Friday, March 5, 2021

Latest Posts

ನೇತ್ರಾವತಿ ಸೇತುವೆ ಪಕ್ಕ ಇವರದ್ದು 6 ರಿಂದ 9 ಅಭಿಯಾನ ಡ್ಯೂಟಿ: ಭೇಷ್ ಭೇಷ್ ನಾಗರಾಜ್!

ಹೊಸ ದಿಗಂತ ವರದಿ, ಮಂಗಳೂರು:

ಯುವಜನತೆ ಸದಾ ಸಿನೆಮಾ, ಮಾಲ್, ಕ್ರಿಕೆಟ್ ಎಂದು ಜಾಲಿ ಮೂಡ್‌ನಲ್ಲಿ ಇರುವ ಮಧ್ಯೆ ಇಲ್ಲೊಬ್ಬ ಯುವಕ ನದಿಗೆ ಕಸ ಎಸೆಯದಂತೆ ಒಬ್ಬಂಟಿಗನಾಗಿ ಅಭಿಯಾನ ನಡೆಸುವ ಮೂಲಕ ಗಮನ ಸೆಳೆದಿದ್ದಾರೆ.

ಸಾಮಾಜಿಕ ಕಳಕಳಿಯಿಂದ ದಿನನಿತ್ಯ ಬೆಳಗ್ಗೆ 6 ರಿಂದ 9ರವರೆಗೆ ಅಭಿಯಾನ ಈ ಅಭಿಯಾನ ನಡೆಸುತ್ತಿರುವವರು ಹಸಿರು ದಳ ಓಷಿಯನ್ ರಿಸೈಕ್ಲಿಂಗ್ ಸಮನ್ವಯಕಾರ ಮಂಗಳೂರಿನ ನಾಗರಾಜ್ ರಾಘವ್ ಅಂಚನ್.

ಸಮೀಕ್ಷೆ ನಡೆಸಿದ್ದರು…
ನದಿಗೆ ಕಸ ಬಿಸಾಡುವವರ ಬಗ್ಗೆ  ಎರಡು ಎನ್‌ಜಿಒ ಹಲವು ದಿನಗಳ ಕಾಲ ಸಮೀಕ್ಷೆ ನಡೆಸಿದ್ದವು. ಈ ಸಂದರ್ಭ ಬೆಳಗ್ಗೆ 6 ರಿಂದ 9 ಗಂಟೆ ಯ ವೇಳೆಗೆ ಹೆಚ್ಚಿನವರು ಕಚೇರಿಗೆ ಅಥವಾ ಕಾರ್ಯನಿಮಿತ್ತ ನಗರಕ್ಕೆ ವಾಹನದಲ್ಲಿ ತೆರಳುವಾಗ ಕಸ ಎಸೆಯು ವುದು ಕಂಡು ಬಂತು. ಕೆಲವರು ರಾತ್ರಿ ವೇಳೆಯೂ ಕಸ ಬಿಸಾಡುತ್ತಿದ್ದರು. ಈ ಕಾರಣದಿಂದ ಅಭಿಯಾನ ನಡೆಸಲು ನಿರ್ಧರಿಸಲಾಯಿತು.

ಅಭಿಯಾನ ನಡೆಸಿದ್ದರು…
ಜ.18 ರಿಂದ ಜ.23ರವರೆಗೆ ಬೆಳಗ್ಗೆ 6ರಿಂದ 9ರವರೆಗೆ ಮಂಗಳೂರಿನ ಎಪಿಡಿ ಪ್ರತಿಷ್ಠಾನ-ಹಸಿರು ದಳ ಜಂಟಿಯಾಗಿ ನೇತ್ರಾವತಿ ನದಿಗೆ ತ್ಯಾಜ್ಯವನ್ನು ಎಸೆಯದಂತೆ ತಡೆಯಲು ಸೇತುವೆಯಲ್ಲಿ ‘ನಮ್ಮ ನೇತ್ರಾವತಿ-ನಮ್ಮ ಜವಾಬ್ದಾರಿ’ ವಿಶಿಷ್ಟ ಅಭಿಯಾನ ನಡೆಸಿತ್ತು. ನಗರದ ವಿವಿಧ ಸಂಘ ಸಂಸ್ಥೆಗಳ ಸ್ವಯಂಸೇವಕರು ಸೇತುವೆಯುದ್ದಕ್ಕೂ ಒಗ್ಗೂಡಿ ತ್ಯಾಜ್ಯವನ್ನು ನದಿಗೆ ಎಸೆಯದಂತೆ ಜಾಗೃತಿ ಮೂಡಿಸಿ ದ್ದರು. ಇದಕ್ಕೆ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿತ್ತು.

ಸಿಸಿ ಕ್ಯಾಮರಾಗೆ ಆಗ್ರಹ…
ಈ ಸಾಮೂಹಿಕ ಜಾಗೃತಿ ಸಂದೇಶ ಜ.23ಕ್ಕೆ ಕೊನೆಗೊಂಡಿದ್ದು, ಅಭಿಯಾನದಿಂದ ಜನರಲ್ಲಿ ಜಾಗೃತಿ ಮೂಡಿದೆ. ಶೇ.90ರಷ್ಟು ಕಸ ಬೀಳುವುದು ಕಡಿಮೆಯಾಗಿದೆ. ಆದರೂ ಕೆಲವರು ರಾತ್ರಿ ಹೊತ್ತು, ಮುಂಜಾನೆ ಕಸ ಬಿಸಾಡುತ್ತಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ  ಮತ್ತಷ್ಟು ಜಾಗೃತಿ ಮೂಡಿಸುವ ಉದ್ದೇಶದೊಂದಿಗೆ ಮಾತ್ರವಲ್ಲದೆ ಸೇತುವೆಯುದ್ದಕ್ಕೂ ಸಿಸಿ ಕ್ಯಾಮರಾ ಅಳವಡಿಕೆ ಮಾಡುವಂತೆ ಒತ್ತಾಯಿಸಿ ನಾಗರಾಜ್ ಅಂಚನ್ ಒಂಟಿಯಾಗಿ ಮತ್ತಷ್ಟು ದಿನಗಳ ಕಾಲ ಜಾಗೃತಿಯನ್ನು ಮುಂದುವರಿಸಿದ್ದಾರೆ.  ನಾಗರಾಜ್ ರಾಘವ್ ಅಂಚನ್ ಸಾಮಾಜಿಕ ಕಳಕಳಿಯಿಂದ ಬೆಳಗ್ಗೆ 6 ರಿಂದ 9 ರವರೆಗೆ ಅಭಿಯಾನ ನಡೆಸುತ್ತಿದ್ದು, ಇದನ್ನು ನೋಡಿ ರಸ್ತೆಯಲ್ಲಿ ತೆರಳುವ ಕೆಲವರು ಅಪಹಾಸ್ಯ ಮಾಡುತ್ತಿದ್ದಾರೆ.ಆದರೆ ಅದೆಷ್ಟೋ ಮಂದಿ ಯುವಕನ ಅಭಿಯಾನಕ್ಕೆ ಸಾಥ್ ನೀಡಿ, ಶ್ಲಾಘಿಸಿದ್ದಾರೆ.

ಶೇ.90 ರಷ್ಟು ಕಸ ಎಸೆಯೋದು ನಿಂತಿದೆ
ಎಪಿಡಿ ಪ್ರತಿಷ್ಠಾನ-ಹಸಿರು ದಳ ಜಂಟಿಯಾಗಿ ನದಿಗೆ ಕಸ ಎಸೆಯದಂತೆ ಅಭಿಯಾನ ನಡೆಸಿದ್ದು, ಅದಕ್ಕೆ ಉತ್ತಮ ಸ್ಪಂದನೆ ಸಾರ್ವಜನಿಕರಿಂದ ಸಿಕ್ಕಿದ್ದು ಶೇ.೯೦ ರಷ್ಟು ಕಸ ಬಿಸಾಡುವುದು ನಿಂತಿದೆ. ಆದರೆ ಕೆಲವರು ರಾತ್ರಿ, ಮುಂಜಾನೆ ಕಸ ಬಿಸಾಡುತ್ತಿದ್ದು, ಇದರ ನಿಯಂತ್ರಣ ಮತ್ತು ಕಸ ಎಸೆಯುವವರನ್ನು ಸುಲಭದಲ್ಲಿ ಪತ್ತೆಹಚ್ಚಲು ಸೇತುವೆಗೆ ಸಿಸಿ ಕ್ಯಾಮೆರಾ ಅಳವಡಿಸಲು ಏಕಾಂಗಿಯಾಗಿ ಅಭಿಯಾನ ನಡೆಸುತ್ತಿದ್ದೇನೆ. ಈ ಮೂಲಕ ಮತ್ತಷ್ಟು ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ. ಕಸದ ಸಮಸ್ಯೆ ಪರಿಹಾರಕ್ಕೆ ಮೇಯರ್, ಶಾಸಕರು ಕೂಡಾ ಸ್ಪಂದಿಸುವ ಭರವಸೆ ನೀಡಿದ್ದಾರೆ. ಪ್ರತಿಯೊಂದು ಗ್ರಾಮ ಗ್ರಾಮಗಳಲ್ಲಿ ಇಂತಹ ಅಭಿಯಾನವಾಗಬೇಕು ಎನ್ನುವುದು ನಾಗರಾಜ್ ರಾಘವ್ ಅಂಚನ್ ಬಜಾಲ್ ಅವರ ಅಭಿಮತ.

ಸುದ್ದಿ ಇಷ್ಟವಾಯ್ತಾ, ಇತರರಿಗೂ ಶೇರ್ ಮಾಡಿ, ಓದಿಸಿ.

Whatsapp Group
Telegram

Latest Posts

Don't Miss