ಹಿಜಾಬ್ ವಿವಾದ : ಶಾಂತಿ ಕದಡಿದರೆ ಮುಲಾಜಿಲ್ಲದೆ ಕಾನೂನು ಕ್ರಮ ಎಂದು ಎಚ್ಚರಿಕೆ ನೀಡಿದ ಕಲಬುರಗಿ ಡಿಸಿ

ಹೊಸದಿಗಂತ ವರದಿ,ಕಲಬುರಗಿ:

ಹಿಜಾಬ್ ವಿವಾದ ಹಿನ್ನೆಲೆಯಲ್ಲಿ ಪರಿಸ್ಥಿತಿಯ ದುರ್ಲಾಭ ಪಡೆದುಕೊಂಡು ಸಮಾಜದ ಸಾಮರಸ್ಯ ಮತ್ತು ಶಾಂತಿ ಕದಡಲು ಪ್ರಯತ್ನಿಸಿದ್ದರೆ ಅಂತಹವರ ಮೇಲೆ ಮುಲಾಜಿಲ್ಲದೆ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಯಶವಂತ ವಿ. ಗುರುಕರ್ ತಿಳಿಸಿದ್ದಾರೆ.

ಮಂಗಳವಾರ ಪ್ರಕರಣದ ಹಿನ್ನೆಲೆಯಲ್ಲಿ ವಿವಿಧ ಸಮಾಜದ ಮುಖಂಡರೊಂದಿಗೆ ಶಾಂತಿ ಸಭೆ ನಡೆಸಿದ ಅವರು, ಹಿಜಾಬ್ ಪ್ರಕರಣದಲ್ಲಿ ರಾಜ್ಯದ ಉಚ್ಛ ನ್ಯಾಯಾಲಯದ ಮಧ್ಯಂತರ ಆದೇಶವನ್ನು ಎಲ್ಲಾ ಶಿಕ್ಷಣ ಸಂಸ್ಥೆಗಳು, ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲಿಸಬೇಕಾಗುತ್ತದೆ ಎಂದ ಅವರು ಈ ಸಂಬಂಧ ಈಗಾಗಲೆ ಪ್ರಾಂಶುಪಾಲರ ಸಭೆ ಕರೆದು ಅಗತ್ಯ ನಿರ್ದೇಶನಗಳನ್ನು ನೀಡಲಾಗಿದೆ ಎಂದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೂವರೆಗೆ ಜಿಲ್ಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಇದಕ್ಕಾಗಿ ಸಮಾಜದ ಮುಖಂಡರುಗಳಿಗೆ ಅಭಿನಂದನೆ ಸಲ್ಲಿಸುವೆ ಎಂದ ಜಿಲ್ಲಾಧಿಕಾರಿಗಳು ಇದೇ ರೀತಿಯ ಶಾಂತಿಯನ್ನು ಜಿಲ್ಲೆಯ ಜನತೆ ಕಾಪಾಡಿಕೊಳ್ಳಬೇಕೆಂದು ಅವರು ಮನವಿ ಮಾಡಿದರು.

ಯಾರೇ ಕಾನೂನು ಕೈಗೆ ತೆಗೆದುಕೊಂಡರೆ ಅಂತವರ ಮೇಲೆ ದೂರು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲು ಈಗಾಗಲೆ ಪೊಲೀಸರಿಗೆ ನಿರ್ದೇಶನ ನೀಡಲಾಗಿದೆ. ಮುಂದಿನ ದಿನದಲ್ಲಿ ಪೊಲೀಸ್ ಠಾಣೆವಾರು ಸಹ ಶಾಂತಿ ಸಭೆ ನಡೆಸಲಾಗುವುದು ಎಂದು ಡಿ.ಸಿ. ಅವರು ತಿಳಿಸಿದರು.

ಸಭೆಯಲ್ಲಿ ಭಾಗವಹಿಸಿದ ಬಹುತೇಕ ಮುಖಂಡರು ಸಾಮಾಜಿಕ ಜಾಲತಾಣಗಳಿಂದ ಹರಿದಾಡುವ ಅನಗತ್ಯ ಪೋಸ್ಟ್‌ ಗಳಿಂದ ಸಮಾಜದ ಶಾಂತಿ, ಸಾಮರಸ್ಯ ಕೆಡಲು ಕಾರಣವಾಗುತ್ತಿದ್ದು, ಇದಕ್ಕೆ ನಿಯಂತ್ರಣ ಹಾಕಬೇಕು. ಠಾಣೆವಾರು ಶಾಂತಿ ಸಭೆ ನಡೆಸಬೇಕು ಎಂದು ಒತ್ತಾಯ ಮಾಡಿದರು.

ನಂತರ ಜಿಲ್ಲಾ ಪೊಲೀಸ್ ಅಧೀಕ್ಷಕಿ ಇಶಾ ಪಂತ್ ಅವರು ಮಾತನಾಡಿ, ಜಿಲ್ಲೆಯಲ್ಲಿನ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇಡಲು ಸಾಮಾಜಿಕ ಮಾಧ್ಯಮ ಕಣ್ಗಾವಲು ಕೋಶ ರಚಿಸಿದ್ದು, ಇದು ಸಂಪೂರ್ಣವಾಗಿ ಅವಹೇಳನಕಾರಿ, ಪ್ರಚೋದನಕಾರಿ ಮತ್ತು ಕಾನೂನಿಗೆ ವಿರುದ್ಧವಾಗಿ ಪೋಸ್ಟ್ ಮಾಡಲಾಗುವ ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ವಹಿಸುತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಹಡಿದಾಡುವ ಸುಳ್ಳು ಸುದ್ದಿ, ಪ್ರಚೋದನಕಾರಿ ಸುದ್ದಿಗಳ ಮೇಲೆ ದೂರು ನೀಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.

ಇಂತಹ ಪ್ರೋದನಕಾರಿಗಳ ವಿಷಯಗಳ ಸತ್ಯಾಂಶಗಳ ಬಗ್ಗೆ ಅರಿಯದೇ ಯಾರು ಸಂದೇಶಗಳನ್ನು ಫಾರವಾರ್ಡ್ ಮಾಡಬಾರದು. ಮನೆಯಲ್ಲಿನ ಹಿರಿಯರು ಈ ಬಗ್ಗೆ ತಮ್ಮ ಮಕ್ಕಳಿಗೆ, ಯುವ ಸಮೂಹಕ್ಕೆ ಮತ್ತು ತಮ್ಮ ಸಮಾಜ ಬಾಂಧವರಿಗೆ ಬುದ್ದಿವಾದ ಹೇಳಬೇಕು. ಶಾಂತಿ ಮತ್ತು ಸೌಹಾರ್ದತೆ ಕಾಪಾಡಲು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‍ರೊಂದಿಗೆ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.

ಸಭೆಯಲ್ಲಿ ಡಿ.ಸಿ.ಪಿ ಅಡ್ಡೂರು ಶ್ರೀನಿವಾಸಲು, ಕಲಬುರಗಿ ಉತ್ತರ ವಿಭಾಗದ ಎ.ಸಿ.ಪಿ ದೀಪನ್, ಹೆಚ್ಚುವರಿ ಎಸ್.ಪಿ. ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತೆ ಮೋನಾ ರೋಟ್ ಸೇರಿದಂತೆ ತಾಲೂಕಿನ ತಹಶೀಲ್ದಾರರು, ಡಿ.ಎಸ್.ಪಿ.ಗಳು, ವಿವಿಧ ಸಮಾಜದ ಮುಖಂಡರು ಭಾಗವಹಿಸಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!