ಹಲಾಲ್, ಹಿಜಾಬ್ ದ್ವೇಷ ಬಿತ್ತಿ ರಾಜ್ಯದ ಘನತೆ ಹಾಳು: ಎಂ.ಬಿ. ಪಾಟೀಲ ಆಕ್ರೋಶ

ಹೊಸದಿಗಂತ ವರದಿ, ವಿಜಯಪುರ:

ಹಲಾಲ್, ಹಿಜಾಬ್ ಎನ್ನುವ ವಿಚಾರಗಳನ್ನು ಹುಟ್ಟುಹಾಕಿ ಜನರಲ್ಲಿ ದ್ವೇಷ ಬಿತ್ತಿ ರಾಜ್ಯದ ಘನತೆ, ಗೌರವ, ಹಿರಿಮೆಯನ್ನು ಬಿಜೆಪಿ ಹಾಳುಮಾಡಿದೆ ಎಂದು ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲೆಯ ಬಬಲೇಶ್ವರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಶ್ರೇಷ್ಠ ಸಂಸ್ಕೃತಿ, ಹಿರಿಮೆ, ಘನತೆ ಹೊಂದಿದ ರಾಜ್ಯವಾಗಿದೆ. ಹಿರಿಯರು ಶ್ರೇಷ್ಠ ಸಂಸ್ಕೃತಿಯನ್ನು ನಮಗೆ ಬಳುವಳಿಯಾಗಿ ಬಿಟ್ಟು ಹೋಗಿದ್ದಾರೆ. ಆದರೆ ಬಿಜೆಪಿ ಈ ಸಂಸ್ಕೃತಿಗೆ ಧಕ್ಕೆ ತರುವ ಕೆಲಸ ಮಾಡುತ್ತಿದೆ ಎಂದು ದೂರಿದರು.
ಬಿಜೆಪಿಯ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ಅವರೇ ರಸ್ತೆ ವಿಷಯ ಬದಿಗೊತ್ತಿ ಹಲಾಲ್, ಹಿಜಾಬ್ ವಿಷಯವನ್ನು ಮೇಲೆ ತನ್ನಿ ಎಂದು ಹೇಳಿದ್ದು ವೈರಲ್ ಆಗಿದೆ. ಇದು ಬಿಜೆಪಿ ಸಂಸ್ಕೃತಿ. ಬಿಜೆಪಿ ತನ್ನ ಅಧಿಕಾರ ದಾಹದಿಂದಾಗಿ ರಾಜ್ಯದ ಶ್ರೇಷ್ಠ ಸಂಸ್ಕೃತಿಯನ್ನು ಧಕ್ಕೆ ತಂದಿದೆ ಎಂದು ಆರೋಪಿಸಿದರು.
ಮುಸ್ಲಿಂ ಸಮುದಾಯದ ಮೀಸಲಾತಿ ಕಿತ್ತು ಹಾಕಿ ಕಾನೂನು ಬಾಹಿರವಾಗಿ ಮೀಸಲಾತಿ ಜಾರಿಗೊಳಿಸಿದೆ, ಈ ಬಗ್ಗೆ ಕೋರ್ಟ್ ಸಹ ಅಸಮಾಧಾನ ವ್ಯಕ್ತಪಡಿಸಿದೆ ಎಂದರು.
ಚುನಾವಣೆಯ ನಂತರ ಬಸವರಾಜ ಬೊಮ್ಮಾಯಿ ಅವರನ್ನು ಬಿಜೆಪಿ ಮೂಲೆಗುಂಪಾಗಿಸುವುದು ಖಾತ್ರಿಯಾಗಿದೆ. ಈ ಹಿಂದೆ ಯಡಿಯೂರಪ್ಪ, ಈಗ ಜಗದೀಶ ಶೆಟ್ಟರ್, ಲಕ್ಷö್ಮಣ ಸವದಿಯಂತಹ ಪ್ರಭಾವಿ ನಾಯಕರನ್ನು ಬಿಜೆಪಿ ಮೂಲೆಗುಂಪು ಮಾಡಿದೆ. ಈ ಸಾಲಿಗೆ ಬಸವರಾಜ ಬೊಮ್ಮಾಯಿ ಸಹ ಸೇರುತ್ತಾರೆ, ಚುನಾವಣೆಯ ನಂತರ ಅವರನ್ನು ಮೂಲೆ ಗುಂಪಾಗಿಸುತ್ತಾರೆ ಎಂದರು.
ಗುಜರಾತ್, ಉತ್ತರ ಪ್ರದೇಶ ಮಾಡೆಲ್ ಎಂಬುದು ಕೇವಲ ಭ್ರಮೆ, ಎಸ್.ಎಂ. ಕೃಷ್ಣ ಅಧಿಕಾರ ಅವಧಿಯಲ್ಲಿ ಬೆಂಗಳೂರು ಸಿಲಿಕಾನ್ ಕ್ಯಾಪಿಟಲ್ ಆಗಿತ್ತು. ಗುಜರಾತ್‌ನಿಂದ ಇಲ್ಲಿಗೆ ಕೆಲಸ ಮಾಡಲು ಉದ್ಯೋಗಿಗಳು ಬರುತ್ತಾರೆ. ವೈದ್ಯಕೀಯ, ಎಂಜಿನೀಯರಿಂಗ್ ಹೀಗೆ ಅನೇಕ ಶೈಕ್ಷಣಿಕ ಪದವಿ ಪಡೆಯಲು ಉತ್ತರ ಪ್ರದೇಶ, ಗುಜರಾತ್ ವಿದ್ಯಾರ್ಥಿಗಳು ಕರ್ನಾಟಕಕ್ಕೆ ಬರುತ್ತಾರೆ, ಹೀಗಾಗಿ ಕರ್ನಾಟಕ ಮಾಡೆಲ್ ಶ್ರೇಷ್ಠ ಹೊರತು ಯುಪಿ ಮಾಡೆಲ್ ಅಲ್ಲ ಎಂದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!