ಸ್ಟಾರ್‌ ಆಟಗಾರ ಪವನ್ ಸೆಹ್ರಾವತ್‌ ರನ್ನೇ‌ ತಂಡದಿಂದ ಕೈಬಿಟ್ಟ ಬೆಂಗಳೂರು ಬುಲ್ಸ್‌: ಪ್ರಾಂಚೈಸಿ ನಿರ್ಧಾರಕ್ಕೆ ಅಭಿಮಾನಿಗಳು ಶಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
VIVO ಪ್ರೊ ಕಬಡ್ಡಿ ಲೀಗ್‌ ನ 9 ನೇ ಆವೃತ್ತಿಗೆ ಸಿದ್ಧತೆಗಳು ಪ್ರಾರಂಭವಾಗಿವೆ. ಇನ್ನೇನು ಕೆಲವೇ ದಿನಗಳಲ್ಲಿ ಆಟಗಾರರು ಅಂಗಣಕ್ಕಿಳಿದು ಅಬ್ಬರಿಸಲಿದ್ದಾರೆ. ಇದೇ ಆಗಸ್ಟ್ 5 ಮತ್ತು 6 ರಂದು ಈ ಆವೃತ್ತಿಗೆ ಮೆಗಾ ಹರಾಜು ಪ್ರಕ್ರಿಯೆ ನಡೆಯಲಿದೆ. ಹರಾಜಿಗೂ ಮುಂಚಿತವಾಗಿ ಎಲ್ಲಾ 12 ತಂಡಗಳು ತಾವು ಉಳಿಸಿಕೊಂಡಿರುವ ʼಎಲೈಟ್  ಆಟಗಾರರ’ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಬೆಂಗಳೂರು ಬುಲ್ಸ್  ತಂಡವು ಉಳಿಸಿಕೊಂಡ ಆಟಗಾರರ ಪಟ್ಟಿಯನ್ನು ನೋಡಿ ಅಭಿಮಾನಿಗಳು ಶಾಕ್‌ ಆಗಿದ್ದಾರೆ. ಬುಲ್ಸ್‌ ತನ್ನ ನಾಯಕ, ಸ್ಟಾರ್‌ ಆಟಗಾರ ಪವನ್ ಸೆಹ್ರಾವತ್ ಅವರನ್ನೇ ತಂಡದಿಂದ ಕೈಬಿಟ್ಟಿದೆ!.

ಮಣಿಂದರ್ ಸಿಂಗ್, ಮಹೇಂದರ್ ಸಿಂಗ್, ಮೊಹಮದ್ ರೇಜಾ ಚಿಯಾನೆ, ಅರ್ಜುನ್ ದೇಶ್ವಾಲ್ ಮತ್ತು ಸೋಂಬಿರ್ ಅವರಂತಹ ಪ್ರಖ್ಯಾತ ಆಟಗಾರರನ್ನು ಪ್ರೊ ಕಬಡ್ಡಿ ಲೀಗ್‌ನ ಒಂಬತ್ತನೇ ಋತುವಿಗಾಗಿ ಫ್ರಾಂಚೈಸಿಗಳು ಉಳಿಸಿಕೊಂಡಿವೆ. ಆದರೆ ನಾಯಕರಾಗಿ  ಹಿಂದೆ ಬೆಂಗಳೂರು ಬುಲ್ಸ್ ತಂಡವನ್ನು ಚಾಂಪಿಯನ್‌ ಪಟ್ಟಕ್ಕೇರಿಸಿದ ಪವನ್ ಸೆಹ್ರಾವತ್ ರನ್ನೇ ಫ್ರಾಂಚೈಸಿ ಉಳಿಸಿಕೊಳ್ಳಲು ನಿರ್ಧರಿಸಿಲ್ಲ.
ʼಹೈ ಪ್ಲೈಯರ್ʼ ಎಂಬ ಅನ್ವರ್ಥ ನಾಮ ಹೊತ್ತಿರುವ ಪವನ್ ಕುಮಾರ್ ಶೆರಾವತ್ ಪ್ರೊ ಕಬಡ್ಡಿ ಲೀಗ್ ನಲ್ಲಿ ತಮ್ಮ ಅದ್ಭುತ ರೈಡಿಂಗ್ ಎದುರಾಳಿ ಡಿಫೆನ್ಸ್ ಪಾಳಯದಲ್ಲಿ ನಡುಕ ಹುಟ್ಟಿಸಿದ್ದಾರೆ. 2018ರಿಂದ ಬೆಂಗಳೂರು ಬುಲ್ಸ್ ತಂಡಕ್ಕೆ ಮರಳಿದ್ದ ಪವನ್ ಕುಮಾರ್ ಟೂರ್ನಿಯುದ್ದಕ್ಕೂ ಅಬ್ಬರಿಸಿ ಬೆಂಗಳೂರು ಬುಲ್ಸ್ ತಂಡವನ್ನು ಮೊದಲ ಬಾರಿಗೆ ಚಾಂಪಿಯನ್ ಪಟ್ಟಕ್ಕೇರಿಸಿದ್ದರು. ಫೈನಲ್‌ ನಲ್ಲಿ ಗುಜರಾತ್ ಜೈಂಟ್ಸ್ ವಿರುದ್ದ ಬರೋಬ್ಬರಿ 22 ಅಂಕ ಕಲೆಹಾಕಿ ಬೆಂಗಳೂರು ತಂಡಕ್ಕೆ ಚೊಚ್ಚಲ ಪಿಕೆಎಲ್ ಕಪ್‌ ಗೆಲ್ಲಿಸಿಕೊಟ್ಟಿದ್ದರು.

ಪವನ್ ಸೆಹ್ರಾವತ್ ಕಳೆದ ಮೂರ್ನಾಲ್ಕು ಸೀಸನ್‌ಗಳಲ್ಲಿ ಪ್ರೊ ಕಬಡ್ಡಿ ಲೀಗ್‌ನಲ್ಲಿ ನಂಬರ್ ಒನ್ ರೈಡರ್ ಆಗಿದ್ದಾರೆ. ಕಳೆದ ಎರಡು ಸೀಸನ್‌ಗಳಿಂದ ಬೆಂಗಳೂರು ಬುಲ್ಸ್‌ನ ಸಂಪೂರ್ಣ ರೇಡಿಂಗ್ ಜವಾಬ್ದಾರಿಯು ಪವನ್ ಅವರ ಹೆಗಲ ಮೇಲಿದೆ.
ಆದರೂ, ಬೆಂಗಳೂರು ಮೂಲದ ಫ್ರಾಂಚೈಸಿ ಅವರನ್ನು ಕೈಬಿಡಲು ನಿರ್ಧರಿಸಿದೆ.

ಬುಲ್ಸ್ ಪವನ್‌ ರನ್ನು ಬಿಡುಗಡೆ ಮಾಡಲು ಸಂಭವನೀಯ ಕಾರಣಗಳೇನು? ವಿಶ್ಲೇಷಣೆ ಇಲ್ಲಿದೆ..
>ಕಳೆದ ವರ್ಷ, ಪಾಟ್ನಾ ಪೈರೇಟ್ಸ್ ತಂಡವು ತನ್ನ ಸ್ಟಾರ್‌ ಆಟಗಾರ ಪ್ರದೀಪ್‌ ನರ್ವಾಲ್ ಅನ್ನು ಬಿಡುಗಡೆ ಮಾಡಿದಾಗ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದರು. ನಂತರ, ಈ ಬಗ್ಗೆ ಪ್ರತಿಕ್ರಿಯಿಸಿದ್ದ ತಂಡದ ಕೋಚ್‌, ರೈಡರ್ ಪ್ರದೀಪ್‌ ಹರಾಜಿನ ಭಾಗವಾಗಲು ಬಯಸಿ  ಸ್ವತಃ ತನ್ನನ್ನು ಬಿಡುಗಡೆ ಮಾಡಲು ಕೇಳಿಕೊಂಡಿದ್ದರಿಂದಲೇ ತಂಡದಿಂದ ಕೈಬಿಡಲಾಗಿತ್ತು ಎಂದು ಬಹಿರಂಗಪಡಿಸಿದ್ದರು. ಅದೇ ರೀತಿ ಸ್ವತಃ ಪವನ್ ಸೆಹ್ರಾವತ್ ತಮನ್ನು ಬಿಡುಗಡೆ ಮಾಡುವಂತೆ ಬೆಂಗಳೂರು ಬುಲ್ಸ್ ತಂಡದ ಮ್ಯಾನೇಜ್‌ ಮೆಂಟ್‌ ಗೆ ಕೇಳಿರುವ ಸಾಧ್ಯತೆ ಇದೆ.
> ಪವನ್‌ ಸದ್ಯ ಹರಾಜಿಗೆ ಬಂದಿರುವುದರಿಂದ PKL ನ ಅತ್ಯಂತ ದುಬಾರಿ ಒಪ್ಪಂದವನ್ನು ಪಡೆಯಲಿದ್ದಾರೆ ಎಂಬುದು ಎಲ್ಲರೂ ಊಹಿಸಬಹುದಾದ ವಿಚಾರ. ಬೆಂಗಳೂರು ಬುಲ್ಸ್ ತಂಡವು ಪವನ್‌ ರನ್ನು ಮರಳಿ ಪಡೆಯಲು ಬಯಸಿದರೆ, ಹರಾಜಿನಲ್ಲಿ ಹೆಚ್ಚಿನ ಮೊತ್ತವನ್ನು ಬಿಡ್ ಮಾಡಬೇಕಾಗುತ್ತದೆ ಅಥವಾ FBM ಕಾರ್ಡ್ ಅನ್ನು ಬಳಸಬೇಕಾಗುತ್ತದೆ.
> ಇಲ್ಲದಿದ್ದರೆ, ತಂಡದಲ್ಲಿ ಕೆಲವು ಹೊಸ ಆಟಗಾರರೊಂದಿಗೆ ಹೊಸ ಆರಂಭವನ್ನು ಮಾಡಲು ಬೆಂಗಳೂರು ಬುಲ್ಸ್ ಪವನ್‌ ರನ್ನು ತಂಡದಿಂದ ಬಿಡುಗಡೆ ಮಾಡಿರಬಹುದು. ಈ ಕಾರಣವು ತೀರಾ ಅಸಂಭವವೆಂದು ತೋರುತ್ತದೆ. ಪವನ್‌ ರಂತಹ ಏಕಾಂಗಿಯಾಗಿ ಪಂದ್ಯ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆಟಗಾರರನನ್ನು ತಂಡ ತಾನಾಗಿಯೇ ಕೈಬಿಡುವ ಸಾಧ್ಯತೆ ಕಡಿಮೆ.
ಇದೇ 5 ಮತ್ತು 6 ರಂದು ಹಾರಾಜು ಪ್ರಕ್ರಿಯೆ ನಡೆಯಲಿದ್ದು ಪವನ್‌ ಮರಳಿ ಬೆಂಗಳೂರು ಬುಲ್ಸ್‌ ತಂಡವನ್ನು ಸೇರುತ್ತಾರಾ ಇಲ್ಲವೇ, ಬೇರೆ ತಂಡದ ಪಾಲಾಗುತ್ತಾರಾ ಎಂಬ ವಿಚಾರ ತಿಳಿದು ಬರಲಿದೆ. ಆದರೆ ಬುಲ್‌ ಅಭಿಮಾನಿಗಳು ಮಾತ್ರ ಪವನ್‌ ಇಲ್ಲದ ಬೆಂಗಳೂರು ತಂಡವನ್ನು ಕಲ್ಪಿಸಿಕೊಳ್ಳಲು ಸಾಧ್ಯವಿಲ್ಲ, ಅವರನ್ನು ಮರಳಿ ತಂಡಕ್ಕೆ ಕರೆತನ್ನಿ ಎಂದು ಸಾಮಾಜಿಕ ತಾಣಗಳಲ್ಲಿ  ಬುಲ್ಸ್‌ ಪ್ರಾಂಚೈಸಿಗೆ ಮಾನವಿ ಮಾಡಿಕೊಳ್ಳುತ್ತಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!