ಬಡ್ಡಿ ಹಣ ಪಡೆದವರ ಕಿರುಕುಳ: ಆತ್ಮಹತ್ಯೆ ಮಾಡಿಕೊಂಡ ರಿಕ್ಷಾ ಚಾಲಕ

ಹೊಸದಿಗಂತ ವರದಿ,ಅಂಕೋಲಾ:

ಬಡ್ಡಿಗೆ ಹಣ ಪಡೆದವರ ಕಿರುಕುಳ ತಾಳಲಾರದೆ ಬೇಸತ್ತು ಆಟೋ ರಿಕ್ಷಾ ಚಾಲಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪೂಜಗೇರಿಯಲ್ಲಿ ಶನಿವಾರ ಬೆಳಿಗ್ಗೆ ನಡೆದಿದೆ.
ಪೂಜಗೇರಿ ನಿವಾಸಿ ಅಶೋಕ ಗೋಂಗಾ ಗಾಂವಕರ(44) ಮೃತ ವ್ಯಕ್ತಿಯಾಗಿದ್ದು ವೃತ್ತಿಯಲ್ಲಿ ಆಟೋ ಚಾಲಕನಾಗಿದ್ದ ಈತ ಅಂಕೋಲಾ ಲಕ್ಷ್ಮೇಶ್ವರದ ನಿವಾಸಿ ರಾಜು ನಾಯಕ ಎನ್ನುವವರ ಬಳಿ ಬಡ್ಡಿ ಸಾಲ ಪಡೆದಿದ್ದ ಮತ್ತು ಹಲವು ಬಾರಿ ಬಡ್ಡಿ ಹಣವನ್ನು ಸಹ ಕಟ್ಟಿದ ಸಾಲ ನೀಡಿದ್ದ ರಾಜು ನಾಯಕ ಕೆಲವು ತಿಂಗಳ ಹಿಂದೆ ಮೃತ ಪಟ್ಟಿದ್ದು ನಂತರದ ದಿನಗಳಲ್ಲಿ ಅವನ ಪತ್ನಿ ಮಂಜುಳಾ ನಾಯಕ ಮತ್ತು ಕನಸೆಗದ್ದೆಯ ನಿವಾಸಿ ನಾಗರಾಜ ಅಂಕೋಲೆಕರ್ ಎನ್ನುವವರು ಸೇರಿ ಪ್ರತಿ ತಿಂಗಳು ಬಡ್ಡಿ ಹಣಕ್ಕಾಗಿ ಕಿರುಕುಳ ನೀಡುವುದು ಹೆಚ್ಚತೊಡಗಿತ್ತು. 2ರಿಂದ 3 ಬಾರಿ ಮನೆ ಬಾಗಿಲಿಗೆ ಹೋಗಿ ಬೆದರಿಕೆ ಸಹ ಹಾಕಿದ್ದರು ಎನ್ನಲಾಗಿದೆ.
ಶುಕ್ರವಾರ ಸಹ ಸಂಜೆ 6.45 ರಿಂದ ರಾತ್ರಿ ರಾತ್ರಿ 8.30 ರ ವರೆಗೆ ಮೃತ ಅಶೋಕನ ಮನೆಗೆ ತೆರಳಿ ದಾಂದಲೆ ಮಾಡಿ ಹಣ ನೀಡದಿದ್ದರೆ ನಿನಗೆ ಅಂಕೋಲಾದಲ್ಲಿ ಸುತ್ತಾಡಲು ಬಿಡುವುದಿಲ್ಲ, ಜೀವ ಸಹಿತ ಉಳಿಸುವುದಿಲ್ಲ,ಒಂದು ಗತಿ ಕಾಣಿಸುತ್ತೆವೆ ಎಂದು ಜೀವ ಬೆದರಿಕೆ ಹಾಕಿ ಹಣ ನೀಡಲು ಆಗದಿದ್ದರೆ ವಿಷ ಕುಡಿದು ಸಾಯಿ ಎಂದು ಹೇಳಿ ಹೋಗಿದ್ದರು.
ಇದನ್ನೇ ಮನಸ್ಸಿಗೆ ಹಚ್ಚಿಕೊಂಡು ಅಶೋಕ ಗಾಂವಕರ್ ಶನಿವಾರ ಬೆಳಿಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ
ಶರಣಾಗಿದ್ದಾನೆ.
ಈ ಕುರಿತು ಮೃತನ ಪತ್ನಿ ಉಷಾ ಗಾಂವಕರ್ ಅಂಕೋಲಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪಿ.ಎಸ್. ಐ ಪ್ರೇಮನಗೌಡ ಪಾಟೀಲ್ ಪ್ರಕರಣ ದಾಖಲಿಸಿ ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.
ತಾಲೂಕಿನಲ್ಲಿ ಸರ್ಕಾರಿ ಕೆಲಸ ಹಾಗೂ ಇನ್ನಿತರ ಮೂಲಗಳಿಂದ ಸಾಕಷ್ಟು ಹಣ ಸಂಪಾದಿಸುವ ಕೆಲವರು ಅಸಹಾಯಕ ಪರಿಸ್ಥಿತಿಯಲ್ಲಿ ಹಣದ ಅಗತ್ಯತೆ ಇರುವವರಿಗೆ ಅತಿ ಹೆಚ್ಚು ಬಡ್ಡಿ ದರದಲ್ಲಿ ಸಾಲ ನೀಡುತ್ತಿದ್ದು ಇವರಿಂದ ಪಡೆದ ಸಾಲಕ್ಕೆ ಎಷ್ಟೇ ಬಡ್ಡಿ ಕಟ್ಟಿದರೂ ತೀರಿಸಲಾಗದೆ ಗೂಂಡಾ ವರ್ತನೆ ಮಾನಸಿಕ ಕಿರುಕುಳ ತಾಳಲಾರದೆ ಆತ್ಮಹತ್ಯೆಯ ಮಾರ್ಗ ಹಿಡಿಯುವ ಪರಿಸ್ಥಿತಿ ಬಂದೊದಗತೊಡಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!