ಹೊಸ ದಿಗಂತ ಡಿಜಿಟಲ್ ಡೆಸ್ಕ್:
ರಾಜ್ಯದಲ್ಲಿ ಇನ್ಮುಂದೆ ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅಗತ್ಯವಾಗಿದ್ದಲ್ಲಿ ಮುಖ್ಯಮಂತ್ರಿಯವರ ಪೂರ್ವಾನುಮತಿಯನ್ನು ಪಡೆಯುವುದು ಕಡ್ಡಾಯಗೊಳಿಸಿ ಸಿಎಂ ಸಿದ್ಧರಾಮಯ್ಯ ಆದೇಶಿಸಿದ್ದಾರೆ.
ಈ ಸಂಬಂಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಟಿಪ್ಪಣಿ ಹೊರಡಿಸಿದ್ದು,ಸಾರ್ವತ್ರಿಕ ವರ್ಗಾವಣೆ ಅವಧಿ ಮುಗಿದಿರುವುದರಿಂದ ಇನ್ನು ಯಾವುದೇ ಇಲಾಖೆಯಲ್ಲಿ ವರ್ಗಾವಣೆಗಳನ್ನು ಆಡಳಿತಾತ್ಮಕ ಹಾಗೂ ಸಾರ್ವಜನಿಕ ಹಿತದೃಷ್ಟಿಯಿಂದ ಮಾಡುವುದು ಅತ್ಯಗತ್ಯವಾಗಿದ್ದಲ್ಲಿ, ಮುಖ್ಯಮಂತ್ರಿಯವರ ಪೂರ್ವಾನುಮೋದನೆಯನ್ನು ಪಡೆಯತಕ್ಕದ್ದು ಎಂದು ಸೂಚಿಸಿದ್ದಾರೆ.
ಒಂದು ವೇಳೆ ಪೂರ್ವಾನುಮೋದನೆಯನ್ನು ಪಡೆಯದೇ, ಯಾವುದೇ ವರ್ಗಾವಣೆಗಳನ್ನು ಮಾಡಿದಲ್ಲಿ ಸಂಬಂಧಪಟ್ಟ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು, ಪ್ರಧಾನ ಕಾರ್ಯದರ್ಶಿಗಳು , ಕಾರ್ಯದರ್ಶಿಗಳು ಹಾಗೂ ಇಲಾಖಾ ಮುಖ್ಯಸ್ಮರನ್ನು ನೇರ ಜವಾಬ್ದಾರರನ್ನಾಗಿಸಿ ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಲಾಗಿದ್ದರೂ, ಸದರಿ ನಿರ್ದೇಶನವನ್ನು ಉಲ್ಲಂಘಿಸಿ, ಪದೇ ಪದೇ ಘಟನೋತ್ತರ ಅನುಮೋದನ ಕೋರಿ ಕಡತಗಳನ್ನು ಸಲ್ಲಿಸುತ್ತಿರುವುದನ್ನು ಗಮನಿಸಲಾಗಿದೆ ಎಂದು ತಿಳಿಸಿದ್ದಾರೆ.
ಆದುದರಿಂದ, ಸದರಿ ಸುತ್ತೋಲೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಹಾಗೂ ಯಾವುದೇ ವರ್ಗಾವಣೆ ಕಡತಗಳನ್ನು ಮಾನ್ಯ ಮುಖ್ಯಮಂತ್ರಿಗಳ ಅನುಮೋದನ ಇಲ್ಲದ ಹೊರಡಿಸಬಾರದೆಂದು ಹಾಗೂ ಇನ್ನು ಮುಂದೆ ಕಡತಗಳನ್ನು ಘಟನೋತ್ತರ ಅನುಮೋದನಗೆ ಮಂಡಿಸದಂತೆ, ಸ್ಪಷ್ಟವಾಗಿ ಎಲ್ಲಾ ಇಲಾಖಾ ಅಪರ ಮುಖ್ಯ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ , ಕಾರ್ಯದರ್ಶಿಗಳಿಗೆ ಸೂಚಿಸುವಂತೆ ತಿಳಿಸಿದ್ದಾರೆ.