ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………………
ಹೊಸ ದಿಗಂತ ವರದಿ, ಶಿವಮೊಗ್ಗ :
ಹವಾಮಾನ ತಜ್ಞರ ಮಾಹಿತಿಯಂತೆ ನಾಳೆಯಿಂದ ಮುಂದಿನ 2-3ದಿನಗಳ ಕಾಲ ರಾಜ್ಯದಲ್ಲಿ ಸಾಮಾನ್ಯದಿಂದ ಭಾರೀ ಮಳೆ ಆಗುವ ಸಾಧ್ಯತೆ ಇದ್ದು, ಸಾರ್ವಜನಿಕರು ಹಾಗೂ ತಗ್ಗು ಪ್ರದೇಶದ ನಿವಾಸಿಗಳು ಮುಂಜಾಗ್ರತಾ ಕ್ರಮವಾಗಿ ಸುರಕ್ಷತಾ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಜಿಲ್ಲಾಧಿಕಾರಿ ಕೆ.ಬಿ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಎಲ್ಲಾ ತಾಲೂಕುಗಳ ತಹಶಿಲ್ದಾರರು ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳೊಂದಿಗೆ ವಿಡಿಯೊ ಸಂವಾದ ನಡೆಸಿ, ಅಗತ್ಯ ಹಾಗೂ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದರು.
ಕೊರೋನ ಸೋಂಕು ಜಿಲ್ಲೆಯಲ್ಲಿ ಉಚ್ಛ್ರಾಯ ಸ್ಥಿತಿಯಲ್ಲಿರುವಾಗಲೆ ಮುಂಗಾರು ಮಳೆಯಿಂದ ಸಂಭವಿಸಬಹುದಾದ ಜೀವ ಮತ್ತು ಪ್ರಾಣ ಹಾನಿಗಳನ್ನು ನಿಯಂತ್ರಿಸುವ ಕಾರ್ಯದಲ್ಲಿ ರಕ್ಷಣಾ, ಕಂದಾಯ, ಅಗ್ನಶಾಮಕ, ಮೆಸ್ಕಾಂ ಹಾಗೂ ಸಂಬಂಧಿಸಿದ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಿದ್ದತೆಗಳನ್ನು ಕೈಗೊಂಡು ಸದಾಸನ್ನದ್ಧರಾಗಿರಬೇಕು. ಮುಂಗಾರು ಮಳೆಯಿಂದಾಗುವ ಅನಾಹುತದ ಪರಿಹಾರ ಕಾರ್ಯಗಳಿಗೆ ತಾಲೂಕುವಾರು 25ಲಕ್ಷ ರೂ.ಗಳನ್ನು ಮಂಜೂರು ಮಾಡಲಾಗುವುದು ಎಂದರು.