ಕಾಂಗ್ರೆಸ್‌ನ ವಿರೋಧದ ನಡುವೆ ಹರಿಯಾಣ ಅಸೆಂಬ್ಲಿ ಅಂಗೀಕರಿಸಿತು ಮತಾಂತರ ನಿಷೇಧ ಮಸೂದೆ

ಹೊಸದಿಗಂತ ಡಿಜಿಟಲ್ ಡೆಸ್ಕ್

ಹರಿಯಾಣ: ಕಾಂಗ್ರೆಸ್‌ನ ವಿರೋಧ ಮತ್ತು ಸದನ ಬಹಿಷ್ಕಾರದ ನಡುವೆಯೇ ಹರಿಯಾಣ ವಿಧಾನಸಭೆಯು ಕಾನೂನುಬಾಹಿರ ಧರ್ಮ ಮತಾಂತರ ತಡೆ ಮಸೂದೆ, 2022 ಅನ್ನು ಅಂಗೀಕರಿಸಿದೆ.
ಮಾ. 4ರಂದು ವಿಧಾನ ಸಭೆಯ ಬಜೆಟ್ ಅಧಿವೇಶನದಲ್ಲಿ ಮಂಡಿಸಲಾದ ಮಸೂದೆಯು ವಂಚನೆ, ಬಲವಂತ, ಅನಗತ್ಯ ಪ್ರಭಾವ, ಬಲಾತ್ಕಾರ, ಆಮಿಷ ಅಥವಾ ಯಾವುದೇ ಮೋಸದ ವಿಧಾನದಿಂದ ಅಥವಾ ವಿವಾಹದ ಮೂಲಕ ಧಾರ್ಮಿಕ ಮತಾಂತರವನ್ನು ನಿಷೇಧಿಸುತ್ತದೆ. ಅದು ಅಪರಾಧವಾಗಿದೆ.
ಹರಿಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್ ಅವರು ಸದನದಲ್ಲಿ ಮಸೂದೆ ಕುರಿತು ಮಾತನಾಡಿ, ಮಸೂದೆಯು ಯಾವುದೇ ಧರ್ಮದ ವಿರುದ್ಧ ತಾರತಮ್ಯ ಮಾಡುವ ಗುರಿಯನ್ನು ಹೊಂದಿಲ್ಲ ಮತ್ತು ಅದು ಕೇವಲ ‘ಬಲವಂತದ ಮತಾಂತರ’ಗಳ ಬಗ್ಗೆ ಮಾತನಾಡುತ್ತದೆ ಎಂದು ಹೇಳಿದರು. ಅಪರಾಧ ಎಸಗುವವರಲ್ಲಿ ಭಯ ಹುಟ್ಟಿಸುವ ಉದ್ದೇಶವನ್ನು ಈ ಮಸೂದೆ ಹೊಂದಿದೆ. ಒಬ್ಬ ವ್ಯಕ್ತಿಯು ತನ್ನ ಸ್ವಂತ ಇಚ್ಛೆಯಂತೆ ಧರ್ಮವನ್ನು ಬದಲಾಯಿಸಬಹುದು, ಆದರೆ ಅದು ಬಲವಂತವಾಗಿ ಯಾರಿಗೂ ಮತಾಂತರ ಆಗಲು ಬಿಡುವುದಿಲ್ಲ. ಮೋಸದಿಂದ ಅಥವಾ ಯಾವುದೇ ರೀತಿಯ ದುರಾಸೆಯಿಂದ ಮತಾಂತರ ಮಾಡಿದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಮಸೂದೆಯನ್ನು ಟೀಕಿಸಿದ ವಿರೋಧ ಪಕ್ಷದ ನಾಯಕ ಭೂಪಿಂದರ್ ಸಿಂಗ್ ಹೂಡಾ, ಅಸ್ತಿತ್ವದಲ್ಲಿರುವ ಕಾನೂನುಗಳು ಈಗಾಗಲೇ ಬಲವಂತದ ಮತಾಂತರಕ್ಕೆ ಶಿಕ್ಷೆಯ ಅವಕಾಶವನ್ನು ಹೊಂದಿರುವುದರಿಂದ ಹೊಸ ಕಾನೂನಿನ ಅಗತ್ಯವಿಲ್ಲ. ಹೊಸ ಕಾನೂನಿನ ಅನುಷ್ಠಾನವು ಅಂತರ್ ಧರ್ಮೀಯ ವಿವಾಹಗಳು ನಡೆದ ಕುಟುಂಬಗಳ ನಡುವೆ ವಿವಾದವನ್ನು ಹೆಚ್ಚಿಸಬಹುದು ಎಂದು ಅವರು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!