ಹೊಸದಿಗಂತ ಆನ್ ಲೈನ್ ಡೆಸ್ಕ್:
ಪಶ್ಚಿಮ ಬಂಗಾಳ ಚುನಾವಣೆ ಸಿದ್ದತೆಗಳು ಜೋರಾಗಿಯೇ ನಡೆಯುತ್ತಿದ್ದು, ಇತ್ತ ಸಿಎಂ ದೀದಿ ಆಘಾತ ಮೇಲೆ ಆಘಾತ ಎದುರಾಗುತ್ತಿದೆ. ಇದೀಗ ತೃಣಮೂಲ ಕಾಂಗ್ರೆಸ್ ಪಕ್ಷದ ಮಾಜಿ ಸಂಸದ ದಿನೇಶ್ ತ್ರಿವೇದಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತೃಣಮೂಲ ಕಾಂಗ್ರೆಸ್ ಪಕ್ಷದ (ಟಿಎಂಸಿ) ಮಾಜಿ ಸಂಸದ ಹಾಗೂ ಹಿರಿಯ ರಾಜಕಾರಣಿ ದಿನೇಶ್ ತ್ರಿವೇದಿ ಅವರು ದೆಹಲಿಯಲ್ಲಿ ಇಂದು ಅಧಿಕೃತವಾಗಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಸಮ್ಮುಖದಲ್ಲಿ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ಸೇರ್ಪಡೆಯಾದರು.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಪಿಯೂಷ್ ಗೋಯಲ್ ಹಾಗೂ ನೈಸರ್ಗಿಕ ಅನಿಲ ಸಚಿವ ಧರ್ಮೇಂದ್ರ ಪ್ರಧಾನ್ ಉಪಸ್ಥಿತರಿದ್ದರು. ನಡ್ಡಾ ಅವರು ತ್ರಿವೇದಿ ಅವರಿಗೆ ಬಿಜೆಪಿ ಪಕ್ಷದ ಶಾಲು ಹೊದಿಸಿ, ಹೂಗುಚ್ಛ ನೀಡಿ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭದಲ್ಲಿ ಪ್ರತಿಕ್ರಿಯಿಸಿರುವ ತ್ರಿವೇದಿ, ನಾನು ಕಾಯುತ್ತಿದ್ದ ಸುವರ್ಣ ಕ್ಷಣ ಇದಾಗಿದ್ದು, ಚುನಾವಣೆಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳುತ್ತೇನೆ. ನಾನು ಸ್ಪರ್ಧಿಸುತ್ತೇನೆಯೋ ಇಲ್ಲವೋ ಆದರೆ ರಾಜಕೀಯದಲ್ಲಿ ಸಕ್ರಿಯನಾಗಿರುತ್ತೇನೆ. ಬಂಗಾಳ ತೃಣಮೂಲ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದೆ. ಅವರಿಗೆ ಅಭಿವೃದ್ಧಿ ಬೇಕೇ ಹೊರತು ಭ್ರಷ್ಟಾಚಾರ ಅಥವಾ ಗಲಭೆಗಳಲ್ಲ. ನಾನು ಯಾವುದೇ ಸವಾಲಿಗೂ ಸಿದ್ಧವಿದ್ದು, ರಾಜಕಾರಣ ಆಟವಲ್ಲ. ಇದು ನಿಜಕ್ಕೂ ಗಂಭೀರ ವಿಚಾರವಾಗಿದ್ದು, ಇದನ್ನು ಸಿಎಂ ಮಮತಾ ಬ್ಯಾನರ್ಜಿ ಮರೆತಿದ್ದಾರೆ ಎಂದು ಟೀಕಿಸಿದರು.