ದೇಶದ ಹಲವೆಡೆ ಮಹಾಮಳೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಮಾನ್ಸೂನ್‌ ಮಾರುತಗಳು ಭಾರತದ ಹಲವೆಡೆ ಭಾರೀ ಮಳೆ ಸುರಿಸುತ್ತಿದ್ದು ವರುಣಾರ್ಭಟಕ್ಕೆ ದೇಶದ ಹಲವೆಡೆ ಜನಜೀವನ ಅಸ್ತವ್ಯಸ್ತವಾಗಿದೆ. ಕರ್ನಾಟಕದ ಕರವಾಳಿ ಮಲೆನಾಡು, ಮಹಾರಾಷ್ಟ್ರ, ಬಿಹಾರ, ಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗುತ್ತಿದೆ. ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಮಹಾರಾಷ್ಟ್ರದ ಮುಂಬೈ ನಲ್ಲಿ ಜುಲೈ ತಿಂಗಳು ಪೂರ್ತಿ ಸುರಿಯುವಷ್ಟು ಮಳೆಯ ಶೇ.70ರಷ್ಟು ಕಳೆದ ಐದೇ ದಿನದಲ್ಲಿ ಸುರಿದಿದ್ದು, ಮಳೆಯಬ್ಬರಕ್ಕೆ ಮುಂಬೈ ತತ್ತರಿಸಿದೆ. ನಗರದ ಹಲವೆಡೆ ನೀರು ತುಂಬಿಕೊಂಡಿದ್ದು ಈಗಾಗಲೇ ಓರ್ವ ವ್ಯಕ್ತಿ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಮಾಹಿತಿ ಲಭ್ಯವಾಗಿದೆ. ಮಹಾರಾಷ್ಟ್ರದ ಥಾಣೆ, ರಾಯಗಢ. ರತ್ನಗಿರಿ ಮುಂತಾದ ಕೊಂಕಣ ಪ್ರದೇಶದಲ್ಲಿ ಇನ್ನೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಅಗತ್ಯ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.

ನದಿಗಳ ನಗರಿ ಕೇರಳದಲ್ಲಿ ವ್ಯಾಪಕ ಮಳೆಯಾಗುತ್ತಿದ್ದು ಆರು ಜಿಲ್ಲೆಗಳಲ್ಲಿ ಕಟ್ಟೆಚ್ಚರ ಘೋಷಿಸಲಾಗಿದೆ. ಇಡುಕ್ಕಿ, ತ್ರಿಶೂರ್, ಮಲಪ್ಪುರಂ, ಕೋಝಿಕ್ಕೋಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲಿ ಸಮುದ್ರ ಪ್ರದೇಶದತ್ತ ಧಾವಿಸದಂತೆ ಮುನ್ನೆಚ್ಚರಿಕೆ ಘೋಷಣೆ ಮಾಡಲಾಗಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ಆರೆಂಜ್ ಅಲರ್ಟ್ ಘೋಷಣೆ ಮಾಡಲಾಗಿದೆ. ದೆಹಲಿಯಲ್ಲಿ ಸಧ್ಯತುಂತುರು ಮಳೆಯಾಗುತ್ತಿದ್ದು, ಗುರುವಾರ ಮಳೆ ತೀವ್ರಗೊಳ್ಳುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಉತ್ತರಾಖಂಡದಲ್ಲಿ ಭಾರೀ ಮಳೆಯಿಂದಾಗಿ ಪ್ರಸಿದ್ದ ಧಾರ್ಮಿಕ ಕ್ಷೇತ್ರ ಬದರಿನಾಥ್ ಗೆ ಸಾಗುವ ಸಿರೋಬ್‌ಗಡ ಮಾರ್ಗದಲ್ಲಿ ಭೂಕುಸಿತ ಸಂಭವಿಸಿದ್ದು, ಮುಂಜಾಗ್ರತಾ ಕ್ರಮವಾಗಿ ಹೆದ್ದಾರಿ ಸಂಚಾರವನ್ನು ನಿರ್ಬಂಧಿಸಲಾಗಿದೆ. ತಿಲ್ವಾರ-ಮಾಯಾಲಿ-ಘನ್ಸಾಲಿ ರಸ್ತೆಯನ್ನು ಸಹ ಮುಚ್ಚಲಾಗಿದೆ.

ಬಿಹಾರದಲ್ಲಿ ಸಹ ಬಾರೀ ಮಳೆಯಿಂದಾಗಿ ಪ್ರವಾಹ ಪರಿಸ್ಥತಿ ಉದ್ಭವಿಸಿದ್ದು, ಭಾಗಲ್ಪುರದಲ್ಲಿ ಸುರಿದ ಭಾರೀ ಮಳೆಗೆ ʼಕಣ್ಣೀರಿನ ನದಿʼ ಎಂದು (ಕು)ಪ್ರಸಿದ್ಧವಾದ ಕೋಶಿ ನದಿ ಉಕ್ಕಿ ಹರಿಯುತ್ತಿದ್ದು, ಗ್ರಾಮವನ್ನು ತೊರೆಯುವಂತೆ ಸ್ಥಳೀಯರಿಗೆ ಸೂಚನೆ ನೀಡಲಾಗಿದೆ. ಭಾಗಲ್ಪುರದ ನೌಗಾಚಿಯಾ ಪಟ್ಟಣದ ಸಿನ್ಕುಂಡ್ ಗ್ರಾಮವು ಈಗಾಗಲೇ ಜಲಾವೃತವಾಗಿದ್ದು, ಹಲವಾರು ಜನರು ತಮ್ಮ ಮನೆಗಳನ್ನು ತೊರೆದು ಸುಕ್ಷಿತ ಸ್ಥಳಗಳತ್ತ ತೆರಳುತ್ತಿದ್ದಾರೆ.

ಹಿಮಾಚಲ ಪ್ರದೇಶದ ಕುಲು ಜಿಲ್ಲೆಯಲ್ಲಿ ಮಳೆ ಅಬ್ಬರಕ್ಕೆ ಮಣಿಕರನ್ ಕಣಿವೆಯಲ್ಲಿ ಪ್ರವಾಹ ಸ್ಥತಿ ನಿರ್ಮಣವಾಗಿದೆ. ಚೋಜ್ ಗ್ರಾಮದಲ್ಲಿ ಹಲವು ಮನೆಗಳು ಹಾಗೂ ಹಾಗೂ ವೀಕ್ಷಣಾಲಯ ಕೇಂದ್ರಗಳಿಗೆ ಹಾನಿ ಸಂಭವಿಸಿದೆ.

ಇನ್ನು ಕರ್ನಾಟಕದಲ್ಲೂ ಮಳೆಯಬ್ಬರ ಜೋರಾಗಿಯೇ ಇದ್ದು ಕರಾವಳಿ ಹಾಗೂ ಮಲೆನಾಡು ಭಾಗದ ಜಿಲ್ಲೆಗಳಲ್ಲಿ ವ್ಯಾಪಕ ಮಳೆಯಾಗುತ್ತಿದೆ, ದಕ್ಷಿಣ ಕನ್ನಡ, ಉತ್ತರಕನ್ನಡ, ಶಿವಮೊಗ್ಗ ಮುಂತಾದ ಕಡಗಳಲ್ಲಿ ಶಾಲಾ-ಕಾಲೇಜಯಗಳಿಗೆ ರಜೆ ಘೋಷಿಸಲಾಗಿದ್ದು ಈ ಜಿಲ್ಲೆಗಳ ಹಲವು ತಾಲೂಕುಗಳಲ್ಲಿ ರೆಡ್‌ ಅಲರ್ಟ್‌, ಆರೆಂಜ್‌ ಅಲರ್ಟ್‌ ಘೋಷಿಸಲಾಗಿದೆ.

 

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!