ಬೆಂಗಳೂರಿನಲ್ಲಿ ಭಾರೀ ಮಳೆ: ಬಿಬಿಎಂಪಿ ವಿರುದ್ಧ ಕುಮಾರಸ್ವಾಮಿ ಆಕ್ರೋಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೆಂಗಳೂರಿನಲ್ಲಿ ಆಲಿಕಲ್ಲು ಸಹಿತ ವ್ಯಾಪಕ ಮಳೆಯಾಗಿದ್ದು ಹಲವು ಕಡೆಗಳಲ್ಲಿ ನೀರು ತುಂಬಿ, ಮರಗಳು ನೆಲಕ್ಕುರಿಳಿದ್ದು ಭಾರಿ ತೊಂದರೆಯಾಗಿದೆ. ಇದರ ಜೊತೆಗೆ ಕೆಆರ್ ಸರ್ಕಲ್‌ ಬಳಿ ಅಂಡರ್ ಪಾಸ್‌ನಲ್ಲಿ ನೀರು ತುಂಬಿಕೊಂಡ ಪರಿಣಾಮ ಕಾರು ಮುಳುಗಡೆಯಾಗಿದ್ದು ಹೈದರಾಬಾದ್ ಮೂಲದ ಯುವತಿಯೊಬ್ಬಳು ಮೃತಪಟ್ಟಿದ್ದಾರೆ.
ಈ ಘಟನೆ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಟ್ವೀಟ್ ಮಾಡಿ ಬಿಬಿಎಂಪಿ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು ,ಬೆಂಗಳೂರು ನಗರದಲ್ಲಿ ಸುರಿದ ಭಾರೀ ಮಳೆಯಿಂದ ಕೆ.ಆರ್.ವೃತ್ತದ ಅಂಡರ್ ಪಾಸ್ ನಲ್ಲಿ ಮಳೆನೀರಿಗೆ ಸಿಲುಕಿ ಇನ್ಫೋಸಿಸ್ ಉದ್ಯೋಗಿ ಭಾನುರೇಖಾ ಎಂಬ ಯುವತಿ ಸಾವನ್ನಪ್ಪಿರುವ ಸುದ್ದಿ ತಿಳಿದು ತೀವ್ರ ಆಘಾತವಾಯಿತು. ರಭಸ ಮಳೆಯ ಮುನ್ನೆಚ್ಚರಿಕೆ ಇದ್ದರೂ ಬಿಬಿಎಂಪಿ ಆಡಳಿತ ಎಚ್ಚೆತ್ತುಕೊಳ್ಳದೇ ಇರುವುದು ನಿರ್ಲಕ್ಷ್ಯದ ಪರಮಾವಧಿ ಎಂದು ಕಿಡಿ ಕಾರಿದ್ದಾರೆ.

ಮಳೆಗಾಲ ಆರಂಭವಾಗುವ ಸಂದರ್ಭದಲ್ಲಿ ಅಂಡರ್ ಪಾಸ್ ಗಳಲ್ಲಿ ಕಸಕಡ್ಡಿ ತೆಗೆದು ಸರಾಗವಾಗಿ ನೀರು ಹರಿದು ಹೋಗುವಂತೆ ಮಾಡಬೇಕಾಗಿದ್ದ ಪಾಲಿಕೆ, ಮೈಮರೆತು ಕರ್ತವ್ಯಲೋಪ ಎಸಗಿದೆ. ಪ್ರತೀಸಲವೂ ಮಳೆ ಬಂದಾಗ ಅವಾಂತರ, ಪ್ರಾಣಹಾನಿ ಸಂಭವಿಸಿದ ಮೇಲೆ ಪಾಲಿಕೆ ಎಚ್ಚೆತ್ತುಕೊಳ್ಳುತ್ತದೆ, ಯಾಕೆ? ಮಳೆ ಬಂದರೆ ಜನರು ಸಾಯಲೇಬೇಕೆ? ಎಂದು ಪ್ರಶ್ನೆ ಮಾಡಿದ್ದಾರೆ.

ಭಾರೀ ಮಳೆ ಸುರಿಯುತ್ತಿದ್ದ ಅಪಾಯದ ಸಮಯದಲ್ಲಿ ವಾಹನ ಚಾಲಕರು ಅತ್ಯಂತ ಎಚ್ಚರಿಕೆಯಿಂದ ವಾಹನ ಚಾಲನೆ ಮಾಡಬೇಕು. ಅಂಡರ್ ಪಾಸ್ ನಲ್ಲಿ ನೀರು ತುಂಬಿಕೊಂಡಿದ್ದನ್ನು ಕಂಡ ಮೇಲೂ ಚಾಲಕ ಕಾರನ್ನು ಅಂಡರ್ ಪಾಸ್ ಮೂಲಕ ಚಾಲನೆ ಮಾಡಬಾರದಿತ್ತು. ಸಂಚಾರಿ ಪೊಲೀಸರು ಮೊದಲೇ ಮುನ್ನೆಚ್ಚರಿಕೆ ನೀಡಬೇಕಿತ್ತು. ಎಂದು ಹೇಳಿದ್ದಾರೆ.

ಬಿಬಿಎಂಪಿ ಅಧಿಕಾರಿಗಳು ಕೂಡಲೇ ನಗರದ ಉದ್ದಗಲಕ್ಕೂ ಎಲ್ಲಾ ಅಂಡರ್ ಪಾಸ್ ಗಳನ್ನು ಪರಿಶೀಲಿಸಿ, ಕಸಕಡ್ಡಿ ತೆರವು ಮಾಡಿ ಮಳೆನೀರು ಸರಾಗವಾಗಿ ಹರಿದುಹೋಗುವಂತೆ ಮಾಡಬೇಕು. ಇನ್ನೊಂದು ಪ್ರಾಣನಷ್ಟವೂ ಆಗುವುದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದ್ದಾರೆ.

ಮೃತ ನತದೃಷ್ಟ ಯುವತಿ ಕುಟುಂಬಕ್ಕೆ ಪರಿಹಾರ ನೀಡಿರುವುದು ಸ್ವಾಗತಾರ್ಹ. ಆದರೆ, ಇಂತಹ ದುರಂತಗಳು ಮರುಕಳಿಸದಂತೆ ರಾಜ್ಯ ಸರ್ಕಾರ ಶಾಶ್ವತ ಪರಿಹಾರ ರೂಪಿಸಬೇಕು. ಅಂಡರ್ ಪಾಸ್, ರಸ್ತೆ, ಚರಂಡಿ, ಒಳಚರಂಡಿಗಳ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎನ್ನುವುದು ನನ್ನ ಆಗ್ರಹ ಎಂದು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!