ಕುಶಾಲನಗರದಲ್ಲಿ ಹಿಜಾಬ್ ಪರ-ವಿರೋಧದ ಹೋರಾಟ: ವಿದ್ಯಾರ್ಥಿಗಳ ಪ್ರತಿಭಟನೆ , ಆತಂಕ ಸೃಷ್ಟಿ

ಹೊಸದಿಗಂತ ವರದಿ,ಕುಶಾಲನಗರ:

‘ಹಿಜಾಬ್’ ಪರ ಮತ್ತು ವಿರೋಧದ ಹೋರಾಟ ತೀವ್ರ ಕಾವು ಪಡೆದುಕೊಂಡಿದ್ದು,ಮಂಹಳವಾರ ಕುಶಾಲನಗರದಲ್ಲಿ ಪರ ಹಾಗೂ ವಿರುದ್ಧದ ವಿದ್ಯಾರ್ಥಿ ಗುಂಪುಗಳು ಪ್ರತಿಭಟನೆ ನಡೆಸಿದರು.
ಕುಶಾಲನಗರದ ವಿವಿಧ ಕಾಲೇಜಿನ ವಿದ್ಯಾರ್ಥಿಗಳು ಕಾರ್ಯಪ್ಪ ವೃತ್ತದಲ್ಲಿ ಜಮಾಯಿಸಿ ಹಿಜಾಬ್ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದರು. ಕೇಸರಿ ಶಾಲು ಹಾಕಿ‌ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿರುವಾಗಲೇ ಮುಸ್ಲಿಂ ಯುವಕರ 6 ಜನರ ತಂಡ ಮತ್ತು ಕೆಲ ಮುಸ್ಲಿಂ ವಿದ್ಯಾರ್ಥಿಗಳು ಹಿಜಾಬ್ ಪರ ಘೋಷಣೆ ಕೂಗಲು ಆರಂಭಿಸಿದರು. ಇದರಿಂದಾಗಿ ಕೆಲ ಸಮಯ ಕಾರ್ಯಪ್ಪ ವೃತ್ತದಲ್ಲಿ ಆತಂಕದ ವಾತಾವರಣ ನಿರ್ಮಾಣಗೊಂಡಿತು.
ಮುಸ್ಲಿಂ ಯುವಕರ ಗುಂಪಿನತ್ತ ಸಂಚಾರಿ ಠಾಣಾಧಿಕಾರಿ ಚಂದ್ರಶೇಖರ್ ಮತ್ತು ನಗರ ಠಾಣಾಧಿಕಾರಿ ಅಪ್ಪಾಜಿ ದೌಡಾಯಿಸಿ ಪರಿಸ್ಥಿತಿ ತಿಳಿಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಕೊನೆಗೆ ಎಸ್ ಡಿ ಪಿ ಐ ನ ಪ್ರಮುಖ ಅಬ್ದುಲ್ ಕರೀಂ ಅವರ ಮುಖಾಂತರ ಮುಸ್ಲಿಂ ಯುವಕರ ಮನವೊಲಿಸಿ, ಸಂಜೆ 4 ಗಂಟೆಗೆ ಕಾರ್ಯಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸುವಂತೆ ಸೂಚಿಸಲಾಯಿತು. ಇದಕ್ಕೆ ಒಪ್ಪಿದ ನಂತರ ಸ್ಥಳದಿಂದ ಮುಸ್ಲಿಂ ಯುವಕರು ತೆರಳಿದರು.
ಕೇಸರಿ ಶಾಲು ತೊಟ್ಟ ನೂರಾರು ವಿದ್ಯಾರ್ಥಿಗಳು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ, ಬೇಡ ಬೇಡ ಹಿಜಾಬ್ ಬೇಡ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕನ್ನಡ ಭಾರತಿ ಕಾಲೇಜಿನ ವಿದ್ಯಾರ್ಥಿನಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಿಗೆ ಬರುವುದು ಶಿಕ್ಷಣ ಪಡೆಯಲು. ಇಷ್ಟು ವರ್ಷಗಳ ಕಾಲ ಇಲ್ಲದ್ದು ಈಗ ಏಕಾಏಕಿ ಹಿಜಾಬ್ ಮೇಲೆ ಇವರಿಗೆ ಪ್ರೀತಿ ಯಾಕೆ ಬಂತು ಎಂದು ಪ್ರಶ್ನಿಸಿದರು. ಮುಸ್ಲಿಂ ಯುವತಿಯರು ಹಿಜಾಬ್ ಧರಿಸಿ ಕಾಲೇಜಿಗೆ ಬಂದರೆ ಹಿಂದು ಯುವತಿಯರು ಕೇಸರಿ ಶಾಲು ತೊಟ್ಟು ಬರುತ್ತೇವೆ ಎಂದರು.
ಎಬಿವಿಪಿ ನಗರ ಕಾರ್ಯದರ್ಶಿ ತನ್ಮಯ್, ಸೌರವ್, ಅಭಿಲಾಷ್, ಶಿಲ್ಪಾ ಅಂಬಿಕಾ, ಜೀವನ್, ಆದರ್ಶ ಮತ್ತು ನೂರಾರು ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ಪ್ರತಿಙಟನೆಯಲ್ಲಿ ಪಾಲ್ಗೊಂಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!