Thursday, August 18, 2022

Latest Posts

ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ?: ಅರ್ಜಿದಾರನಿಗೆ ಬಾಂಬೆ ಕೋರ್ಟ್ ಪ್ರಶ್ನೆ!

ಹೊಸ ದಿಗಂತ ಆನ್ ಲೈನ್ ಡೆಸ್ಕ್:

ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ? ನಾನು ಅದರ ಕ್ಯಾಪ್ಟನ್‌ನಂತೆ ಎಂದು ಅರ್ಜಿದಾರರಿಗೆ ಬಾಂಬೆ ಹೈಕೋರ್ಟ್ ಹೇಳಿದ ಘಟನೆ ಬುಧವಾರ ನಡೆದಿದೆ.
‌ ವಕೀಲರು ಮತ್ತು ನ್ಯಾಯಾಧೀಶರ ಆದ್ಯತೆ ಮೇರೆಗೆ ಕೋವಿಡ್-19 ಲಸಿಕೆಯನ್ನ ನೀಡಬೇಕೆಂದು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ಕೈಗೆತ್ತಿಗೊಂಡ ಬಾಂಬೆ ಹೈಕೋರ್ಟ್ , ನ್ಯಾಯಾಂಗಕ್ಕೆ ಆದ್ಯತೆ ಮೇಲೆ ಲಸಿಕೆ ಪಡೆಯುವುದು ʼಅರ್ಜಿದಾರರ ಸ್ವಾರ್ಥʼ ಎಂದು ಹೇಳಿದೆ.
ಮುಖ್ಯ ನ್ಯಾಯಮೂರ್ತಿ ದೀಪಕ್ ದಟ್ಟಾ ಮತ್ತು ನ್ಯಾಯಮೂರ್ತಿ ಜಿ.ಎಸ್.ಕುಲಕರ್ಣಿ ಅವರನ್ನೊಳಗೊಂಡ ಪೀಠ, ನ್ಯಾಯಾಂಗ, ವಕೀಲರು ಮತ್ತು ಅವರ ಸಿಬ್ಬಂದಿಗಳನ್ನು ಮುಂಚೂಣಿ ನೌಕರರೆಂದು ಪರಿಗಣಿಸಬೇಕು ಮತ್ತು ಆದ್ಯತೆಯ ಮೇರೆಗೆ ಕೋವಿಡ್-19 ವಿರುದ್ಧ ಲಸಿಕೆಯನ್ನ ನೀಡಬೇಕು ಎಂದು ಮುಂಬೈ ಮೂಲದ ವಕೀಲರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದರು.
ಅರ್ಜಿದಾರರ ಪರ ವಕೀಲರಾದ ವೈಷ್ಣವಿ ಘೋಲವೆ ಮತ್ತು ಯೋಗೇಶ್ ಮೊರ್ಬಾಲೆ ಅವರು ಕಳೆದ ವಾರ ತಮ್ಮ ವಕೀಲರಾದ ವಿನೋದ್ ಪಿ.ಸಾಂಗ್ವಿಕರ್ ಮತ್ತು ಯಶೋದೀಪ್ ದೇಶ್ ಮುಖ್ ಅವರ ಮೂಲಕ ವಾದ ಮಂಡಿಸಿದರು.
ನ್ಯಾಯಾಂಗದ ಸದಸ್ಯರಿಗೆ, ವಕೀಲರಿಗೆ ಮತ್ತು ಅವರ ಸಿಬ್ಬಂದಿಯನ್ನು ಮುಂಚೂಣಿ ಕಾರ್ಯಕರ್ತರು ಎಂದು ಪರಿಗಣಿಸಬೇಕು. ಅವರಿಗೆ ಆದ್ಯತೆ ಆಧಾರದಲ್ಲಿ ಕೋವಿಡ್ ಲಸಿಕೆಗಳನ್ನು ನೀಡಬೇಕು ಎಂದು ಮುಂಬೈ ಮೂಲದ ವಕೀಲರ ತಂಡವು ಅರ್ಜಿ ಸಲ್ಲಿಸಿತ್ತು.
ಸಾಂಕ್ರಾಮಿಕದ ಅವಧಿಯುದ್ದಕ್ಕೂ ಹೈಕೋರ್ಟ್ ಕೆಲಸ ನಿರ್ವಹಿಸಿದೆ. ಎಲ್ಲ ವಕೀಲರು, ನ್ಯಾಯಾಧೀಶರು ಮತ್ತು ಸಿಬ್ಬಂದಿ ವೈರಾಣು ಸೋಂಕು ತಗುಲುವ ಅಪಾಯದ ನಡುವೆಯೂ ಕೆಲಸ ಮುಂದುವರಿಸಿದ್ದಾರೆ ಎಂದು ಪೀಠದ ಮುಂದೆ ಅರ್ಜಿದಾರ ವಕೀಲರು ಸಲ್ಲಿಸಿದ್ದ ಮನವಿಯಲ್ಲಿ ಹೇಳಿದ್ದರು.
ಸ್ವಚ್ಛತಾ ಕೆಲಸಗಾರರು, ವಿವಿಧ ಖಾಸಗಿ ಸಂಸ್ಥೆಗಳ ಸಿಬ್ಬಂದಿ ಕೂಡ ಈ ಅವಧಿಯಲ್ಲಿ ಕೆಲಸ ಮಾಡಿದ್ದಾರೆ. ಖಾಸಗಿ ಸಂಘಸಂಸ್ಥೆಗಳ ಪರವಾಗಿ, ಡಬ್ಬಾವಾಲಾಗಳ ಪರವಾಗಿ ಏಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಇಲ್ಲ? ಆ ಅರ್ಥದಲ್ಲಿ ಎಲ್ಲರೂ ಮುಂಚೂಣಿ ಕೆಲಸಗಾರರೇ ಎಂದು ನ್ಯಾಯಪೀಠ ಹೇಳಿತು.
ನೀವು ಟೈಟಾನಿಕ್ ಸಿನಿಮಾ ನೋಡಿದ್ದೀರಾ? ಆ ಹಡಗಿನ ಕ್ಯಾಪ್ಟನ್‌ನನ್ನು ನೆನಪಿಸಿಕೊಳ್ಳುತ್ತೀರಾ? ಪ್ರತಿಯೊಬ್ಬರನ್ನೂ ಸ್ಥಳಾಂತರ ಮಾಡುವವರೆಗೂ ಆತ ಅಲ್ಲಿ ಕಾಯಬೇಕಿತ್ತು. ಮೊದಲು ಎಲ್ಲರಿಗೂ ಲಸಿಕೆ ಸಿಗಲಿ. ಬಳಿಕ ನ್ಯಾಯಾಂಗ. ನಾನಿಲ್ಲಿ ಅದರ ಕ್ಯಾಪ್ಟನ್ ಆಗಿದ್ದೇನೆ ಎಂದು ಮುಖ್ಯ ನ್ಯಾಯಮೂರ್ತಿ ದತ್ತಾ ಹೇಳಿದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss

error: Content is protected !!