ಹೊಸ ದಿಗಂತ ವರದಿ, ಹಾವೇರಿ:
ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಅಭಿಯಾನ ಯಶಸ್ವಿಯಾಗಿ ನಡೆದಿದೆ. ಸಂಜೆ ೫ರವೇಳೆ ಜಿಲ್ಲೆಯ ೫೬ ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಆ ಮೂಲಕ ರಾಜ್ಯದಲ್ಲಿ ಹಾವೇರಿ ಜಿಲ್ಲೆ 12ನೇ ಸ್ಥಾನದಲ್ಲಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ರಾಜ್ಯಾದ್ಯಂತ ಶುಕ್ರವಾರದಂದು ಬೃಹತ್ ಲಸಿಕಾ ಅಭಿಯಾನ ಹಮ್ಮಿಕೊಂಡು ರಾಜ್ಯದ 30 ಲಕ್ಷ ಜನರಿಗೆ ಒಂದೇ ದಿನ ಲಸಿಕೆ ಹಾಕಲು ಗುರಿ ನೀಡಲಾಗಿತ್ತು. ಈ ಅಭಿಯಾನದ ಅಂಗವಾಗಿ ಹಾವೇರಿ ಜಿಲ್ಲೆಗೆ 70ಸಾವಿರ ಜನರಿಗೆ ಲಸಿಕೆ ಹಾಕುವ ಗುರಿಯನ್ನು ಹಾಕಿಕೊಳ್ಳಲಾಗಿತ್ತು. ಸಂಜೆ 5 ಗಂಟೆವೇಳೆಗೆ 56 ಸಾವಿರ ಜನರು ಲಸಿಕೆ ಪಡೆದಿದ್ದಾರೆ. ಸಂಜೆ 7 ಗಂಟೆವರೆಗೆ ಲಸಿಕಾ ಕಾರ್ಯಕ್ರಮ ಮುಂದುವರೆಯಲಿದ್ದು, ನಿಗಧಿತ ಗುರಿ ಸಾಧಿಸುವ ನಿರೀಕ್ಷೆ ಇದೆ.
ಜಿಲ್ಲೆಯ 70 ಸಾವಿರ ಜನರಿಗೆ ಕೋವಿಡ್ ಲಸಿಕೆ ನೀಡುವ ಗುರಿಯೊಂದಿಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಸಿದ್ಧತೆಕೈಗೊಂಡು ಜಿಲ್ಲೆಯ 71 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಒಳಗೊಂಡಂತೆ 499 ಲಸಿಕಾ ಕೇಂದ್ರಗಳನ್ನು ತೆರೆದು 18ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ಹಾಕುವ ಕಾರ್ಯಕ್ರಮದ ಮಹಾ ಅಭಿಯಾನ ಕೈಗೊಂಡು ಯಶಸ್ಸು ಸಾಧಿಸಿದೆ.
ಈವರೆಗೆ ಒಂದೇ ದಿನ ದೊಡ್ಡ ಸಂಖ್ಯೆಯಲ್ಲಿ ಲಸಿಕೆ ನೀಡಿ ದಾಖಲೆ ನಿರ್ಮಿಸಲಾಗಿದೆ. ಇದಕ್ಕೂ ಮುನ್ನ ಒಂದೇ ದಿನ 44,500 ಜನರಿಗೆ ಲಸಿಕೆ ನೀಡಿ ದಾಖಲೆ ಮಾಡಲಾಗಿತ್ತು. ಕೋವಿಡ್ ಮೂರನೇ ಅಲೆಯ ಪರಿಣಾಮ ತಗ್ಗಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನವಂಬರ್ ತಿಂಗಳೊಳಗಾಗಿ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಲಸಿಕೆ ಹಾಕುವ ಗುರಿ ಹೊಂದಲಾಗಿದೆ.
ಶುಕ್ರವಾರ ನಡೆದ ಕೋವಿಡ್ ಲಸಿಕಾ ಮಹಾ ಅಭಿಯಾನದ ಪ್ರಕ್ರಿಯೆಯನ್ನು ವೀಕ್ಷಿಸಲು ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ, ಜಿ.ಪಂ ಸಿಇಒ ಮಹಮ್ಮದ ರೋಷನ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಲಸಿಕೆ ಕೇಂದ್ರಗಳಿಗೆ ಭೇಟಿ ನೀಡಿ ವೈದ್ಯರಿಗೆ ಹಾಗೂ ಕಾರ್ಯಕರ್ತರಿಗೆ ಉತ್ಸಾಹ ತುಂಬಿದರು. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಹಾಗೂ ತಾಲೂಕು ಮಟ್ಟದ ವಿವಿಧ ಮಟ್ಟದ ಅಧಿಕಾರಿಗಳನ್ನು ಲಸಿಕಾ ಕೇಂದ್ರಗಳ ಉಸ್ತುವಾರಿಗೆ ನಿಯೋಜಿಸಲಾಗಿತ್ತು. ವೈದ್ಯಾಧಿಕಾರಿಗಳು, ಆಶಾ, ಅಂಗನವಾಡಿ ಹಾಗೂ ಆರೋಗ್ಯ ಕಾರ್ಯಕರ್ತರು, ಶಿಕ್ಷಕರು ಇಂದಿನ ಲಸಿಕಾ ಕಾರ್ಯಕ್ರಮದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಖಾಸಗಿ ಆಸ್ಪತ್ರೆಯ ವೈದ್ಯಾಧಿಕಾರಿಗಳು, ಸಿಬ್ಬಂದಿಗಳು, ನರ್ಸಿಂಗ್ ಹಾಗೂ ವೈದ್ಯಕೀಯ ಕಾಲೇಜ್ ಸಿಬ್ಬಂದಿಗಳು ಲಸಿಕಾ ಕಾರ್ಯಕ್ರಮದ ಯಶಸ್ವಿಗೆ ಕೈಜೋಡಿಸಿದ್ದಾರೆ.
ಹಾವೇರಿ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಕೋವಿಡ್ ಲಸಿಕಾ ಅಭಿಯಾನಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ವಿಶೇಷವಾಗಿ ಬಡತನ ರೇಖೆಗಿಂತ ಕೆಳಗಿರುವವರು, ಕಟ್ಟಡ ಕಾರ್ಮಿಕರು, ದುಡಿಯುವ ವರ್ಗ, ಅಲ್ಪಸಂಖ್ಯಾತ ಸಮೂಹ, ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ, ಹಿಂದುಳಿದ ಜನರು ವಾಸಿಸುವ ಬಡಾವಣೆಗಳಲ್ಲಿ ಲಸಿಕಾ ಕೇಂದ್ರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗಿತ್ತು. ನಿರೀಕ್ಷೆಯಂತೆ ಹಾವೇರಿ ನಗರದ ಜಿಲ್ಲಾ ಆಸ್ಪತ್ರೆ, ಜಿಲ್ಲಾ ಕ್ರೀಡಾಂಗಣ, ನಗರ ಸಭೆ, ಶಿವಾಜಿ ನಗರ, ಅಶ್ವಿನಿ ನಗರ, ಇಜಾರಿ ಲಕಮಾಪುರ, ನಾಗೇಂದ್ರನ ಮಟ್ಟಿ, ಮುಲ್ಲಾನ ಕೇರಿಯಲ್ಲಿ ತೆರೆಯಲಾದ ಲಸಿಕಾ ಕೇಂದ್ರಗಳಲ್ಲಿ ಸ್ವಯಂ ಪ್ರೇರಿತರಾಗಿ ಜನರು ಲಸಿಕೆ ಪಡೆದಿದ್ದು ವಿಶೇಷವಾಗಿತ್ತು.