-ರಕ್ಷಿತ್ ಬೆಳಪು
ಹೊಸದಿಗಂತ ವರದಿ, ಕುಂದಾಪುರ:
ಮಾಡದ ತಪ್ಪಿಗೆ ಸೌದಿಯಲ್ಲಿ ಜೈಲು ಪಾಲಾಗಿ ನರಕಯಾತನೆ ಅನುಭವಿಸುತ್ತಿರುವ ಹರೀಶ್ ಬಂಗೇರ ಅವರನ್ನು ಶೀಘ್ರವಾಗಿ ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಟ್ವಿಟರ್ ಅಭಿಯಾನ ನಡೆಸಲು ಕುಂಭಾಶಿಯ ಯುವಕರು ಸಜ್ಜಾಗಿದ್ದಾರೆ.
2019ರ ಡಿಸೆಂಬರ್ 21ರಂದು ಸೌದಿಯಲ್ಲಿ ಬಂಧಿತನಾದ ಹರೀಶ್ ಬಂಗೇರ ಅವರನ್ನು ಸೌದಿ ಜೈಲಿನಿಂದ ಬಿಡುಗಡೆಗೊಳಿಸಿ ಭಾರತಕ್ಕೆ ಕರೆತರಲು ಒಂದೂವರೆ ವರ್ಷವಾದರೂ ಸಾಧ್ಯಗಿಲ್ಲ.ಇಮೇಲ್ನಲ್ಲಿ ಮಾಹಿತಿ
ದಿಲ್ಲಿಯ ವಿದೇಶಾಂಗ ಕಚೇರಿಗೆ ಈ ವಿಷಯ ತಲುಪಿದ್ದು, ಕಚೇರಿಯಿಂದ ಹರೀಶ್ ಬಂಗೇರ ಅವರ ಪತ್ನಿಗೆ ಇಮೇಲ್ ಬಂದಿದೆ. ಈ ವಿಚಾರವಾಗಿ ಮುಂದಿನ ಕ್ರಮಕೈಗೊಂಡು ತಮ್ಮ ಗಮನಕ್ಕೆ ತರುತ್ತೇವೆ ಎಂದು ಟ್ವೀಟ್ನಲ್ಲಿ ಉಲ್ಲೇಖಿಸಲಾಗಿದೆ.
ತಪ್ಪು ಮಾಡಿದ ಯುವಕರಿಗೆ ಶಿಕ್ಷೆ ಇಲ್ಲವೇ?: ಕರ್ನಾಟಕದ ಮೂಡುಬಿದಿರೆಯ ಇಬ್ಬರು ಮುಸ್ಲಿಂ ಅಣ್ಣ ತಮ್ಮಂದಿರು ಮಾಡಿದ ತಪ್ಪಿಗೆ ಹರೀಶ್ ಮರಳುಗಾಡಿನ ದೇಶದಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾನೆ. ತಪ್ಪು ಮಾಡಿದ ಇಬ್ಬರು ಯುವಕರು ಕೋರ್ಟ್ನಿಂದ ಜಾಮೀನು ಪಡೆದು ರಾಜಾರೋಷವಾಗಿ ತಿರುಗಾಡುತ್ತಿರುವುದು ಭಾರತದ ಕಾನೂನು ವ್ಯವಸ್ಥೆಯ ಲೋಪವನ್ನು ಎತ್ತಿ ತೋರಿಸುತ್ತಿದೆ.
ಸಂಸದರು ಧ್ವನಿ ಎತ್ತಲಿ: ಹಿಂದೂಗಳಿಗೆ ಎಲ್ಲಿಯೇ ಅನ್ಯಾಯವಾದರೂ ಮೊದಲು ಧ್ವನಿ ಎತ್ತುವುದು ಉಡುಪಿ ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ. ತನ್ನ ಕ್ಷೇತ್ರದ ಯುವಕನಿಗೆ ಸಮಸ್ಯೆಯಾಗಿರುವ ಹಿನ್ನೆಲೆಯಲ್ಲಿ ಶೋಭಾ ಕರಂದ್ಲಾಜೆ ಧ್ವನಿ ಎತ್ತಿ ಹರೀಶ್ ಶೀಘ್ರವೇ ಬಿಡುಗಡೆಯಾಗುವಂತೆ ಮಾಡಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಜನಪ್ರತಿನಿಧಿಗಳ ಅಸಡ್ಡೆಯಿಂದ ವಿಳಂಬ: ಕಳೆದ ಒಂದೂವರೆ ವರ್ಷದಿಂದ ಹರೀಶ್ ಬಂಗೇರ ಅವರನ್ನು ಬಿಡುಗಡೆಗೊಳಿಸಿ ಎಂದು ಅಲೆಯದ ಕಚೇರಿಗಳಿಲ್ಲ. ಎಲ್ಲಾ ಜನಪ್ರತಿನಿಧಿಗಳ ಕಚೇರಿಗೂ ತೆರಳಿ ಬಂದಾಯಿತು. ಆದರೆ ಸ್ಥಳೀಯ ಜನಪ್ರತಿನಿಧಿಗಳ ಅಸಡ್ಡೆಯಿಂದ ಹರೀಶ್ ಬಂಧನ ವಿಳಂಬವಾಗಿತ್ತಿದೆ. ಈ ವೇಳೆ ಮಾತೃ ಸಮಾನರಾದ ಸುಷ್ಮಾ ಸ್ವರಾಜ್ ಅವರು ನೆನಪಾಗುತ್ತಾರೆ. ಅವರು ಇದ್ದಿದ್ದರೇ ಇಷ್ಟು ಹೊತ್ತಿಗೆ ಹರೀಶ್ ಭಾರತದಲ್ಲಿರುತ್ತಿದ್ದರು ಎಂದು ಸ್ಥಳೀಯರಾದ ಲೋಕೇಶ್ ಅಂಕದಕಟ್ಟೆ ಹತಾಶೆ ವ್ಯಕ್ತಪಡಿಸುತ್ತಾರೆ.
ದಯವಿಟ್ಟು ಸೆರೆಯಿಂದ ಪತಿಯನ್ನು ಬಿಡಿಸಿಕೊಡಿ: ಚಿಕ್ಕ ಮಗು ಇವತ್ತಿಗೂ ಅಪ್ಪ ಯಾವತ್ತು ಬರುತ್ತಾರೆ ಎಂದು ಕೇಳುತ್ತಿದೆ. ಮನೆಯನ್ನು ನಡೆಸುವುದು ತುಂಬಾ ಕಷ್ಟವಾಗಿದೆ. ದಯವಿಟ್ಟು ನನ್ನ ಗಂಡನನ್ನು ಬಿಡಿಸಿಕೊಡಿ ಎಂದು ಹರೀಶ್ ಬಂಗೇರ ಪತ್ನಿ ಗೋಗರೆಯುತ್ತಾರೆ.