Thursday, July 7, 2022

Latest Posts

ಹೆದ್ದಾರಿ ಕಾಮಗಾರಿ: ಪರ್ಯಾಯ ಮಾರ್ಗ ಅಪಾಯಕ್ಕೆ ರಹದಾರಿ

ಹೊಸದಿಗಂತ ವರದಿ, ಕೊಡಗು:

ಗುಡ್ಡೆಹೊಸೂರಿನಿಂದ ಕಬ್ಬಿನಗದ್ದೆವರೆಗಿನ ರಸ್ತೆಯನ್ನು ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆಯಡಿ ಕಾಂಕ್ರಿಟ್ ರಸ್ತೆಯನ್ನಾಗಿ ಮಾರ್ಪಡಿಸಲು ಸೆ.22ರಿಂದ ನ.2 ರವರೆಗೆ ರಸ್ತೆ ಬಂದ್ ಮಾಡಲಾಗಿದೆ.
ಆದರೆ ಜಿಲ್ಲಾಡಳಿತ ಸೂಚಿಸಿರುವ ಪರ್ಯಾಯ ರಸ್ತೆ ಸಂಚಾರ ಅಪಾಯವನ್ನು ಆಹ್ವಾನಿಸುತ್ತಿದೆ ಎಂದು ಸ್ಥಳೀಯ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ-ಕೊಡಗರಹಳ್ಳಿ-ಕಂಬಿಬಾಣೆ-ಚಿಕ್ಲಿಹೊಳೆ-ರಂಗಸಮುದ್ರ ಅಥವಾ ಕುಶಾಲನಗರ-ಸುಂಟಿಕೊಪ್ಪ- ಚೆಟ್ಟಳ್ಳಿ- ಒಂಟಿಯಂಗಡಿ ಮಾರ್ಗವನ್ನು ಬಳಸುವಂತೆ ಪರ್ಯಾಯ ಮಾರ್ಗವನ್ನು ಸೂಚಿಸಲಾಗಿತ್ತು. ಈ ರಸ್ತೆ ಅತ್ಯಂತ ಕಿರಿದಾಗಿರುವುದು ಮಾತ್ರವಲ್ಲದೆ, ಸಂಪೂರ್ಣ ಹದಗೆಟ್ಟಿದೆ. ಇದರಿಂದಾಗಿ ಬಸ್‌ಗಳ ಸಂಚಾರ ದುಸ್ತರವಾಗಿದೆ. ಒಂದು ವಾಹನವಷ್ಟೇ ಸಂಚರಿಸುವಷ್ಟು ಜಾಗವಿದ್ದು, ರಸ್ತೆಯ ಎರಡೂ ಭಾಗಗಳಲ್ಲಿ ಕಾಡು ಬೆಳೆದಿರುವುದರಿಂದ ವಾಹನ ಚಾಲನೆ ಮತ್ತಷ್ಟು ಕಷ್ಟಕರವಾಗಿದೆ.
ಪರ್ಯಾಯ ರಸ್ತೆ ಸೂಚಿಸುವ ಮೊದಲು ಜಿಲ್ಲಾಡಳಿತ ರಸ್ತೆಯ ಗುಣಮಟ್ಟ ಪರಿಶೀಲಿಸಬೇಕಾಗಿತ್ತು. ರಸ್ತೆ ದುರಸ್ತಿಗೊಳಿಸಿ ಎರಡೂ ಬದಿಯ ಕಾಡು ಕಡಿದು ಸುಗಮ ಸಂಚಾರಕ್ಕೆ ಅನುಕೂಲ ಕಲ್ಪಿಸಿಕೊಡಬೇಕಾಗಿತ್ತು. ಆದರೆ ಏಕಾಏಕಿ ರಸ್ತೆ ಬಂದ್ ಮಾಡಿ ಈ ಕಿರಿದಾದ ರಸ್ತೆಯನ್ನು ಸಂಚರಿಸುವಂತೆ ತಿಳಿಸುವ ಮೂಲಕ ಅಪಾಯಕ್ಕೆ ದೂಡಲಾಗಿದೆ. ಸಿದ್ದಾಪುರದಿಂದ ಕುಶಾಲನಗರಕ್ಕೆ ತೆರಳಲು ಸಾಧ್ಯವೇ ಇಲ್ಲ ಎಂಬಂತಾಗಿದೆ.
ನೂರಾರು ಪ್ರವಾಸಿ ವಾಹನಗಳು ಕೂಡಾ ಇದೇ ಮಾರ್ಗದಲ್ಲಿ ಸಂಚರಿಸುತ್ತಿದ್ದು, ಆತಂಕ ಮನೆ ಮಾಡಿದೆ. ವಿದ್ಯಾರ್ಥಿಗಳು ಹಾಗೂ ಖಾಸಗಿ ಬಸ್ ಚಾಲಕರುಗಳ ಗೋಳು ಆ ಆಡಳಿತ ವ್ಯವಸ್ಥೆಗೇ ಪ್ರೀತಿ ಎನ್ನುವಂತಿದೆ ಎಂದು ಸ್ಥಳೀಯ ಗ್ರಾಮಸ್ಥ ಗೋಪಾಲಕೃಷ್ಣ ದೂರಿದ್ದಾರೆ.
ತಕ್ಷಣ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ರಸ್ತೆಯ ಗುಂಡಿ ಮುಚ್ಚಬೇಕು ಮತ್ತು ಕಾಡು ಕಡಿಯಬೇಕು, ನಿಗದಿಪಡಿಸಿದಂತೆ ನ.2 ರೊಳಗೆ ಕಾಂಕ್ರಿಟ್ ರಸ್ತೆ ಕಾಮಗಾರಿ ಪೂರ್ಣಗೊಳಿಸಬೇಕು. ತಪ್ಪಿದಲ್ಲಿ ಗ್ರಾಮಸ್ಥರ ಸಹಕಾರದೊಂದಿಗೆ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ರಾಜ್ಯ ಹೆದ್ದಾರಿ ಕೊಣನೂರು-ಮಾಕುಟ್ಟ ರಸ್ತೆಯ ಗುಡ್ಡೆಹೊಸೂರುನಿಂದ ಕಬ್ಬಿನಗದ್ದೆವರೆಗಿನ 27.40 ಕಿ.ಮೀ.ನಿಂದ 38 ಕಿ.ಮೀ.ವರೆಗೆ ಆಯ್ದ ಭಾಗಗಳಲ್ಲಿ ಲೋಕೋಪಯೋಗಿ ಇಲಾಖೆ ಕಾಂಕ್ರಿಟ್ ರಸ್ತೆ ನಿರ್ಮಿಸಲು ಮುಂದಾಗಿದೆ. 7 ಮೀಟರ್ ಅಗಲದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣವಾಗಲಿದ್ದು, ಕಾಮಗಾರಿ ಸಂದರ್ಭ ವಾಹನ ಸಂಚಾರ ನಿಷೇಧಿಸುವಂತೆ ಲೋಕೋಪಯೋಗಿ ಇಲಾಖೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿತ್ತು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss