ಅಂಕೋಲಾದಲ್ಲಿ ಭಾರೀ ಮಳೆ : ಹವಾಮಾನ ಇಲಾಖೆಯಿಂದ ಎಚ್ಚರಿಕೆ

ಹೊಸದಿಗಂತ ವರದಿ ಅಂಕೋಲಾ :
ತಾಲೂಕಿನಲ್ಲಿ ರವಿವಾರ ರಾತ್ರಿಯಿಂದ ಸುರಿಯುತ್ತಿರುವ ಮಳೆ ಸೋಮವಾರವೂ ಮುಂದುವರಿದಿದ್ದು ಸತತ ಮಳೆ ಸುರಿದ ಪರಿಣಾಮವಾಗಿ ಕೆಲವಡೆ ನೀರು ತುಂಬಿಕೊಂಡ ಘಟನೆಗಳು ನಡೆದಿವೆ.
ತಾಲೂಕಿನ ಅಚವೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಟಕಣಿ ಕ್ರಾಸ್ ಬಳಿ ಸುಮಾರು ಅರ್ಧ ಘಂಟೆಗಳ ಕಾಲ ರಸ್ತೆಯಲ್ಲಿ ನೀರು ನಿಂತು ಸಂಚಾರಕ್ಕೆ ಕೆಲ ಕಾಲ ವಾಹನಗಳ ಸಂಚಾರಕ್ಕೆ ಅಡೆ ತಡೆ ಉಂಟಾಗಿದೆ.
ವಿಪರೀತ ಮಳೆಯ ಕಾರಣ ತಾಲೂಕಿನ ಗುಡ್ಡಗಾಡು ಮತ್ತು ದ್ವೀಪ ಪ್ರದೇಶಗಳ ಏಳು ಶಾಲೆಗಳಿಗೆ ಮುನ್ನೆಚ್ಚರಿಕೆ ಕ್ರಮವಾಗಿ ಸೋಮವಾರ ರಜೆ ಘೋಷಣೆ ಮಾಡಲಾಗಿದೆ.
ತಾಲೂಕಿನ ಡೋಂಗ್ರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹೆಗ್ಗಾರ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಹಳವಳ್ಳಿ, ಅಚವೆ ಪಂಚಾಯತಿ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಮಾಬಗಿ, ಕಿರಿಯ ಪ್ರಾಥಮಿಕ ಶಾಲೆ ಚನಗಾರ, ಕಿರಿಯ ಪ್ರಾಥಮಿಕ ಶಾಲೆ ಮೋತಿಗುಡ್ಡ ಹಿಲ್ಲೂರು ಪಂಚಾಯಿತಿ ವ್ಯಾಪ್ತಿಯ ಕಿರಿಯ ಪ್ರಾಥಮಿಕ ಶಾಲೆ ಹೊಸಕಂಬಿ ಮತ್ತು ಹಿಚ್ಕಡ ಕೂರ್ವೆ ನಡುಗಡ್ಡೆಯ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ಸೋಮವಾರದಂದು ರಜೆ ಘೋಷಸಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಆದೇಶ ಹೊರಡಿಸಿದ್ದಾರೆ.
ಭಾರೀ ಮಳೆಯಿಂದಾಗಿ ನದಿ ಮತ್ತು ಹಳ್ಳಗಳ ತೀರದ ಕೃಷಿ ಭೂಮಿಯಲ್ಲಿ ನೀರು ತುಂಬಿ ಕೃಷಿ ಕಾರ್ಯಗಳಿಗೂ ಹಿನ್ನಡೆ ಉಂಟಾಗಿದೆ.
ಮುಂದಿನ ಮೂರು ದಿನಗಳ ಕಾಲ ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಭಾರೀ ಮಳೆ ಆಗುವ ಸಾಧ್ಯತೆ ಕುರಿತು ಹವಾಮಾನ ಇಲಾಖೆ ಎಚ್ಚರಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!