Sunday, August 14, 2022

Latest Posts

ಭಾರೀ ಮಳೆಗೆ ಜೀವನದಿಗಳು ಭರ್ತಿ: ಹಾರಂಗಿ ಜಲಾಶಯದಿಂದ 15,500 ಕ್ಯುಸೆಕ್ ನೀರು ಬಿಡುಗಡೆ!

ಹೊಸದಿಗಂತ ವರದಿ, ಕುಶಾಲನಗರ:

ಕೊಡಗು ಜಿಲ್ಲೆಯ ಪ್ರಮುಖ ಜಲಾಶಯವಾದ ಹಾರಂಗಿ ಅಣೆಕಟ್ಟೆಯ ಜಲಾನಯನ ಪ್ರದೇಶದಲ್ಲಿ ಮತ್ತೆ ಧಾರಾಕಾರ ಮಳೆಯಾಗುತ್ತಿದ್ದು, ಜಲಾಶಯಕ್ಕೆ ನೀರಿನ ಒಳ ಹರಿವು ಮತ್ತೆ ಅಧಿಕವಾಗಿದೆ.ಈ ಹಿನ್ನೆಲೆಯಲ್ಲಿ ನದಿಗೆ ಹೊರಬಿಡುವ ನೀರಿನ ಪ್ರಮಾಣವನ್ನು ಮತ್ತೆ 15,500 ಕ್ಯುಸೆಕ್’ಗೆ ಹೆಚ್ಚಿಸಲಾಗಿದೆ.
ಶುಕ್ರವಾರ ಹಾರಂಗಿಗೆ ಒಳ ಹರಿವಿನ ಪ್ರಮಾಣ ಸ್ವಲ್ಪ ಕಡಿಮೆಯಾಗಿತ್ತಾದರೂ, ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರ ಸೂಚನೆಯಂತೆ ಅಣೆಕಟ್ಟೆಯಿಂದ ನದಿಗೆ ಹೆಚ್ಚುವರಿಯಾಗಿ ನೀರನ್ನು ಹರಿಸಲಾಗುತ್ತಿದೆ.
ಹಾರಂಗಿ ಜಲಾನಯನ ಪ್ರದೇಶಗಳಾದ ಮಾದಾಪುರ, ಹಟ್ಟಿಹೊಳೆ, ಜಂಬೂರು, ಗರ್ವಾಲೆ, ಸೂಲಬ್ಬಿ ಸೇರಿದಂತೆ ಹಲವಾರು ಪ್ರದೇಶಗಳಲ್ಲಿ ಅಧಿಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯದ ಒಳಹರಿವಿನ ಪ್ರಮಾಣ ಗಂಟೆಗಂಟೆಗೂ ಹೆಚ್ಚುವರಿಯಾಗುತ್ತಿದೆ. ಈ ಮಾಹಿತಿಯನ್ನು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಪಡೆಯಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ನದಿಗೆ ಹೆಚ್ಚುವರಿ ನೀರನ್ನು ಬಿಡಲು ಸೂಚಿಸಲಾಗಿದೆ ಎಂದು ಶಾಸಕ ಎಂ.ಪಿ.ಅಪ್ಪಚ್ಚು
ರಂಜನ್ ತಿಳಿಸಿದ್ದಾರೆ.
ಶಾಸಕರ ಸೂಚನೆಯಂತೆ ನೀರಾವರಿ ಇಲಾಖೆಯ ಅಧಿಕಾರಿಗಳು ಅಣೆಕಟ್ಟೆಯ ನೀರಿನ ಮಟ್ಟವನ್ನು ಕಾಯ್ದಿರಿಸಿಕೊಂಡು ನೀರನ್ನು ನದಿಗೆ ಹರಿಸುತ್ತಿದ್ದಾರೆ.
ಅಣೆಕಟ್ಟೆಯಿಂದ ನದಿಗೆ ಬಿಡುಗಡೆಯಾಗುವ ಹೆಚ್ಚುವರಿ ನೀರು ಕೂಡಿಗೆಯ ಬಳಿ ಕಾವೇರಿ ನದಿಗೆ ಸೇರುತ್ತಿದ್ದು, ಇದರಿಂದಾಗಿ ಸಂಗಮದ ಮೇಲ್ಭಾಗದಲ್ಲಿ ಕಾವೇರಿ ನೀರಿನ‌ ಮಟ್ಟ ಹೆಚ್ಚಳವಾಗಿ ಕುಶಾಲನಗರ ಸುತ್ತಮುತ್ತಲ ತಗ್ಗು ಪ್ರದೇಶಗಳು ಜಲಾವೃತಗೊಂಡು ಭಾರೀ ನಷ್ಟ ಸಂಭವಿಸುತ್ತದೆ. ಇದನ್ನು ತಡೆಯುವ ನಿಟ್ಟಿನಲ್ಲಿ ಹಾರಂಗಿ ಜಲಾಶಯದಿಂದ ಹೊರಬಿಡುವ ನೀರಿನ ಪ್ರಮಾಣವನ್ನು ಹಂತಹಂತವಾಗಿ ಹೆಚ್ಚು ಕಡಿಮೆ ಮಾಡಲಾಗುತ್ತಿದೆ.
ಕೂಡಿಗೆಯಲ್ಲಿ ಹಾರಂಗಿಯು ಕಾವೇರಿಯನ್ನು ಸೇರಿಕೊಂಡು ಕಣಿವೆಯ ಶ್ರೀ ರಾಮಲಿಂಗೇಶ್ವರ ಸ್ವಾಮಿ ದೇವಾಲಯ ಹತ್ತಿರದ ಸಣ್ಣ ಕಟ್ಟೆಗೆ ಹೊಡೆದು ನೀರು ಮಿಶ್ರವಾಗುವ ಮತ್ತು ಮುಂದಕ್ಕೆ ಹರಿಯುವ ದೃಶ್ಯ ಮನ ಮೋಹಕವಾಗಿರುತ್ತದೆ. ಇದನ್ನು ವೀಕ್ಷಿಸಲು ನೂರಾರು ಪ್ರವಾಸಿಗರು ಹಾಗೂ ಸ್ಥಳೀಯರು ಆಗಮಿಸುತ್ತಿದ್ದಾರೆ.
ಆದರೆ ಕಣಿವೆಯ ರಾಮಲಿಂಗೇಶ್ವರ ದೇವಾಲಯ ಎದುರು ನಿರ್ಮಿಸಲಾಗಿರುವ ತೂಗುಸೇತುವೆ ಶಿಥಿಲವಾಗಿದ್ದರೂ, ನೂರಾರು ಪ್ರವಾಸಿಗರು ತೂಗು ಸೇತುವೆ ಮೇಲೆ ನಿಂತು ಕಾವೇರಿ ನದಿಯ ವೀಕ್ಷಣೆ ಮಾಡುತ್ತಿರುವುದು ಅಪಾಯಕ್ಕೆ ಆಹ್ವಾನ ನೀಡಿದಂತಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss