ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಶಾಸಕಿ ರೂಪಾಲಿ ನಾಯ್ಕರಿಂದ ಪ್ರಯತ್ನ

ಹೊಸ ದಿಗಂತ ವರದಿ, ಅಂಕೋಲಾ:

ಹಿಂದುಳಿದ ಬುಡಕಟ್ಟು ಹಾಲಕ್ಕಿ ಜನಾಂಗವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ದಿಶೆಯಲ್ಲಿ ಕಾರವಾರ ಅಂಕೋಲಾ ಕ್ಷೇತ್ರದ ಶಾಸಕಿ ರೂಪಾಲಿ ನಾಯ್ಕ ಅವರು ತಮ್ಮ ಪ್ರಯತ್ನ ಮುಂದುವರಿಸಿದ್ದು, ಬೆಳಗಾವಿಯ ಸುವರ್ಣಸೌಧದಲ್ಲಿ ಪರಿಶಿಷ್ಟ ಪಂಗಡಗಳ ಸಂಶೋಧನಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ಗೌಡ ಅವರೊಂದಿಗೆ ಹಾಲಕ್ಕಿ ಒಕ್ಕಲಿಗರ ನಿಯೋಗವನ್ನು ಭೇಟಿ
ಮಾಡಿಸಿ ಚರ್ಚೆ ನಡೆಸಿದರು.
ಸಂಸದ ಅನಂತಕುಮಾರ ಹೆಗಡೆ ಅವರ ಮುಂದಾಳತ್ವದಲ್ಲಿ ಹಾಲಕ್ಕಿ ಒಕ್ಕಲಿಗರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಅಗತ್ಯ ಕ್ರಮಗಳಿಗೆ ಶಾಸಕಿ ರೂಪಾಲಿ ನಾಯ್ಕ ಪ್ರಯತ್ನ ನಡೆಸುತ್ತಿದ್ದು ಒಂದು ತಿಂಗಳ ಹಿಂದೆ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ ಮತ್ತು ನಿಯೋಗದೊಂದಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯಕ್ಕೆ ತೆರಳಿ ಕುಲಪತಿಗಳೊಂದಿಗೆ ಮತ್ತು ಸಂಬಂಧಿಸಿದ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿ ಹಾಲಕ್ಕಿ ಒಕ್ಕಲಿಗರ ಕುರಿತು ವಿವರವಾದ ಕಡತ ಸಿದ್ಧಪಡಿಸಿ ರಾಜ್ಯ ಸರ್ಕಾರಕ್ಕೆ ನೀಡುವಂತೆ ಸೂಚಿಸಿದ್ದರು.
ಅದರಂತೆ ವಿಶ್ವ ವಿದ್ಯಾಲಯದ ತಂಡ ಹಾಲಕ್ಕಿಗಳ ಜೀವನ ಶೈಲಿಯ ಕುರಿತು ಅಧ್ಯಯನ ನಡೆಸಿ ಕಡತ ಸಿದ್ಧಪಡಿಸಿ ವಿಶ್ವ ವಿದ್ಯಾಲಯಕ್ಕೆ ನೀಡಿದ್ದು ಈ ಹಿನ್ನೆಲೆಯಲ್ಲಿ ಶಾಸಕಿ ರೂಪಾಲಿ ನಾಯ್ಕ ಅವರು ಪರಿಶಿಷ್ಟ ಪಂಗಡಗಳ ಸಂಶೋಧನಾ ಕೇಂದ್ರದ ನಿರ್ದೇಶಕರನ್ನು ಕರೆದು ಹಾಲಕ್ಕಿಗಳ ನಿಯೋಗದೊಂದಿಗೆ ಮುಖಾಮುಖಿ ಚರ್ಚೆ ನಡೆಸಿ ಕಡತವನ್ನು ಶೀಘ್ರ ಸರ್ಕಾರಕ್ಕೆ ತಲುಪುವಂತೆ ತಿಳಿಸಿದ್ದಾರೆ ಎಂದು ತಿಳಿದು ಬಂದಿದೆ.
ಹಾಲಕ್ಕಿ ಒಕ್ಕಲಿಗರ ನಿಯೋಗದಲ್ಲಿ ಉತ್ತರ ಕನ್ನಡ ಜಿಲ್ಲಾ ಹಾಲಕ್ಕಿ ಒಕ್ಕಲಿಗರ ಸಂಘದ ಅಧ್ಯಕ್ಷ ಹನುಮಂತ ಗೌಡ, ಕಡವಾಡ ಸೀಮೆಯ ರಮೇಶ ಗೌಡ, ಬೆಳಂಬಾರ ಗ್ರಾ.ಪಂ ಮಾಜಿ ಅಧ್ಯಕ್ಷ ವೆಂಕಟೇಶ ಗೌಡ, ಅಂಕೋಲಾ ಬಿಜೆಪಿ ಮಂಡಲ ಪ್ರಧಾನ ಕಾರ್ಯದರ್ಶಿ ಮಾರುತಿ ಗೌಡ, ರೈತ ಮೋರ್ಛಾ ಅಧ್ಯಕ್ಷ ಮುಕುಂದ ಗೌಡ ಪ್ರಮುಖರುಗಳಾದ ಲಕ್ಷ್ಮಣ ಗೌಡ, ಕೃಷ್ಣ ಗೌಡ, ಸಣ್ಣಪ್ಪ ಗೌಡ ಮೊದಲಾದವರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!