ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
………………………………………………………………………..
ಹೊಸ ದಿಗಂತ ವರದಿ, ಚಾಮರಾಜನಗರ:
ಮತ್ತೊಬ್ಬ ವ್ಯಕ್ತಿಯೊಂದಿಗೆ ಮನೆಯಿಂದ ಬೈಕ್ನಲ್ಲಿ ತೆರಳಿದ್ದ ಗೃಹಿಣಿಯೋರ್ವಳು ಅಪಘಾತಕ್ಕೀಡಾಗಿ ಗಾಯಗೊಂಡು ಚಿಕಿತ್ಸೆ
ಫಲಿಸದೆ ಸಾವನ್ನಪ್ಪಿರುವ ಘಟನೆ ಚಾ.ನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಉತ್ತಂಬಳ್ಳಿಯಲ್ಲಿ ನಡೆದಿದೆ.
ಕೊಳ್ಳೇಗಾಲ ತಾಲ್ಲೂಕಿನ ಉತ್ತಂಬಳ್ಳಿ ಗ್ರಾಮದ ಮಾದೇಶ್ ಎಂಬುವವನ ಪತ್ನಿ ಲಕ್ಷ್ಮೀ (28) ಮೃತ ದುರ್ದೈವಿ. ಈಕೆ ಮೇ 5 ರಂದು ಅದೇ ಗ್ರಾಮದ ಶಾಂತ ಎಂಬುವನ ಜೊತೆ ಕೊಳ್ಳೇಗಾಲ ಪಟ್ಟಣಕ್ಕೆ ಬಂದಿದ್ದಳು. ಅಲ್ಲಿಂದ ಗುಂಡಾಲ್ ಜಲಾಶಯದ ಕಡೆಗೆ ತೆರಳಿದ್ದರು. ಈ ಸಂದರ್ಭ ಶಾಂತನ ಅಜಾರೂಕತೆಯಿಂದಾಗಿ ಮಾರ್ಗಮಧ್ಯೆ ರಸ್ತೆಯ ಬದಿಯ ಹಳ್ಳಕ್ಕೆ ಬೈಕ್ ಬಿದ್ದು ಲಕ್ಷ್ಮಿ ತಲೆಗೆ ತೀವ್ರ ಪೆಟ್ಟುಬಿದ್ದಿತ್ತು ಎನ್ನಲಾಗಿದೆ.
ತಕ್ಷಣ ಚಿಕಿತ್ಸೆಗಾಗಿ ಕೊಳ್ಳೇಗಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ವೈದ್ಯರ ಸಲಹೆಯಂತೆ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೂ ರವಾನಿಸಲಾಗಿತ್ತು. ಆದರೆ, ದುರಾದೃಷ್ಟ ಚಿಕಿತ್ಸೆ ಫಲಕಾರಿಯಾಗದೇ ಮೇ 13 ರಂದು ಲಕ್ಷ್ಮೀ ಮೃತಪಟ್ಟಿದ್ದಾಳೆ. ಪತಿ ಮಾದೇಶ್ ತನ್ನ ಪತ್ನಿ ಸಾವಿಗೆ ಶಾಂತ ಕಾರಣ ಎಂದು ಆರೋಪಿಸಿ ಕ್ರಮ ಜರುಗಿಸುವಂತೆ ಪೊಲೀಸರಿಗೆ ದೂರು ನೀಡಿದ್ದಾನೆ. ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.