ಹಿಜಾಬ್ ವಿವಾದ ಸೃಷ್ಟಿಸಿದವರು ಒಮ್ಮೆ ಪಾಕಿಸ್ತಾನ, ಸೌದಿಗೆ ಹೋಗಿ ಬರಲಿ: ಖಾದರ್

ಹೊಸದಿಗಂತ ವರದಿ, ಮಂಗಳೂರು:

ಹಿಜಾಬ್ ವಿವಾದ ಸೃಷ್ಟಿಸಿರುವ ವಿದ್ಯಾರ್ಥಿನಿಯರು ಒಮ್ಮೆ ವಿದೇಶಕ್ಕೆ ಹೋಗಿ ಬರಲಿ. ಆಗ ನಮ್ಮ ದೇಶದ ಮಹತ್ವ ತಿಳಿಯಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ಹಿಜಾಬ್ ವಿವಾದ ಎಬ್ಬಿಸಿರುವ ವಿದ್ಯಾರ್ಥಿನಿಯರಿಗೆ ಶಾಸಕ ಯು.ಟಿ.ಖಾದರ್ ಸಲಹೆ ನೀಡಿದ್ದಾರೆ.
ಸೋಮವಾರ ಮಂಗಳೂರಿನಲ್ಲಿರುವ ದ.ಕ.ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗೊಂದಲ ಸೃಷ್ಟಿಸಿರುವ ವಿದ್ಯಾರ್ಥಿನಿಯರು ಒಮ್ಮೆ ಪಾಕಿಸ್ತಾನ, ಸೌದಿಯಂತಹ ರಾಷ್ಟ್ರಗಳಿಗೆ ಭೇಟಿ ನೀಡಿ ಬರಲಿ. ಆಗ ನಮ್ಮ ದೇಶದ ಮಹತ್ವ, ಕಾನೂನು ನಮಗೆ ನೀಡಿರುವ ಅವಕಾಶಗಳ ಕುರಿತು ಅರಿವಾಗುತ್ತದೆ ಎಂದರು.
ಹಿಜಾಬ್ ವಿಷಯದ ಕುರಿತಂತೆ ಇಲ್ಲಿ ಸುಮ್ಮನೆ ಗೊಂದಲ ಸೃಷ್ಟಿಸಲಾಗುತ್ತಿದೆ. ಕೆಲವೇ ಕೆಲವು ವಿದ್ಯಾರ್ಥಿನಿಯರಿಂದ ಹಲವು ಮಂದಿ ಸಮಸ್ಯೆ ಎದುರಿಸುವಂತಾಗಿದೆ. ಇತರೆ ಸಾವಿರಾರು ವಿದ್ಯಾರ್ಥಿನಿಯರು ಇಲ್ಲಿ ಕಲಿಯುತ್ತಿಲ್ಲವೇ? ಇವರಿಗೇನು ಕಲಿಯಲು ಎಂದು ಖಾದರ್ ಪ್ರಶ್ನಿಸಿದರು.
ಹಿಜಾಬ್ ಕುರಿತಂತೆ ತಮಗೆ ಇಷ್ಟ ಬಂದಂತೆ ಮಾತನಾಡುವ ಕೆಲವು ವಿದ್ಯಾರ್ಥಿನಿಯರು ಮೊದಲು ಈ ದೇಶದ ಬಗ್ಗೆ ತಿಳಿಯಲಿ. ಇಲ್ಲಿ ಪೂರ್ಣ ಸ್ವಾತಂತ್ರ್ಯವಿರುವುದರಿಂದ ಇದೆಲ್ಲಾ ಸಾಧ್ಯವಾಗುತ್ತಿದೆ. ಇದೇ ವಿಷಯವನ್ನು ಅವರು ವಿದೇಶದಲ್ಲಿ ಹೋಗಿ ಮಾತನಾಡಲಿ? ಆಗ ಅವರಿಗೆ ನೈಜತೆಯ ಅರಿವಾಗುತ್ತದೆ ಎಂದವರು ಹೇಳಿದರು.
ಇಲ್ಲಿ ಹುಲಿಯ ಹಾಗೆ ಪೋಸ್ ನೀಡುವವರು ವಿದೇಶದಲ್ಲಿ ವಿಮಾನ ಇಲಿಯುತ್ತಿದ್ದಂತೆ ಬೆಕ್ಕಿನಂತಾಗುತ್ತಾರೆ. ಇಲ್ಲಿರುವಾಗ ಅವರಿಗೆ ಅಕ್ಕಪಕ್ಕ ಬಾಡಿಗಾರ್ಡ್‌ಗಳು ಬೇಕು. ಅದೇ ವಿದೇಶದಲ್ಲಿ ಇಲಿಯಂತೆ ಇರುತ್ತಾರೆ. ನಮ್ಮ ದೇಶ ನೀಡಿರುವ ಸ್ವಾತಂತ್ರ್ಯದ ಬಗ್ಗೆ ಮೊದಲು ಅರಿತುಕೊಳ್ಳಬೇಕು ಎಂದು ಯು.ಟಿ.ಖಾದರ್ ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!