿನವಾಗಿದೆ. ಈ ಮುಕ್ತ ವ್ಯಾಪಾರದ ಅವಧಿಯಲ್ಲಿ ಯಾವುದೇ ಆಟಗಾರನನ್ನು ಮಾರಾಟ ಮಾಡಿ ಇನ್ನೊಬ್ಬ ಆಟಗಾರನನ್ನು ಫ್ರಾಂಚೈಸಿಗಳು ಪಡೆದುಕೊಳ್ಳಬಹುದು.
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ, ಗುಜರಾತ್ ಟೈಟಾನ್ಸ್ (ಜಿಟಿ) ಈ ವಿಂಡೋವನ್ನು ಬಳಸಲು ಬಯಸುತ್ತಿರುವ ತಂಡಗಳಲ್ಲಿ ಒಂದಾಗಿದೆ. ಐಪಿಎಲ್ 2022 ರ ಚಾಂಪಿಯನ್‌ ತಂಡ ಗುಜರಾತ್ ತನ್ನ ಸ್ಟಾರ್ ವೇಗಿ ಲೂಕಿ ಫರ್ಗುಸನ್ ಅವರನ್ನು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಮಾರಾಟ ಮಾಡಲು ಮುಂದಾಗಿದೆ ಎಂದು ವರದಿ ಹೇಳುತ್ತಿದೆ. ಅದು ಸಹ ಒರ್ವ ಅನ್‌ ಕ್ಯಾಪ್ಡ್‌ ಭಾರತೀಯ ವೇಗಿಗಾಗಿ ಎಂಬುದು ಅಚ್ಚರಿಗೆ ಕಾರಣವಾಗಿದೆ.

ಪ್ರಾಂಚೈಸಿ ನಿರೀಕ್ಷೆ ಹುಸಿಗೊಳಿಸಿದ್ದ ಫರ್ಗ್ಯೂಸನ್:

ಟೈಟಾನ್ಸ್ ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಫರ್ಗುಸನ್‌ಗಾಗಿ ದೊಡ್ಡ ಮೊತ್ತವನ್ನು ತೆಗೆದಿರಿಸಿತ್ತು. ಬರೋಬ್ಬರಿ 10 ಕೋಟಿ ರೂಪಾಯಿಗಳ ಬೃಹತ್ ಮೊತ್ತಕ್ಕೆ ಅವರನ್ನು ಖರೀದಿಸಿತು. ಆದರೆ ನ್ಯೂಜಿಲೆಂಡ್ ವೇಗಿ ನಿರೀಕ್ಷೆಗೆ ತಕ್ಕಂತೆ ಆಡಲು ಸಾಧ್ಯವಾಗಲಿಲ್ಲ. 13 ಪಂದ್ಯಗಳಲ್ಲಿ ಕೇವಲ 12 ವಿಕೆಟ್‌ಗಳನ್ನು ಗಳಿಸಿ ನಿರಾಸೆ ಮೂಡಿಸಿದರು.  8.96 ರ ಎಕಾನಮಿ ರೇಟ್‌ ನಲ್ಲಿ ಬೌಲಿಂಗ್ ಮಾಡಿದ್ದ ಫರ್ಗುಸನ್ 3 ಪಂದ್ಯಗಳಲ್ಲಿ ಬೆಂಚ್ ಕಾಯಿಸಿದ್ದರು.
ಇದೀಗ ಕೆಕೆಆರ್‌ ನ ಭಾರತೀಯ ಯುವ ವೇಗಿಯೊಬ್ಬನ ಮೇಲೆ ಕಣ್ಣಿಟ್ಟಿರುವ ಜಿಟಿ ಫರ್ಗುಸನ್ ಅವರನ್ನು ಕೆಕೆಆರ್‌ ಗೆ ವ್ಯಾಪಾರ ಮಾಡಲು ಮುಂದಾಗಿದೆ ಎಂಬ ಸುಳಿವು ಸಿಕ್ಕಿದೆ. ಜಿಟಿ ಕಣ್ಣಿಟ್ಟಿರುವ ವೇಗಿ ಶಿವಂ ಮಾವಿ ಅವರನ್ನು ಕೆಕೆಆರ್ ಮೂಲದ ಫ್ರಾಂಚೈಸಿ ರೂ 7.25 ಕೋಟಿಗೆ ಹರಾಜಿನಲ್ಲಿ ಮತ್ತೆ ತಂಡಕ್ಕೆ ಸೇರಿಸಿಕೊಂಡಿತ್ತು.  ಗುಜರಾತ್ ‌ ಮಾವಿಯನ್ನು ಹರಾಜಿನಲ್ಲಿ ಖರೀದಿಸಲು ಪ್ರಯತ್ನಿಸಿತ್ತಾದರೂ ಕೊಂಚದ್ದರಲ್ಲಿ ತಪ್ಪಿಹೋಗಿದ್ದರು. ಕೆಕೆಆರ್ ಪರ ಕಳೆದ ಸೀಜನ್‌ ನಲ್ಲಿ 6 ಪಂದ್ಯಗಳ ಆಡಿದ್ದ ಮ ಆವಿ 5 ವಿಕೆಟ್ ಕಬಳಿಸಿದ್ದಾರೆ.
ಮಾವಿ ತನ್ನ ಐಪಿಎಲ್ ವೃತ್ತಿಜೀವನದಲ್ಲಿ ಕೆಕೆಆರ್ ಪರ ಮಾತ್ರ ಆಡಿದ್ದಾರೆ. ಅವರು ಜಿಟಿಗೆ ತೆರಳಿದರೆ, ಅವರು ಮೊದಲ ಬಾರಿಗೆ ಬೇರೊಂದು ಐಪಿಎಲ್ ಫ್ರಾಂಚೈಸಿಗಾಗಿ ಆಡಲಿದ್ದಾರೆ. ಜೊತೆಗೆ ಈ ಟ್ರೇಡ್‌ ಸಾಧ್ಯವಾದಲ್ಲಿ ಫರ್ಗ್ಯೂಸನ್‌ ಸಹ ಅವರ ಹಿಂದಿನ ಫ್ರಾಂಚೈಸಿಗೆ ಹಿಂತಿರುಗಲಿದ್ದಾರೆ. ಈ ಬಗ್ಗೆ ಅಧಿಕೃತ ಅಪ್‌ಡೇಟ್ ಪಡೆಯಲು ಅಭಿಮಾನಿಗಳು ಒಂದು ವಾರ ಕಾಲ ಕಾಯಬೇಕಿದೆ.

ಜಡೇಜಾರನ್ನು ಬಿಟ್ಟುಕೊಡಲೊಪ್ಪದ ಧೋನಿ!
ಮತ್ತೊಂದು ಅಪ್‌ಡೇಟ್‌ನಲ್ಲಿ, ರವೀಂದ್ರ ಜಡೇಜಾ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ಜೊತೆಗಿನ ಒಡನಾಟವನ್ನು ಮುಂದುವರಿಸುವ ಸಾಧ್ಯತೆಯಿದೆ. ಪ್ರಾಂಚೈಸಿ ನಾಯಕತ್ವ ಕಿತ್ತುಕೊಂಡಿದ್ದರಿಂದಾ ಮುನಿಸಿಕೊಂಡಿದ್ದ ಜಡೇಜಾ ತಂಡದ ಎಲ್ಲಾ ಚಟುವಟಿಕೆಗಳಿಂದ ದೂರವಾಗಿದ್ದರು. ಆದರೆ ನಾವು ಜಡೇಜಾ ಅವರನ್ನು ಕಳೆದುಕೊಳ್ಳಲು ಸಾಧ್ಯವಿಲ್ಲ, ಅವರನ್ನು ಯಾವುದೇ ಕಾರಣಕ್ಕೂ ತಂಡದಿಂದ ಕೈಬಿಡಬೇಡಿ ಎಂದು ಎಂಎಸ್ ಧೋನಿ ತಂಡದ ಮ್ಯಾನೇಜ್‌ಮೆಂಟ್‌ಗೆ ಸೂಚಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಐಪಿಎಲ್ 2023ರಲ್ಲಿ ಧೋನಿ ಸಿಎಸ್‌ಕೆಯನ್ನು ಮುನ್ನಡೆಸುವುದು ಖಚಿತವಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!