ಕೆಎಲ್‌ ರಾಹುಲ್‌ಗೆ ಶಾಪವಾದ ಫಿಟ್ನೆಸ್‌ ಸಮಸ್ಯೆ: ಉಪನಾಯಕನ ಪಟ್ಟಕ್ಕೆ ಹಾರ್ದಿಕ್‌ ಪಾಂಡ್ಯ..?

ಹೊಸದಿಗಂತ ಡಿಜಿಟಲ್‌ ಡೆಸ್ಕ್
ಟೀಂ ಇಂಡಿಯಾದಲ್ಲಿ ರೋಹಿತ್‌ ಶರ್ಮಾ ನಂತರ ನಾಯಕ ಯಾರು ಎಂಬ ಪ್ರಶ್ನೆ ಮುಂದಿಟ್ಟರೆ, ಕನಿಷ್ಠ 4-5 ಹೆಸರುಗಳು ಕೇಳಿಬರುತ್ತವೆ. ಅದರಲ್ಲಿ ಮುಂಚೂಣಿಯಲ್ಲಿ ಕೇಳಿಬರುವ ಹೆಸರು ಕನ್ನಡಿಗ ಕೆ.ಎಲ್‌. ರಾಹುಲ್‌ ರದ್ದು. ಸದ್ಯ, ಟೀಂ ಇಂಡಿಯಾ ಉಪನಾಯಕರಾಗಿರುವ ರಾಹುಲ್‌ ಅದೃಷ್ಟ ಚನ್ನಾಗಿದ್ದಂತೆ ಕಾಣುತ್ತಿಲ್ಲ. ರಾಹುಲ್‌ ಪದೇ ಪದೆ ಗಾಯಾಳುವಾಗುತ್ತಿರುವುದನ್ನು ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಭಾರತ ಟಿ20 ತಂಡದ ಉಪನಾಯಕರನ್ನಾಗಿ ಹಾರ್ದಿಕ್‌ ಪಾಂಡ್ಯಾರನ್ನು ನೇಮಕ ಮಾಡಲು ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಅದ್ಭುತ ಬ್ಯಾಟಿಂಗ್‌ ನಿಂದ ಟೀಂ ಇಂಡಿಯಾದ ಆಧಾರ ಸ್ತಂಭವಾಗಿರುವ ಕೆಎಲ್ ರಾಹುಲ್ ಗೆ ಇತ್ತೀಚೆಗೆ ಫಿಟ್ನೆಸ್ ಸಮಸ್ಯೆ ಶಾಪವಾಗಿ ಕಾಡುತ್ತಿದೆ. 2022ರ ಆರಂಭದಲ್ಲಿ ಉಪನಾಯಕ ಸ್ಥಾನಕ್ಕೆ ಏರಿದ್ದ ರಾಹುಲ್‌ ಆ ಬಳಿಕ ನಡೆದ ಎಲ್ಲಾ ಸರಣಿಗಳಿಂದ ಸತತವಾಗಿ ಹೊರಗುಳಿದಿದ್ದಾರೆ. ಪ್ರಸ್ತುತ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ T20 ಸರಣಿಯಲ್ಲೂ ಸಹ ಅವರು ತಂಡದ ಭಾಗವಾಗಿಲ್ಲ. ಅವರ ಫಿಟ್ನೆಸ್ ಸಮಸ್ಯೆಯನ್ನು ಗಮನಿಸಿರುವ ಬಿಸಿಸಿಐ  ಹಾರ್ದಿಕ್ ಪಾಂಡ್ಯಾಗೆ ಉಪನಾಯಕ ಪಟ್ಟ ಕಟ್ಟಲು ಮುಂದಾಗಿದೆ.
“ಹಾರ್ದಿಕ್ ವಿಶ್ವ ದರ್ಜೆಯ ಆಟಗಾರ ಮತ್ತು ಪೂರ್ಣ ಫಿಟ್‌ನೆಸ್‌ನಲ್ಲಿ ತಂಡಕ್ಕೆ ಮರಳಿರುವುದು ಅದ್ಭುತವಾಗಿದೆ. 2022 ರ T20 ವಿಶ್ವಕಪ್‌ ನಲ್ಲಿ ಪಾಂಡ್ಯರನ್ನು ಉಪನಾಯಕ ಎಂದು ಹೆಸರಿಸುವ ಚಿಂತನೆ ನಡೆದಿದೆ. ಅವರನ್ನು ಉಪನಾಯಕ ಎಂದು ಹೆಸರಿಸಬೇಕೆ ಎಂಬುದು ಆಯ್ಕೆದಾರರಿಗೆ ಬಿಟ್ಟ ವಿಚಾರ. ಆದರೆ ಅವರು ಈಗಾಗಲೇ ಅವರು ತಂಡದ ಗುಂಪಿನಲ್ಲಿ ನಾಯಕರಾಗಿದ್ದಾರೆ. ಆಲ್ ರೌಂಡರ್ ಆಗಿರುವ ಅವರು ಬ್ಯಾಟಿಂಗ್-‌ ಬೌಲಿಂಗ್ ಎರಡೂ ಸನ್ನಿವೇಶಗಳನ್ನು ಅರ್ಥ ಮಾಡಿಕೊಳ್ಳುತ್ತಾರೆ. ಅವರು ಅತ್ಯುತ್ತಮ ನಾಯಕತ್ವ ಕೌಶಲ್ಯವನ್ನು ಹೊಂದಿರುವುದನ್ನು ನಾವು ಐಪಿಎಲ್‌ನಲ್ಲಿ ನೋಡಿದ್ದೇವೆ. ಅವರು ಖಂಡಿತವಾಗಿಯೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಾರೆ ”ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ಬಿಚ್ಚಿಟ್ಟಿದ್ದಾರೆ.
ಐಪಿಎಲ್ 2022 ರಲ್ಲಿ ಗುಜರಾತ್ ಟೈಟಾನ್ಸ್‌ನ ನಾಯಕರಾಗಿ ಹೆಸರಿಸಲ್ಪಟ್ಟ ಪಾಂಡ್ಯ, ಚೊಚ್ಚಲ ಟೂರ್ನಿಯಲ್ಲೇ ತಂಡವನ್ನು ಪ್ರಶಸ್ತಿಯತ್ತ ಮುನ್ನಡೆಸಿದ್ದರು. ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ರಾಹುಲ್ ಹೊರಬಿದ್ದ ಬಳಿಕ ಅವರು ರಿಷಬ್ ಪಂತ್‌ ಡೆಫ್ಯೂಟಿಯಾಗಿ ಆಡಿದ್ದರು.
ಆ ಬಳಿಕ ಐರ್ಲೆಂಡ್ ವಿರುದ್ಧದ ಎರಡು ಪಂದ್ಯಗಳ T20I ಸರಣಿಗೆ ತಂಡದ ನಾಯಕರಾಗಿ ಹೆಸರಿಸಲ್ಪಟ್ಟರು. ರಿಷಭ್‌ ರನ್ನೇ ಹಿಂದೆ ತಳ್ಳಿ ವೆಸ್ಟ್ ಇಂಡೀಸ್ ವಿರುದ್ಧ ನಡೆಯುತ್ತಿರುವ T20I ಸರಣಿಗೆ ಭಾರತದ ಉಪನಾಯಕರಾಗಿ ನೇಮಕಗೊಂಡಿದ್ದಾರೆ ಮತ್ತು ಅವರ ಸ್ಥಾನವನ್ನು ಉಳಿಸಿಕೊಳ್ಳಲು ಸಿದ್ಧರಾಗಿದ್ದಾರೆ.
ಮುಂದೆ ನಡೆಯಲಿರುವ T20I ಸ್ವರೂಪದಲ್ಲಿ ಪಾಂಡ್ಯ ಅವರನ್ನು ತಂಡದ ಖಾಯಂ ಉಪನಾಯಕ ಎಂದು ಹೆಸರಿಸಬಹುದೇ ಎಂಬುದನ್ನು ಕಾದು ನೋಡಬೇಕಾಗಿದೆ. 2022 ರ ಏಷ್ಯಾಕಪ್‌ಗೆ ಆಯ್ಕೆದಾರರು ತಂಡವನ್ನು ಹೆಸರಿಸಿದಾಗ ಸ್ಪಷ್ಟ ಚಿತ್ರಣ ಹೊರಬೀಳಲಿದೆ. ಏಕೆಂದರೆ ರಾಹುಲ್ ಅವರು ಪಂದ್ಯಾವಳಿಗೆ ಮರಳಲು ಸಿದ್ಧರಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!