ದಿಗಂತ ವರದಿ ಮೈಸೂರು:
ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು ದಸರಾ ಮಹೋತ್ಸವಕ್ಕೆಂದು ಕಾಡಿನಿಂದ ಅರಮನೆ ನಗರಿ ಮೈಸೂರಿಗೆ ಬಂದಿರುವ ವಿಕ್ರಮ ಮತ್ತು ಅಶ್ವತ್ಥಾಮ ಆನೆಗಳು ಪುಂಡಾಟ ಮೆರೆದವು. ಮದವೇರಿದ ಗಂಡಾನೆಗಳ ನಡುವೆ ಸಿಲುಕಿದ ಹೆಣ್ಣಾನೆ ಪರದಾಡಿದ ಘಟನೆ ಗುರುವಾರ ನಡೆಯಿತು.
ಇಂದು ಬೆಳಗ್ಗೆ ನಗರದ ಅಶೋಕಪುರಂನಲ್ಲಿರುವ ಅರಣ್ಯ ಭವನದಿಂದ ಅರಮನೆಗೆ ಕಾಲ್ನಡಿಗೆಯಲ್ಲಿ ದಸರಾ ಗಜಪಡೆಯನ್ನು ಕರೆತರಲಾಗುತ್ತಿತ್ತು. ಈ ವೇಳೆ ವಿಕ್ರಮ ಎಂಬ ಆನೆ ಮದವೇರಿತ್ತು. ಇದನ್ನು ತಿಳಿದ ಮಾವುತರು, ಕಾವಾಡಿಗರು ವಿಕ್ರಮನನ್ನು ಎಲ್ಲಾ ಆನೆಗಳಿಂದ ದೂರ ಇಟ್ಟಿದ್ದರು. ಅರಮನೆಗೆ ಬರುವ ವೇಳೆ ಅದು ಕೊನೆಯಲ್ಲಿತ್ತು. ಇತರೆ ಆನೆಗಳಿಂದ ಅಂತರ ಕಾಪಾಡಿಕೊಳ್ಳಲಾಗಿತ್ತು. ಯಾರಿಗೂ ತೊಂದರೆ ಆಗದಂತೆ ಅರಣ್ಯ ಇಲಾಖೆಯವರು ಸುತ್ತುವರೆದಿದ್ದರು.
ಈ ವೇಳೆ ವಿಕ್ರಮ ಸೊಂಡಲಿನಿAದ ಕಾವಾಡಿಗೆ ಹೊಡೆದು ಬೇಲಿಗೆ ತಳ್ಳಿದನು. ಆಘಾತಕ್ಕೊಳ ಗಾಗಿ ಕೆಳಗೆ ಬಿದ್ದ ಆತನನ್ನು ಸಹೋದ್ಯೋಗಿಗಳು ಮೆಲ್ಲೆತ್ತಿದ್ದರು. ತನ್ನನ್ನು ಲಾಲನೆ ಪೋಷಣೆ ಮಾಡಿದ ಕಾವಾಡಿಗೆ ಮದವೇರಿದ್ದ ವಿಕ್ರಮ ಹೀಗೆ ಮಾಡಿದ್ದರಿಂದ ಆತನ ಬಳಿ ಹೋಗುವ ಅಪರಿಚಿತರ ಪಾಡೆನು ಎಂಬ ಭಯ ಎಲ್ಲರಲ್ಲೂ ಎದುರಾಯಿತು.
ಇದಲ್ಲದೆ ಇದೇ ಮೊದಲ ಬಾರಿಗೆ ದಸರಾಗೆಂದು ಬಂದಿರುವ ಅಶ್ವತ್ಥಾಮ ಕೂಡ ಪುಂಡಾಟ ಮೆರೆದನು. ರಸ್ತೆಯ ಬಿಟ್ಟು ಫುಟ್ ಪಾತ್ ಹೇರಿದನು. ಮತ್ತೆ ಅವನನ್ನು ರಸ್ತೆಗೆ ತರುವಷ್ಟರಲ್ಲಿ ಮಾವುತ ಮತ್ತು ಕಾವಾಡಿ ಪಾಡು ಪಟ್ಟರು.
ಮೈಸೂರು ಅರಮನೆಗೆ ಬಂದ ವೇಳೆ ಮೊದಲೇ ಮದವೇರಿದ್ದ ವಿಕ್ರಮ ತನ್ನ ತಾಪವನ್ನು ತಣಿಸಿಕೊಳ್ಳಲು ಹೆಣ್ಣಾನೆ ಚೈತ್ರಳ ಜೊತೆ ಸರಸ, ಸಲ್ಲಾಪಕ್ಕೆ ಹಾತೊರೆದನು. ಗೋಪಾಲಸ್ವಾಮಿ ಕೂಡ ಇದರಿಂದ ಹಿಂದೆ ಬೀಳಲಿಲ್ಲ. ಎರಡು ಆನೆಗಳ ಮಧ್ಯೆ ಸಿಲುಕಿದ ಚೈತ್ರಳ ಪಾಡು ಹೇಳ ತೀರದಾಗಿತ್ತು.