Sunday, December 3, 2023

Latest Posts

ನಕ್ಸಲ್- ಕೇರಳ ಪೊಲೀಸರ ನಡುವೆ ಗುಂಡಿನ ಚಕಮಕಿ: ಕೊಡಗಿನ ಗಡಿಯಲ್ಲಿ ಹೈ ಅಲರ್ಟ್

ಹೊಸದಿಗಂತ ವರದಿ ಮಡಿಕೇರಿ:

ಕೊಡಗು ಹಾಗೂ ಕೇರಳದ ಗಡಿ ಭಾಗದಲ್ಲಿ ಕೇರಳದ ನಕ್ಸಲ್ ನಿಗ್ರಹ ಪಡೆ ಹಾಗೂ ನಕ್ಸಲರ ಗುಂಪಿನ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೊಡಗಿನ ಗಡಿ ಭಾಗದಲ್ಲೂ ಬಿಗು ಬಂದೋಬಸ್ತ್ ಏರ್ಪಡಿಸಲಾಗಿದೆ.

ಕೊಡಗಿನ ಗಡಿಭಾಗದಿಂದ 4-5 ಕಿ.ಮೀ. ವೈಮಾನಿಕ ಅಂತರ(ಏರಿಯಲ್ ಡಿಸ್ಟೆನ್ಸ್)ದಲ್ಲಿ ಸೋಮವಾರ ಬೆಳಗ್ಗೆ 10ಗಂಟೆ ಸುಮಾರಿಗೆ ನಕ್ಸಲರು ಹಾಗೂ ಕೇರಳ ಪೊಲೀಸರ ನಕ್ಸಲ್ ನಿಗ್ರಹ ಪಡೆಯ ನಡುವೆ ಗುಂಡಿನ ಚಕಮಕಿ ನಡೆದಿದ್ದು, ಈ ಸಂದರ್ಭ ನಕ್ಸಲರ ತಂಡದ ಓರ್ವ ಗಾಯಗೊಂಡಿರುವುದಾಗಿ ಹೇಳಲಾಗಿದೆ.

ಈ ಗಾಯಾಳು ವೈದ್ಯಕೀಯ ಸೌಲಭ್ಯಕ್ಕಾಗಿ ಇಲ್ಲವೇ ತಲೆಮರೆಸಿಕೊಳ್ಳಲು ಕೊಡಗಿನ ಗಡಿಭಾಗದ ಪ್ರದೇಶಗಳಿಗೆ ಆಗಮಿಸುವ ಸಂಭವವಿರುವುದರಿಂದ ಕೊಡಗಿನ ಗಡಿಭಾಗದ ಮೆಡಿಕಲ್ ಶಾಪ್, ಆಸ್ಪತ್ರೆ, ಹೋಂಸ್ಟೇಗಳ ಮೇಲೆ ಕೊಡಗಿನ ಪೊಲೀಸರು ನಿಗಾ ಇರಿಸಿದ್ದಾರೆ.

ಅಲ್ಲದೆ ಕೊಡಗಿನ ಗಡಿಭಾಗದ ಚೆಕ್’ಪೋಸ್ಟ್’ಗಳಲ್ಲಿ ಜಿಲ್ಲಾ ಸಶಸ್ತ್ರ ಪಡೆಯ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಕೊಡಗಿನ ಗಡಿ ಭಾಗದ ಗ್ರಾಮಗಳಾದ ಬಿರುನಾಣಿ, ತೆರಾಲು,‌ಪರಕಟಗೇರಿ, ಕುಟ್ಟ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕಳೆದ ಮಂಗಳವಾರ ಕೇರಳದ ವಯನಾಡು ಜಿಲ್ಲೆಯ ತಳಪುಳ್ಳ ಪೊಲೀಸ್ ಠಾಣೆ ವ್ಯಾಪ್ತಿಯ ಪಿರಿಯ ಅರಣ್ಯ ಪ್ರದೇಶದಲ್ಲಿ ಕೇರಳ ಪೊಲೀಸರ ವಿಶೇಷ ತಂಡಗಳು ಕೂಂಬಿಂಗ್ ನಡೆಸುತ್ತಿರುವಾಗ, ಐವರು ನಕ್ಸಲರ ತಂಡ ಮಂಗಳವಾರ ರಾತ್ರಿ ಚಪ್ಪರ ಕಾಲನಿಗೆ ಭೇಟಿ ನೀಡಿತ್ತೆನ್ನಲಾಗಿದೆ.

ಕೇರಳ ಪೊಲೀಸರು ಅವರನ್ನು ಸುತ್ತುವರಿದಾಗ ಗುಂಡಿನ ಚಕಮಕಿ ನಡೆದು ಮೂವರು ನಕ್ಸಲರು ತಲೆಮರೆಸಿಕೊಂಡಿದ್ದು, ಕೇರಳದ ನಕ್ಸಲ್ ಮುಖಂಡ ಚಂದ್ರು ಅಲಿಯಾಸ್ ತಿರುವೆಂದಿಗಂ ಮತ್ತು ಕರ್ನಾಟಕದ ಶೃಂಗೇರಿಯ ಬೆಳಗೂಡು ಕೂಡಿಗೆಯ ಶ್ರೀಮತಿ ಎಂಬಾಕೆಯನ್ನು ಕೇರಳ ಪೊಲೀಸರು ವಶಪಡಿಸಿಕೊಂಡು ವಿಚಾರಣೆಗೆ ಒಳಪಡಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.

ಇದೀಗ ನಕ್ಸಲರು ಕೊಡಗಿನ ಬಿರುನಾಣಿ ಸಮೀಪದ ಕೇರಳದ ಕಣ್ಣೂರು ಜಿಲ್ಲೆಯ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಕಾಣಿಸಿಕೊಂಡಿದ್ದು, ಸೋಮವಾರ ಬೆಳಗ್ಗೆ ಗುಂಡಿನ ಚಕಮಕಿ ನಡೆದಿದೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಕೊಡಗು ಜಿಲ್ಲೆಯಲ್ಲೂ ಮುಂಜಾಗ್ರತಾ ಕ್ರಮವಾಗಿ ನಾಕಾಬಂದಿ ಹಾಕಲಾಗಿದ್ದು, ತೀವ್ರ ತಪಾಸಣೆ ನಡೆಸಲಾಗುತ್ತಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!