ಹನುಮಾನ್ ಚಾಲೀಸಾ ಬಿತ್ತರಿಸಿದ ಆಂಪ್ಲಿಫೈಯರ್ ಕಿತ್ತು ಹಾಕಿದ ಮುಂಬೈ ಪೊಲೀಸ್

ಹೊಸದಿಗಂತ ಡಿಜಿಟಲ್ ಡೆಸ್ಕ್
ಮುಂಬೈ: ಇಲ್ಲಿನ ಘಾಟ್‌ಕೋಪರ್‌ನಲ್ಲಿರುವ ಮಹಾರಾಷ್ಟ್ರ ನವನಿರ್ಮಾಣ ಸೇನಾ ಕಚೇರಿಯ ಎದುರು ಧ್ವನಿವರ್ಧಕದಲ್ಲಿ ಹನುಮಾನ್ ಚಾಲೀಸಾ ಬಿತ್ತರಿಸಲು ಅನುಮತಿ ಪಡೆಯದ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಆಂಪ್ಲಿಫೈಯರ್ ಅನ್ನು ಕಿತ್ತು ಹಾಕಿದ್ದಾರೆ. ಅಲ್ಲದೇ ಮಹಾರಾಷ್ಟ್ರ ನವನಿರ್ಮಾಣ ಸೇನಾದ ಮುಖಂಡನನ್ನು ವಶಕ್ಕೆ ಪಡೆದಿದ್ದಾರೆ.
ಎಂಎನ್‌ಎಸ್ ಮುಖ್ಯಸ್ಥ ರಾಜ್ ಠಾಕ್ರೆ ನಿನ್ನೆಯಷ್ಟೇ, ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಿ, ಇಲ್ಲದಿದ್ದರೆ ಮಸೀದಿಯ ಮುಂದೆ ಧ್ವನಿವರ್ಧಕಗಳನ್ನು ಹಾಕಿ ಹನುಮಾನ್ ಚಾಲೀಸಾ ಪಠಿಸುತ್ತೇವೆ ಎಂದು ಹೇಳಿದ್ದರು. ಅಲ್ಲದೇ ಇಂದು ತಮ್ಮ ಪಕ್ಷದ ಕಚೇರಿ ಮುಂಭಾಗದ ಮರದಲ್ಲಿ ಆಂಪ್ಲಿಫೈಯರ್ ಅಳವಡಿಸಿ, ಹನುಮಾನ್ ಚಾಲೀಸಾ ಬಿತ್ತರಿಸಲಾಗಿತ್ತು. ಅಪರಾಹ್ನ ಸ್ಥಳಕ್ಕೆ ಆಗಮಿಸಿದ ಪೊಲೀಸರು ಆಂಪ್ಲಿಫೈಯರ್ ತೆರವುಗೊಳಿಸಿದ್ದಾರೆ.
ಸ್ಥಳದಲ್ಲಿದ್ದ ಎಂಎನ್‌ಎಸ್ ನಾಯಕ ಮಹೇಂದ್ರ ಭಾನುಶಾಲಿ ಅವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಭಾನುಶಾಲಿ, ಅನುಮತಿ ಪಡೆದಿಲ್ಲವೆಂದು ನನ್ನ ಮೇಲೆ ತೆಗೆದುಕೊಂಡರೆ ಎಲ್ಲರ ಮೇಲೂ ಕ್ರಮ ತೆಗೆದುಕೊಳ್ಳಬೇಕು. ಯಾಕೆಂದರೆ ಮಸೀದಿಗಳ ಮೇಲೆ ಧ್ವನಿವರ್ಧಕ ಅಳವಡಿಸಲು ಯಾರೂ ಅನುಮತಿ ತೆಗೆದುಕೊಳ್ಳುವುದಿಲ್ಲ. ಪೊಲೀಸರು ಅವರ ಕೆಲಸವನ್ನು ಮಾಡಿದ್ದಾರೆ. ಅದೇ ರೀತಿ ಎಲ್ಲೆಲ್ಲಿ ಧ್ವನಿವರ್ಧಕ ಬಳಸುತ್ತಾರೆ ಅಲ್ಲೆಲ್ಲಾ ಕಡೆಗಳಲ್ಲೂ ಕ್ರಮ ತೆಗೆದುಕೊಳ್ಳಬೇಕೆಂದು ರಾಜ್ ಠಾಕ್ರೆ ಹೇಳುತ್ತಾರೆ ಎಂದು ತಿಳಿಸಿದ್ದಾರೆ.
ಪೊಲೀಸರು ನನ್ನ ಆಂಪ್ಲಿಫೈಯರ್ ಅನ್ನು ಕಿತ್ತುಕೊಂಡಿದ್ದಾರೆ. ಆದರೆ ಮುಂಬರುವ ದಿನಗಳಲ್ಲಿ ಧ್ವನಿವರ್ಧಕಗಳಲ್ಲಿ ‘ಜೈ ಶ್ರೀ ರಾಮ್’ ಅನ್ನು ನುಡಿಸಲಾಗುವುದು ಎಂದು ನಾನು ಹೇಳಲು ಬಯಸುತ್ತೇನೆ ಎಂದು ಮಹೇಂದ್ರ ಭಾನುಶಾಲಿ ಹೇಳಿದ್ದಾರೆ.
₹ 5,050 ದಂಡ ವಿಧಿಸಿದ ಪೊಲೀಸರು 
ಮುಂಬೈ ಪೊಲೀಸರು ನನಗೆ ₹ 5,050 ದಂಡ ವಿಧಿಸಿದ್ದಾರೆ.  ಮತ್ತೆ ಇದನ್ನು ಮುಂದುವರಿಸಿದರೆ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಸೂಚನೆ ನೀಡಿದ್ದಾರೆ. ಮಹಾರಾಷ್ಟ್ರ ಸರಕಾರ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಮಸೀದಿ ಮುಂದೆ ದೊಡ್ಡ ಧ್ವನಿವರ್ಧಕದಲ್ಲಿ ‘ಹನುಮಾನ್ ಚಾಲೀಸಾ’ ಪಠಿಸುತ್ತೇವೆ. ಹಿಂದು ಪ್ರಾರ್ಥನೆಯಿಂದ ದ್ವೇಷ ಹುಟ್ಟಬೇಕೇ? ಯಾರಿಗಾದರೂ ತೊಂದರೆಯಾದರೆ ಕಿವಿ ಮುಚ್ಚಿಕೊಂಡು ಮನೆಯೊಳಗೆ ಕುಳಿತುಕೊಳ್ಳಿ. ಇಂತಹ ವಿಷಯಗಳನ್ನು ವಿರೋಧಿಸಿದರೆ ಅವರಿಗೆ ಉತ್ತರ ನೀಡುತ್ತೇವೆ. ಇಂದು ಏನಾಯಿತು ಎಂಬುದರ ಕುರಿತು ವಿವರಿಸಲು ನಾನು ನಾಳೆ ರಾಜ್ ಠಾಕ್ರೆ ಅವರನ್ನು ಭೇಟಿಯಾಗುತ್ತೇನೆ ಎಂದು ಮಹೇಂದ್ರ ಭಾನುಶಾಲಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!