ಭರ್ತಿಯಾದ ಹಾರಂಗಿ: ಶಾಸಕರಿಂದ ಬಾಗಿನ ಅರ್ಪಣೆ

ಹೊಸದಿಗಂತ ವರದಿ ಕುಶಾಲನಗರ:

ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಈ ಬಾರಿ ಕಳೆದ ವರ್ಷಕ್ಕಿಂತ 15 ದಿನಗಳ ಮುಂಚಿತವಾಗಿ ಭರ್ತಿಯಾಗಿದ್ದು, ಮಡಿಕೇರಿ ಕ್ಷೇತ್ರದ ಶಾಸಕ ಎಂ. ಪಿ.ಅಪ್ಪಚ್ಚು ರಂಜನ್ ಅವರು ಶನಿವಾರ ಹಾರಂಗಿ ಜಲಾಶಯಕ್ಕೆ ತೆರಳಿ ಪೂಜೆ ಸಲ್ಲಿಸಿ ನದಿಗೆ ಬಾಗಿನ ಅರ್ಪಿಸಿದರು.
ಮೊದಲು ಅಣೆಕಟ್ಟೆಯ ಮುಂಭಾಗದಲ್ಲಿರುವ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದ ಶಾಸಕರು, ನಂತರ ಅಲ್ಲಿಂದ ಸಂಪೂರ್ಣವಾಗಿ ಭರ್ತಿಯಾಗಿರುವ ಅಣೆಕಟ್ಟೆಗೆ ತೆರಳಿ ವಿಶೇಷ ಪೂಜೆ ನಡೆದ ನಂತರ ಶಾಸ್ತ್ರೋಕ್ತವಾಗಿ ನದಿಗೆ ಪೂಜೆ ಸಲ್ಲಿಸಿ ನಂತರ ಬಾಗಿನ ಸಮರ್ಪಿಸಿದರು.
ಈ ಸಂದರ್ಭ ಮಾತನಾಡಿದ ಶಾಸಕ ಅಪ್ಪಚ್ಚು ರಂಜನ್, ಈ ಬಾರಿ ಹಾರಂಗಿ ರಾಜ್ಯದಲ್ಲಿ ಪ್ರಥಮವಾಗಿ ಭರ್ತಿಯಾದ ಅಣೆಕಟ್ಟೆಯಾಗಿದೆ. ಹಾರಂಗಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಜಲಾಶಯಕ್ಕೆ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ . ಪರಿಣಾಮವಾಗಿ ಕಳೆದ ವರ್ಷಕ್ಕಿಂತ 15 ದಿನ ಮುಂಚಿತವಾಗಿಯೇ ಜಲಾಶಯ ಭರ್ತಿಯಾಗಿದೆ ಎಂದರು..
ಅಣೆಕಟ್ಟೆಯ ನೀರಿನ ಸಂಗ್ರಹ ಮಟ್ಟ ಹಾಗೂ ಭದ್ರತೆಯ ದೃಷ್ಟಿಯಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸಲಾಗುತ್ತಿದೆ. ಅಣೆಕಟ್ಟೆಗೆ ಒಳಹರಿವಿನ ಪ್ರಮಾಣ17,000 ಕ್ಯುಸೆಕ್ ಇದ್ದು , ನೀರಿನ ಸಮ ಮಟ್ಟವನ್ನು ಕಾಪಾಡಿಕೊಂಡು ಶನಿವಾರದಿಂದ ನದಿಗೆ 1,200 ಕ್ಯುಸೆಕ್ ನೀರನ್ನು ಹರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಯ ಹಾರಂಗಿ ಮತ್ತು ಕಾವೇರಿ ನದಿಯಿಂದ ವರ್ಷಂಪ್ರತಿ ಅಂದಾಜು 450 ಟಿ ಎಂ ಸಿ ನೀರು ಹರಿದು ಹೋಗಿ ಕೆ ಆರ್ ಎಸ್ ಅಣೆಕಟ್ಟೆಗೆ ಸೇರುತ್ತದೆ. ಇದರಿಂದಾಗಿ ಮಂಡ್ಯ, ತಮಿಳುನಾಡು, ಪಾಂಡಿಚೇರಿ ವ್ಯಾಪ್ತಿಯ ಜನರಿಗೆ ಅನುಕೂಲವಾಗುತ್ತಿದೆ. ರಾಜ್ಯದಲ್ಲಿ ನೀರಿನ ಸಮಸ್ಯೆ ಬಗೆ ಹರಿದು ಉತ್ತಮವಾದ ಮಳೆ ಬಂದು ಕಾವೇರಿ ನದಿ ತುಂಬುವುದರ ಜೊತೆಗೆ ಕೆ ಆರ್ ಎಸ್ ಅಣೆಕಟ್ಟೆಯೂ ತುಂಬಿ ನಾಡಿನ ಜನತೆಗೆ ಅನುಕೂಲವಾಗಲಿ. 2018-19 ಸಾಲಿನ ರೀತಿಯಲ್ಲಿ ಯಾವುದೇ ರೀತಿಯ ತೊಂದರೆಗಳು ಆಗದಂತೆ ಕಾವೇರಿ ಮಾತೆಯಲ್ಲಿ ಪ್ರಾರ್ಥಿಸುವುದಾಗಿ ಅಪ್ಪಚ್ಚುರಂಜನ್ ನುಡಿದರು.
ಈ ಸಂದರ್ಭ ನೀರಾವರಿ ಇಲಾಖೆಯ ಕಾರ್ಯಪಾಲಕ ಅಭಿಯಂತರ ಪುಟ್ಟಸ್ವಾಮಿ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಹೇಂದ್ರ ಕುಮಾರ್, ಕಿರಿಯ ಇಂಜಿನಿಯರ್ ಸಿದ್ದರಾಜು, ಕಿರಣ್, ಕುಶಾಲನಗರ ಪಟ್ಟಣ ಪಂಚಾಯತಿ ಅಧ್ಯಕ್ಷ ಜೈವರ್ಧನ್, ಕೂಡುಮಂಗಳೂರು ಗ್ರಾಮ ಪಂಚಾಯತಿ ಅಧ್ಯಕ್ಷೆ ಇಂದಿರಾ ರಮೇಶ್ ಮುಳ್ಳುಸೋಗೆ ಗ್ರಾಮ ಪಂಚಾಯತಿ ಅಧ್ಯಕ್ಷ ಚಲುವರಾಜ್, ನಗರ ಬಿ ಜೆ ಪಿ ಅಧ್ಯಕ್ಷ ಉಮಾಶಂಕರ್, ಕುಡಾ ಅಧ್ಯಕ್ಷ ಎಂ.ಎಂ.ಚರಣ್ ಸದಸ್ಯರಾದ ವೈಶಾಖ್, ಪುಂಡರೀಕಾಕ್ಷ, ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯರಾದ ಕೆ ಕೆ ಭೋಗಪ್ಪ, ಮಣಿಕಂಠ, ದಿನೇಶ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಮಂಜುಳಾ, ಲೋಕೇಶ್ವರಿ ಗೋಪಾಲ್, ತಾಲೂಕು ಬಿ ಜೆ ಪಿ ಅಧ್ಯಕ್ಷ ಮನು ಕುಮಾರ್ ರೈ, ಕೂಡುಮಂಗಳೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ವಾಂಚಿರ ಮನು ನಂಜುಂಡ, ಪ್ರಮುಖರಾದ ಕೆ ವರದ , ಮನು, ಎಂ.ಡಿ. ಕೃಷ್ಣಪ್ಪ, ಸೇರಿದಂತೆ ಬಿ ಜೆ ಪಿಯ ವಿವಿಧ ಘಟಕದ ಪದಾಧಿಕಾರಿಗಳು ಸೇರಿದಂತೆ ನೂರಾರು ಮಂದಿ ಹಾಜರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!