ಹೊಸದಿಗಂತ ವರದಿ ಹಾಸನ :
ಜಿಲ್ಲೆಯ ಮಲೆನಾಡು ಭಾಗ ಹಾಗೂ ಚಿಕ್ಕಮಗಳೂರಿನಲ್ಲಿ ಭಾರಿ ಮಳೆ ಹಿನ್ನಲೆ ಜಿಲ್ಲೆಯ ಜೀವನದಿ ಹೇಮಾವತಿ ನದಿ ಮೈದುಂಬಿ ಹರಿಯುತ್ತಿದೆ.
ನಿರಂತರ ಮಳೆಯಿಂದ ಸಕಲೇಶಪುರ ಪಟ್ಟಣದಲ್ಲಿ ಹರಿಯುವ ಹೇಮಾವತಿ ನದಿಗೆ ಮಲೆನಾಡ ಭಾಗದಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಯಿಂದ ಒಳಹರಿವು ಹೆಚ್ಚಾಗಿದೆ. ಈ ಬಾರಿ ಮೇ ತಿಂಗಳಿನಲ್ಲೇ ಹೇಮಾವತಿ ನದಿಗೆ ಹೆಚ್ಚಿನ ಒಳಹರಿವಾಗಿದೆ.
ಹೇಮಾವತಿ ಜಲಾಶಯಕ್ಕೆ ಒಳಹರಿವಿನಲ್ಲಿ ಬಾರಿ ಏರಿಕೆಯಾಗಿದೆ : ಹಾಸನ ತಾಲ್ಲೂಕಿನ, ಗೊರೂರಿನಲ್ಲಿರುವ ಹೇಮಾವತಿ ಜಲಾಶಯಕ್ಕೆ ಒಂದೇ ದಿನಕ್ಕೆ 6,356 ಕ್ಯೂಸೆಕ್ ಒಳಹರಿವು ಹೆಚ್ಚಳವಾಗಿದೆ.
ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ – ಜಲಾಶಯದ ನೀರಿನ ಸಂಗ್ರಹ ಸಾಮರ್ಥ್ಯ – 37.103 ಟಿಎಂಸಿ ಹೊಂದಿದ್ದು ಸದ್ಯ ಜಲಾಶಯದಲ್ಲಿರುವ ನೀರು – 19.627 ಟಿಎಂಸಿ ಸಂಗ್ರಹವಾಗಿದೆ. ಹೇಮಾವತಿ ಜಲಾಶಯದ ಗರಿಷ್ಠ ಮಟ್ಟ – 2922.00 ಅಡಿ ಇದ್ದು ಇಂದಿನ ನೀರಿನ ಮಟ್ಟ – 2899.90 ಅಡಿ ಆಗಿದೆ. ಒಳಹರಿವು – 9808 ಕ್ಯೂಸೆಕ್ ಇದ್ದು 3225 ಕ್ಯೂಸೆಕ್ ನೀರನ್ನು ಹರಿಬಿಡಲಾಗುತ್ತಿದೆ.