ಆತ ಭೂಲೋಕದ ನರಕ ಗೆದ್ದ ಮೃತ್ಯುಂಜಯ….!

ನಿತೀಶ ಡಂಬಳ

ಆತ ಭಾರತಾಂಬೆಯನ್ನು ಸ್ವತಂತ್ರಗೊಳಿಸಿದ ನೇತಾರರಲ್ಲಿ ಅಗ್ರಗಣ್ಯ, ಕಿರು ಹರೆಯದರಲ್ಲೆ ಕ್ರಾಂತಿಕಾರ್ಯದಲ್ಲಿ ತೊಡಗಿಕೊಂಡ ಧೀರ, ಪ್ರಖರ ವಾಗ್ಮಿ, ಆತನದ್ದು ಖಡ್ಗಕ್ಕಿಂತಲೂ ಮೊಣಚಾದ ಬರವಣಿಗೆ, ಆಂಗ್ಲರ ಶಕ್ತಿಕೇಂದ್ರದಲ್ಲೇ ಅವರ ವಿರುದ್ಧ ತಿರುಗಿದ ಹೋರಾಟಗಾರ, ಜೀವನದ ಮುಕ್ಕಾಲು ಭಾಗ ಸೆರೆಮನೆಯಲ್ಲಿ ಕಳೆದ ಅಪ್ರತಿಮ ದೇಶಭಕ್ತ, ಸ್ವಾತಂತ್ರ್ಯ ಲಕ್ಷ್ಮಿಯ ಆರಾಧಿಸಿದ ಕವಿ ವೀರ ವಿನಾಯಕ ದಾಮೋದರ ಸಾವರ್ಕರ್.

ಅದು ಆಗಸ್ಟ ತಿಂಗಳು 1965 ಸಾವರ್ಕರ್ ಆರೋಗ್ಯ ತೀರಾ ಕ್ಷೀಣವಾಗಿತ್ತು. ತಾವು ಕಂಡ ಸ್ವತ್ರಂತ್ರ ಭಾರತದ ಕನಸು ಈಡೇರಿತ್ತು. ತಮ್ಮನ್ನು ತಾವೆ ಆತ್ಮಾರ್ಪಣೆ ಮಾಡಿಕೊಳ್ಳಲು ನಿರ್ಧರಿಸಿದ್ದರು. ದಿನ ಕಳೆದಂತೆ ದೇಹಸ್ಥಿತಿ ಗಂಭೀರವಾಯಿತು. ಔಷಧಿ, ಅನ್ನಾಹಾರಗಳನ್ನು ತ್ಯಜಿಸಿ ಅದಾಗಲೇ ಮೂರು ವಾರಗಳಾಗಿದ್ದವು. ಫೆಬ್ರವರಿ 26,1966ರಲ್ಲಿ ಸಾವರ್ಕರ್ ಪ್ರಾಣಪಕ್ಷಿ ಹಾರಿಹೋಯಿತು. ಸಾವರ್ಕರ್ ಜೀವನದ ಪ್ರತಿ ಘಟನೆಯು ಎಂಥವನಿಗಾದರೂ ಮೈ ರೋಮಾಂಚನಗೊಳಿಸುತ್ತದೆ.

ಬಾಲ್ಯದಲ್ಲೇ ಕ್ರಾಂತಿಯ ಚಿಗುರು
ಬಾಂಬೆ ಪ್ರಾಂತ್ಯದ ಭಗೂರಿನಲ್ಲಿ, ಮೇ 28, 1863ರಲ್ಲಿ ದಾಮೋದರ ಸಾವರ್ಕರ್ ಹಾಗೂ ಯಶೋಧಾ ದಂಪತಿಗಳಿಗೆ ದ್ವಿತೀಯ ಪುತ್ರನಾಗಿ ಜನಿಸಿದವ ವಿನಾಯಕ. ಪ್ರೀತಿಯಿಂದ ಎಲ್ಲರು ತಾತ್ಯಾ ಎಂದು ಕರೆಯುತ್ತಿದ್ದರು. ಬಾಲ್ಯದಲ್ಲಿದ್ದಾಗಲೇ ಶಿವಾಜಿ, ರಾಣಾ ಪ್ರತಾಪ, ಪೃಥ್ವಿರಾಜ ಚವ್ಹಾಣರ ಕಥೆ ಕೇಳುತ್ತಿದ್ದ ವಿನಾಯಕನಿಗೆ ಆಗಲೇ ಕ್ರಾಂತಿಯ ಬೀಜ ಚಿಗುರೊಡೆದಿತ್ತು. ಮುಂದೆ ಮಿತ್ರರೊಂದಿಗೆ ಸೇರಿ ರಾಷ್ಟ್ರಭಕ್ತಿಯ ಜಾಗೃತಿಗಾಗಿ, ‘ಮಿತ್ರಮೇಳ’ ಸ್ಥಾಪಿಸಿದರು. ಪ್ರತಿಬಾರಿ ಮಿತ್ರರೆಲ್ಲ ಸೇರಿದಾಗ ಕ್ರಾಂತಿವೀರ ಚಾಫೇಕರ, ಫಡ್ಕೆ, ವಿವೇಕಾನಂದರ ಚಿತ್ರಗಳು, ರಾಷ್ಟ್ರೀಯ ಚಿಂತನೆಗಳನ್ನು ನಡೆಸುತ್ತಿದ್ದರು. ತಮ್ಮ ಪ್ರಖರವಾದ ಮಾತುಗಳಿಂದ ಎಲ್ಲರ ಚಿತ್ತವನ್ನು ರಾಷ್ಟ್ರದತ್ತ ಸೆಳೆಯುತ್ತಿದ್ದ ವಾಗ್ಮಿ ಅವರಾಗಿದ್ದರು. ರಾಮಾಯಣ, ಭಾಗವತದ ಜೊತೆಗೆ ಸ್ವಾತಂತ್ರ್ಯ ಲಕ್ಷ್ಮೀಯ ಪಾರಯಣಕ್ಕೆ ಚಾಲನೆ ನೀಡಿದರು.

ವಿದೇಶಿ ಹೋಳಿಯ ಹರಿಕಾರ
ಪುಣೆಯಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾಗ ತಿಲಕರೊಂದಿಗೆ ಒಡನಾಟ ತುಸು ಹೆಚ್ಚಾಗಿ ಬೆಳೆದಿದ್ದವು. ಅದು 1905, ಲಾರ್ಡ ಕರ್ಜನ ಬಂಗಾಳವನ್ನು ವಿಭಜಿಸಿದ್ದ. ಇದರ ಪ್ರತೀಕ ಬಂಗಾಳದಾದ್ಯಂತ ವಂಗಭಂಗ ಚಳವಳಿ ಆರಂಭಗೊಂಡಿತ್ತು. ಈ ಘಟನೆಯ ಅಂಗವಾಗಿ ಪುಣೆಯಲ್ಲೂ ಸಹ ಆಂಗ್ಲರ ವಿರುದ್ಧ ಪ್ರತಿಭಟನೆ ಶುರುವಾಯಿತು. ಅದರ ನೇತೃತ್ವ ವಹಿಸಿದವರೇ ವಿನಾಯಕ ಸಾವರ್ಕರ್. ಬ್ರಿಟಿಷರ್ ವಿರುದ್ಧ ಹೋರಾಡುವ ನಿಟ್ಟಿನಲ್ಲಿ ಮನೆಮನೆಗೆ ತೆರಳಿ ವಿದೇಶಿ ವಸ್ತುಗಳನ್ನು ಸಂಗ್ರಹಿಸಿದರು. ಮಹಾನವಮಿ ದಿನ ವಿದ್ಯಾರ್ಥಿಗಳೆಲ್ಲ ಸೇರಿ ಬೀದಿ ಕಾಮಣ್ಣನ ಸುಟ್ಟ ಹಾಗೆ, ವಿದೇಶಿ ವಸ್ತುಗಳ ದಹನ ಮಾಡಿದರು. ಎಲ್ಲೆಡೆ ವಂದೇಮಾತರಂ ಮಂತ್ರಘೋಷವಾಗುತಿತ್ತು. ದೇಶದಲ್ಲೆ ಪ್ರಪಥಮ ಬಾರಿಗೆ ವಿದೇಶಿ ಹೋಳಿ ಕಲ್ಪನೆಗೆ ಸಾವರ್ಕರ್ ನಾಂದಿ ಹಾಡಿದರು.

ಭಾರತಕ್ಕಾಗಿ ಭಾರತ ಬಿಟ್ಟರು
ಸಾವರ್ಕರ್‌ಗೆ ವಿಚಾರವೊಂದು ಹೊಳೆಯಿತು. ಬ್ರಿಟಿಷರ ಕೇಂದ್ರಸ್ಥಾನ ಲಂಡನ್. ಅಲ್ಲಿಂದಲೇ ಅವರು ಭಾರತದ ಮೇಲೆ ದಬ್ಬಾಳಿಕೆ ನಡೆಸುತ್ತಿದ್ದರು. ಲಂಡನ್ ಅವರ ಶಕ್ತಿಸ್ಥಳವಾಗಿತ್ತು. ಅಲ್ಲಿನ ಭಾರತೀಯರನ್ನು ಒಂದುಗೂಡಿಸಿ ಅವರ ನಾಡಲ್ಲೇ ಕ್ರಾಂತಿಯೆಬ್ಬಿಸುವ ವಿಚಾರ ಅವರದಾಗಿತ್ತು. ಲಂಡನ್‌ಗೆ ಹೋಗಲು ಅವರ ಮನ ನಿಶ್ಚಯಿಸಿತು. ಅದಕ್ಕೆ ತಕ್ಕ ಸಿದ್ಧತೆಗಳನ್ನು ನಡೆಸಿದರು.ಲಂಡನ್‌ಗೆ ಹೋಗುವಾಗ ಭೂತಾಯಿಗೆ ತಲೆಬಾಗಿ ‘ನಿನ್ನನ್ನು ಬಿಟ್ಟು ಹೋಗುತ್ತಿಲ್ಲಿ, ನಿನಗಾಗಿ ಹೋಗುತ್ತಿದ್ದೇನೆ’ ಎಂದರು. ಲಂಡನ್ನಿನ ಭಾರತ ಭವನದಲ್ಲಿ ತಂಗಿದರು. ಅಲ್ಲಿಯ ಭಾರತೀಯರನ್ನು ಒಂದುಗೂಡಿಸಿದರು. ಸಾವರ್ಕರ್ ಸದಾ ಕ್ರೀಯಾಶೀಲ ವ್ಯಕ್ತಿ. ವಿವಿಧ ಕಾಲೇಜಿನ ವಿದ್ಯಾರ್ಥಿಗಳ ಸಂಪರ್ಕ, ಭಾರತ ಭವನದಲ್ಲಿ ಬೈಠಕ್, ಪತ್ರಿಕೆಗಳಿಗೆ ಲೇಖನ ಬರೆಯುವುದು, ಕ್ರಾಂತಿಕಾರಿ ಯುವಕರಿಗೆ ಗುಪ್ತವಾಗಿ ಪಿಸ್ತೂಲು ತಲುಪಿಸುವುದು ಅವರ ಕಾರ್ಯವಾಗಿತ್ತು. ಆಂಗ್ಲರ ಕೆಂಗಣ್ಣಿಗೆ ಗುರಿಯಾದ ಸಾವರ್ಕರ್ ಅವರ ಪಾಲಿಗೆ ಶಾಶ್ವತ ಮೈಗ್ರೆನ್ ಆಗಿ ಕಾಡತೊಡಗಿದರು.

ಮೃತ್ಯುಕೂಪದಲ್ಲಿ ಸಾವರ್ಕರ್
ಸಾವರ್ಕರ್ ಆಂಗ್ಲವಿರೋಧಿ ಚಟುವಟಿಕೆ, ಭಾಷಣಗಳನ್ನು ಗಮನಿಸಿದ ಸರ್ಕಾರ ಅವರ ಬಂಧನಕ್ಕೆ ಮುಂದಾಯಿತು. ಇಂಗ್ಲೆಂಡಿನಿಂದ ಭಾರತಕ್ಕೆ ಅವರನ್ನು ಕರೆ ತರುವಾಗ, ಮಾರ್ಗಮಧ್ಯೆ ಹಡಗಿನ ಶೌಚಾಲಯದ ಕಿರುಕಿಂಡಿಯಿಂದ ತಪ್ಪಿಸಿಕೊಂಡು ಮಾರ್ಸೆಲ್ಸ ದಡ ಸೇರಿದ್ದರು. ಕೊನೆಗೂ ಮತ್ತೆ ಬಂಧಿಸಿ ಭಾರತದ ನ್ಯಾಯಾಲಯದ ಮುಂದೆ ತಂದಿಟ್ಟರು. ಜಾಕ್ಸನ್ ವಧೆಯ ಆರೋಪವನ್ನು ಸಹ ಹೊತ್ತಿದ್ದ ಸಾವರ್ಕರಿಗೆ ಬ್ರಿಟಿಷ್ ನ್ಯಾಯಾಲಯ ಎರಡು ಆಜನ್ಮ ಕರಿನೀರಿನ ಶಿಕ್ಷೆಗೆ ಒಳಪಡಿಸಿತು. ನರಕದ ಸಮಾನಾರ್ಥಕ ಕರಿನೀರಿನ ಶಿಕ್ಷೆ ಎಂದು ಹೇಳಿದರೆ ತಪ್ಪಾಗಲಾರದು. 1910 ರಿಂದ 1960ರ ವರೆಗೆ ಐವತ್ತು ವರ್ಷಗಳ ಕಾಲ ಈ ಶಿಕ್ಷೆಗೆ ಒಳಪಟ್ಟಿದ್ದರು.

ಭೂಲೋಕದ ನರಕ, ಮೃತ್ಯಕೂಪವೆಂದೇ ಖ್ಯಾತವಾದ ಅಂಡಮಾನಿನ ಸೆಲ್ಯೂಲರ್ ಜೈಲಿಗೆ ಸಾವರ್ಕರನ್ನು ಸ್ಥಳಾಂತರಿಸಲಾಯಿತು. ಇಷ್ಟು ದೊಡ್ಡ ಶಿಕ್ಷೆ ಪಡೆದ ಸಾವರ್ಕರ್ ಎಂದೂ ಮಾನಸಿಕವಾಗಿ ಕುಗ್ಗಿರಲಿಲ್ಲ. ಕರಿನೀರಿನ ಶಿಕ್ಷೆ ಎಂಥ ಭೀಕರವೆಂದರೆ, ಎತ್ತುಗಳ ಬದಲಾಗಿ ಖೈದಿಗಳು ಗಾಣದಿಂದ ಎಣ್ಣೆ ತೆಗೆಯುವುದು, ಬರಿ ಕೈಯಿಂದ ತೆಂಗಿನಕಾಯಿಯನ್ನು ಸುಲಿಯುವುದು, ನಿತ್ಯ ಎರಡು ಬಾರಿ ಮಾತ್ರ ಮಲ-ಮೂತ್ರ ವಿಸರ್ಜನೆ, ದಣಿವಾರಿಸಿಕೊಳ್ಳಲು ಕೇವಲ ಎರಡು ಲೋಟ ನೀರು, ಅರೆಬೆಂದ ಅನ್ನದೂಟ, ಕೆಲಸ ಮಾಡದಿದ್ದರೇ ಚಾವಟಿ ಏಟು ನಿಶ್ಚಿತ. ಇದಲ್ಲದೇ ಕೆಟ್ಟ ಬೈಗುಳವಂತೂ ಸದಾ ಇರುತಿತ್ತು.

ಸ್ವಾತಂತ್ರ್ಯ ಲಕ್ಷ್ಮಿಯನ್ನು ಆರಾಧಿಸಿದ ಕವಿ
ಸ್ವಾತಂತ್ರ್ಯ ಆರಾಧನೆಯ ಹೊರತಾಗಿ ವಿನಾಯಕ ಸಾವರ್ಕರ್ ಒಬ್ಬ ಅತ್ಯುತ್ತಮ ಕವಿ. ಜೈಲಿನಲ್ಲಿ ಕಾಗದ, ಲೇಖನಿ ಸಿಗದ ಕಾರಣ, ಕೈಗೆ ಕಟ್ಟಿದ ಸರಪಳಿ, ಕಬ್ಬಿಣದ ಮೊಳೆಗಳಿಂದ ಗೋಡೆಯ ಮೇಲೆ ಹತ್ತು ಸಾವಿರ ಸಾಲುಗಳಷ್ಟು ಕವನವನ್ನು ಬರೆದರು. ಅದನ್ನು ಜಗತ್ತಿಗೆ ಅರ್ಪಿಸಿದರು. ಐವತ್ತು ವರ್ಷಗಳ ಘನಘೋರ ಶಿಕ್ಷೆಯ ನಂತರ ಕೊನೆಗೂ ಸಾವರ್ಕರ್ ಪಟ್ಟ ಶ್ರಮ ಸಾರ್ಥಕವಾಯಿತು. ಆ ಮೃತ್ಯುಕೂಪದಿಂದ ಬಿಡುಗಡೆ ಭಾಗ್ಯ ಲಭಿಸಿತು. ಅಲ್ಲಿಗೆ ಭೂಲೋಕದ ನರಕ ಗೆದ್ದ ಮೃತ್ಯುಂಜಯರಾದರು.

ಅದಾಗಲೇ ಸಾವರ್ಕರ್ರ ಕೀರ್ತಿ ದೇಶದಲ್ಲಷ್ಟೇ ಅಲ್ಲದೇ ವಿದೇಶದಲ್ಲಿಯೂ ಸಹ ರಾರಾಜಿಸುತಿತ್ತು. ಎಲ್ಲರೂ ಅವರನ್ನು ಕ್ರಾಂತಿವೀರ ಎಂದೇ ಸಂಭೋದಿಸುತ್ತಿದ್ದರು. ಜೀವನದ ಪ್ರತಿ ಘಳಿಗೆ ಸದಾ ಸ್ವಾತಂತ್ರ್ಯ ಲಕ್ಷ್ಮಿಯ ಆರಾಧನೆಯಲ್ಲಿದ್ದ ಸಾವರ್ಕರ್ ಭಾರತೀಯರ ಹೃದಯರಂಗದಲ್ಲಿ ಚಿರಸ್ಥಾಯಿಯಾದರು. ಅವರಿಗಿದ್ದ ಎದೆಗಾರಿಕೆ, ಚಾಣಾಕ್ಷತೆ, ನಿಖರತೆ, ಎಂಥವನನ್ನೂ ತನ್ನತ್ತ ಸೆಳೆಯಬಲ್ಲ ಶಕ್ತಿ ಬಹುಶಃ ಯಾವ ವ್ಯಕ್ತಿಗೂ ಇದ್ದಿರಲಿಲ್ಲ. ಅವರ ಸ್ವಾತಂತ್ರ್ಯ ಹೋರಾಟದ ಜೀವನ ಇಂದಿನ ಯುವಪೀಳಿಗೆಗೆ ಸದಾ ಪ್ರೇರಣೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!