ಹೊಸ ದಿಗಂತ ಆನ್ ಲೈನ್ ಡೆಸ್ಕ್:
ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲದ ಯುವತಿಯೋರ್ವಳು ನೇಣುಬಿಗಿದ ಸ್ಥಿತಿಯಲ್ಲಿ ಮನೆಯೊಳಗೆ ಪತ್ತೆಯಾಗಿರುವ ಘಟನೆ ನಡೆದಿದೆ.
ಇಲ್ಲಿನ ಕುಂಪಲ ಆಶ್ರಯ ಕಾಲೊನಿಯಲ್ಲಿ ಚಿತ್ತಪ್ರಸಾದ್ ಅವರ ಪುತ್ರಿ ಪ್ರೇಕ್ಷಾ(20) ಶವವಾಗಿ ಪತ್ತೆಯಾಗಿದ್ದಾಳೆ.
ಈಕೆ ಮಂಗಳೂರಿನ ಖಾಸಗಿ ಕಾಲೇಜೊಂದರಲ್ಲಿ ವಿದ್ಯಾರ್ಥಿನಿಯಾಗಿದ್ದು, ರಜೆ ಪಡೆದುಕೊಂಡು ಮನೆಯಲ್ಲೇ ಉಳಿದಿದ್ದಳು. ತಾಯಿ ಅಂಗನವಾಡಿ ಕೆಲಸಕ್ಕೆ ಹೋಗಿದ್ದು, ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದಳು. ಮಧ್ಯಾಹ್ನ ವೇಳೆ ತಾಯಿ ಊಟಕ್ಕೆಂದು ಮನೆಗೆ ಬಂದ ಸಂದರ್ಭದಲ್ಲಿ ಕೋಣೆಯೊಳಗೆ ಪ್ರೇಕ್ಷಾ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಪ್ರೇಕ್ಷಾ ಮನೆಯಲ್ಲಿ ಒಬ್ಬಳೇ ಇದ್ದ ಸಂದರ್ಭದಲ್ಲಿ ಮನೆಗೆ ಮೂವರು ಆಕೆಗೆ ಪರಿಚಿತರೇ ಬಂದಿರುವ ಶಂಕೆ ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಮಾಹಿತಿಗಳ ಪ್ರಕಾರ ಪ್ರೇಕ್ಷಾ ಇಂದು ಬೆಂಗಳೂರಿಗೆ ಫೋಟೋ ಶೂಟ್ ಗೆ ತೆರಳುವವಳಿದ್ದಳು. ಇದನ್ನು ಆಕೆಯ ಗೆಳೆಯರೇ ಆಗಿರುವ ಮೂವರ ಪೈಕಿ ಒಬ್ಬ ವಿರೋಧಿಸಿದ್ದ. ಇದೇ ಸಂಬಂಧವಾಗಿ ಕೊಲೆ ನಡೆಸಿರುವ ಶಂಕೆಯನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ. ಘಟನಾ ಸ್ಥಳಕ್ಕೆ ಉಳ್ಳಾಲ ಠಾಣಾ ಪೊಲೀಸರು ಭೇಟಿ ನೀಡಿದ್ದು, ತನಿಖೆ ನಡೆಸುತ್ತಿದ್ದಾರೆ.