ಪ್ರೀತಿಯ ಓದುಗರೇ,
ಕೋವಿಡ್ ನಿರ್ನಾಮ ನಮ್ಮ ಕೈಯಲ್ಲೇ ಇದೆ. ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಕೈ, ಮುಖವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಿ. ನೀವೂ ಸುರಕ್ಷಿತರಾಗಿರಿ, ನಿಮ್ಮವರನ್ನೂ ಸುರಕ್ಷಿತರಾಗಿ ಇರುವಂತೆ ನೋಡಿಕೊಳ್ಳಿ.
…………………………………………………………….
ಹೊಸದಿಗಂತ ಆನ್ ಲೈನ್ ಡೆಸ್ಕ್:
ಚಾಮರಾಜನಗರದಲ್ಲಿ 24 ಕೊರೋನಾ ಸೋಂಕಿತರ ಸಾವಿಗೆ ಹೈಕೋರ್ಟ್ ತೀವ್ರ ಕಳವಳ ವ್ಯಕ್ತಪಡಿಸಿದೆ. ಈ ಕುರಿತಂತೆ ಕೇಂದ್ರ ಸರ್ಕಾರದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಆಕ್ಸಿಜನ್ ಪೂರೈಸಲು ಕೇಂದ್ರ ಸರ್ಕಾರದ ಮೀನಮೇಷ ಎಣಿಸುತ್ತಿರುವುದಕ್ಕೆ ಕೇಂದ್ರದ ವಿರುದ್ಧ ನ್ಯಾಯಮೂರ್ತಿಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಕೇಂದ್ರ ಸರ್ಕಾರ ನಿರ್ಧಾರ ಪ್ರಕಟಿಸುವವರೆಗೂ ನಾವು ಕಾಯಬೇಕಾ ಎಂದು ಪ್ರಶ್ನಿಸಿದೆ.
ಕರ್ನಾಟಕದ ಪಾಲಿನ ಆಕ್ಸಿಜನ್ ಕೋಟಾ ಹೆಚ್ಚಿಸುತ್ತಿರೋ ಇಲ್ಲವೋ? ಕಡಿಮೆ ಆಕ್ಸಿಜನ್ ಬಳಕೆ ಇರುವ ಕಡೆ ಹೆಚ್ಚು ಕೊಡುತ್ತಿದ್ದೀರಿ, ಇನ್ನು ಎಷ್ಟು ಮಂದಿ ಆಕ್ಸಿಜನ್ ಇಲ್ಲದೆ ಸಾಯಬೇಕು ಎಂದು ತರಾಟೆಗೆ ತೆಗೆದುಕೊಂಡಿದೆ. ಇಂದೇ ರಾಜ್ಯಕ್ಕೆ ಆಕ್ಸಿಜನ್ ಪೂರೈಸುವಂತೆ ಕೇಂದ್ರಕ್ಕೆ ಹೈಕೋರ್ಟ್ ಸೂಚನೆ ನೀಡಿದೆ.
ಆಕ್ಸಿಜನ್ ಕೊರತೆಯಿಂದ ಚಾಮರಾಜನಗರದ ಆಸ್ಪತ್ರೆಯಲ್ಲಿ ಸೋಂಕಿತರು ಮೃತಪಟ್ಟಿರುವ ಬಗ್ಗೆ ಮಾಧ್ಯಮಗಳಲ್ಲಿ ಬಂದಿರುವ ವರದಿಯನ್ನು ಆಧರಿಸಿ ಕೋರ್ಟ್ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿಕೊಂಡು ವಿಚಾರಣೆ ನಡೆಸುತ್ತಿದೆ.
ಇನ್ನೂ 10 ಆಸ್ಪತ್ರೆಗಳಿಗೆ ಆಕ್ಸಿಜನ್ ಕೊರತೆಯಿದೆ, ಈ ಬಗ್ಗೆ ಆಸ್ಪತ್ರೆಗಳು ಸರ್ಕಾರಕ್ಕೆ ಪತ್ರ ಬರೆದಿದೆ ಎಂದು ಹೈಕೋರ್ಟ್ ವಕೀಲ ಕ್ಲಿಫ್ಟನ್ ರೊಜಾರಿಯೋ ಮಾಹಿತಿ ನೀಡಿದರು.
ನಾಳೆ ಮಧ್ಯಾಹ್ನದವರೆಗೂ ಕಾಲಾವಕಾಶ ನೀಡಿ ಎಂದು ಕೇಂದ್ರದ ಪರ ವಕೀಲರು ಕೇಳಿಕೊಂಡರು.
ಆಕ್ಸಿಜನ್ ಪೂರೈಕೆ ಸಂಬಂಧ ನಾಳೆ ಬೆಳಗ್ಗೆ 10.30 ರೊಳಗೆ ನಿರ್ಧಾರ ಪ್ರಕಟಿಸುವಂತೆ ಸೂಚನೆ ನೀಡಿದ ಹೈಕೋರ್ಟ್, ಕೇಂದ್ರ ಸರ್ಕಾರಕ್ಕೆ ಗಡುವು ನೀಡಿದೆ. ನಿರ್ಧಾರ ಪ್ರಕಟವಾಗದೇ ಹೋದರೆ ನಾವೇ ಖುದ್ದಾಗಿ ಕೇಂದ್ರಕ್ಕೆ ನಿರ್ದೇಶನ ನೀಡಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದೆ.