ಸುಪ್ರೀಂ ಕೋರ್ಟ್‌ ನಲ್ಲಿ ಕಾವೇರಿದ ಹಿಜಾಬ್ ವಿಚಾರಣೆ: ಮೂಗುತಿ, ಮಂಗಳಸೂತ್ರ ಕುರಿತು ಚರ್ಚೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸುಪ್ರೀಂ ಕೋರ್ಟ್‌ನ ನ್ಯಾಯಪೀಠದಲ್ಲಿ ಹಿಜಾಬ್‌ ವಿಚಾರವಾಗಿ ಮತ್ತೆ ವಿಚಾರಣೆ ನಡೆಯಿತು. ಈ ವೇಳೆ ಹಿಜಾಬ್​ ಬಟ್ಟೆ ಧರಿಸುವುದು ಹಕ್ಕು ಎಂದು ಅರ್ಜಿದಾರರ ಪರ ವಕೀಲ ದೇವದತ್​ ಕಾಮತ್​ ಹೇಳಿದರೆ, ಬಟ್ಟೆ ಧರಿಸದೇ ಇರುವುದೂ ಕೂಡ ಹಕ್ಕಿನ ವ್ಯಾಪ್ತಿಗೆ ಬರುತ್ತದೆ ಎಂದು ನ್ಯಾಯಪೀಠ ಹೇಳಿತು.

ಶಾಲಾ ಕಾಲೇಜುಗಳ ತರಗತಿಗಳಲ್ಲಿ ಹಿಜಾಬ್​ ಧರಿಸಲು ನಿಷೇಧಿಸಿದ ಕುರಿತು ಸಲ್ಲಿಸಲಾದ ಮೇಲ್ಮನವಿ ಅರ್ಜಿಗಳನ್ನು ಸುಪ್ರೀಂಕೋರ್ಟ್ಎ ರಡನೇ ದಿನದ ವಿಚಾರಣೆ ನಡೆಸುತ್ತಿದೆ.ಈ ವೇಳೆ ಫಿರ್ಯಾದುದಾರರ ಪರವಾಗಿ ವಾದ ಮಂಡಿಸುತ್ತಿರುವ ದೇವದತ್​ ಕಾಮತ್​ ಒಂದು ಹಂತದಲ್ಲಿ ಹಿಜಾಬ್​ ಧರಿಸುವುದು ಮಹಿಳೆಯರ ಹಕ್ಕಾಗಿದೆ ಎಂದರು. ಈ ವೇಳೆ ನ್ಯಾ.ಹೇಮಂತ್​ ಗುಪ್ತಾ ಅವರು ಬಟ್ಟೆ ಧರಿಸುವುದು ಹಕ್ಕಾದರೆ, ಧರಿಸದೇ ಇರುವುದು ಹಕ್ಕಿನಡಿಯೇ ಬರುತ್ತದೆ ಎಂದರು. ಈ ವೇಳೆ ಕಾಮತ್​ ಶಾಲೆಯಲ್ಲಿ ಯಾರೂ ಕೂಡ ಬಟ್ಟೆ ಕಳಚಲ್ಲ ಎಂದರು. ಬಟ್ಟೆ ಹಕ್ಕಿನ ವ್ಯಾಪ್ತಿಯಲ್ಲಿ ವಾದ ಮಂಡಿಸಿದರೆ, ತಾರ್ಕಿಕ ಅಂತ್ಯ ಕಾಣದು ಎಂದು ಪೀಠ ಇದೇ ವೇಳೆ ಹೇಳಿತು.

ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್​(ಶಿರಸ್ತ್ರಾಣ)ಗಾಗಿ ಒತ್ತಾಯಿಸುತ್ತಿದ್ದಾರೆ. ಉಳಿದ ಎಲ್ಲ ಸಮುದಾಯದ ವಿದ್ಯಾರ್ಥಿಗಳು ಅವರ ಬಟ್ಟೆಯ ಬಗ್ಗೆ ಯಾವುದೇ ಚಕಾರ ಎತ್ತುತ್ತಿಲ್ಲ. ಶಾಲೆಯ ಸಮವಸ್ತ್ರವನ್ನು ಅವರು ಪಾಲಿಸುತ್ತಿದ್ದಾರಲ್ಲವೇ ಎಂದು ಪೀಠ ಪ್ರಶ್ನಿಸಿತು.
ಶಾಲೆಗೆ ಬರುವ ಅನೇಕ ವಿದ್ಯಾರ್ಥಿಗಳು ಧಾರ್ಮಿಕ ಸಂಕೇತವಾದ ರುದ್ರಾಕ್ಷಿ, ಶಿಲುಬೆಯನ್ನು ಧರಿಸಿರುತ್ತಾರೆ ಎಂದು ವಕೀಲ ಕಾಮತ್ ಹೇಳಿದಾಗ,’ಅದು ಬಟ್ಟೆಯ ಒಳಗಿರುತ್ತದೆ. ರುದ್ರಾಕ್ಷಿ, ಶಿಲುಬೆಯನ್ನು ಯಾರೂ ಕೂಡ ಅಂಗಿಯ ಹಾಕಿಕೊಂಡು ಪ್ರದರ್ಶಿಸುವುದಿಲ್ಲವಲ್ಲ ಎಂದು ನ್ಯಾಯಾಧೀಶರು ಹೇಳಿದರು.

ಇದೇ ವೇಳೆ , ದೇವದತ್‌ ಕಾಮತ್‌, ಪ್ರಕರಣದಲ್ಲಿ ಮೂಗುತಿ ಹಾಗೂ ಹಣೆಗೆ ಧರಿಸುವ ಬಿಂದಿ ವಿಚಾರವನ್ನೂ ಪ್ರಸ್ತಾಪಿಸಿ ಮಾತನಾಡಿದರು.
ಈ ವೇಳೆ ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ವಕೀಲರೇ, ಮೂಗುತಿ ಎಂದಿಗೂ ಧಾರ್ಮಿಕವಲ್ಲ. ಹಿಂದು ಹುಡುಗಿಯರು ಧರಿಸುವ ಮಂಗಳಸೂತ್ರ ಧಾರ್ಮಿಕ ಎಂದು ಹೇಳಿದ್ದಾರೆ.

ದೇವದತ್‌ ಕಾಮತ್‌ ಸಾಕಷ್ಟು ದೇಶಗಳ ಸಂವಿಧಾನ ಅಲ್ಲಿ ನೀಡಿರುವ ವಿಶೇಷ ಸವಲತ್ತುಗಳ ಬಗ್ಗೆ ಮಾತನಾಡಿದರು. ಹೀಗೆ ಮಾತನಾಡುತ್ತಾ ಇತ್ತೀಚೆಗೆ ದಕ್ಷಿಣ ಆಫ್ರಿಕಾದ ಕೋರ್ಟ್‌ ನೀಡಿರುವ ಒಂದು ತೀರ್ಪನ್ನು ಪ್ರಸ್ತಾಪ ಮಾಡಿದರು. ತನ್ನ ಸಾಂಸ್ಕೃತಿಕ ನಂಬಿಕೆಯ ಭಾಗವಾಗಿ ದಕ್ಷಿಣ ಆಫ್ರಿಕಾದ ಕೋರ್ಟ್‌ ಹಿಂದೂ ಹುಡುಗಿಗೆ ಶಾಲೆಗೆ ಮೂಗುತಿಯನ್ನು ಧರಿಸಿ ಬರಲು ಇತ್ತೀಚೆಗೆ ಅನುಮತಿ ನೀಡಿ ತೀರ್ಪು ಪ್ರಕಟಿಸಿದೆ. ಭಾರತದಲ್ಲಿ ತನ್ನ ನಂಬಿಕೆಯನ್ನು ಶಾಲೆಗಳಲ್ಲಿ ತೋರಿಸಲು ಏಕೆ ಸಾಧ್ಯವಿಲ್ಲ ಎಂದು ಪ್ರಶ್ನೆ ಮಾಡಿದರು.

ಈ ವಾದಕ್ಕೆ ತಕ್ಷಣವೇ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ ಹೇಮಂತ್‌ ಗುಪ್ತಾ, ಮೂಗುತಿ ಎನ್ನುವುದು ಎಂದಿಗೂ ಧಾರ್ಮಿಕ ನಂಬಿಕೆಯಲ್ಲ. ಮಂಗಳಸೂತ್ರ ಎನ್ನುವುದು ಧಾರ್ಮಿಕ ನಂಬಿಕೆ ಎಂದು ಹೇಳಿದರು. ಇದಕ್ಕೆ ಕಾಮತ್‌, ಮೂಗುತಿ ಧಾರ್ಮಿಕ ನಂಬಿಕೆ ಎನ್ನುವುದಕ್ಕೆ ನನ್ನಲ್ಲಿ ಹಲವು ಸಾಕ್ಷಿಗಳಿವೆ ಎಂದು ಹೇಳಿದರು. ಇದಕ್ಕೆ ಮತ್ತೆ ಪ್ರತಿಕ್ರಿಯೆ ನೀಡಿದ ನ್ಯಾಯಮೂರ್ತಿ, ಜಗತ್ತಿನಲ್ಲಿ ಸಾಮಾನ್ಯವಾಗಿ ಎಲ್ಲಾ ಮಹಿಳೆಯರು ಮೂಗುತಿಯನ್ನು ಧರಿಸುತ್ತಾರೆ. ಭಾರತದಲ್ಲಿ ಮಾತ್ರ ಈ ಸಂಪ್ರದಾಯವಿಲ್ಲ. ಇದು ಎಂದಿಗೂ ಧಾರ್ಮಿಕ ಆಚರಣೆಯಲ್ಲ ಎಂದು ಹೇಳಿದರು.

ಇದಕ್ಕೆ ಮತ್ತೆ ಮಾತನಾಡಿದ ಕಾಮತ್‌, ನಾನು ಹಿಂದು ಧರ್ಮವನ್ನು ಪಾಲಿಸುವ ವ್ಯಕ್ತಿ. ಕೆಲವೊಂದು ಧಾರ್ಮಿಕ ಆಚರಣೆಗಳನ್ನು ಮಾಡುವಾಗ ಬಿಂದಿ ಹಾಗೂ ಮೂಗುತಿ ಧರಿಸುವ ಸಂಪ್ರದಾಯವಿದೆ. ಇದಕ್ಕೆ ಧಾರ್ಮಿಕ ಮೌಲ್ಯವೂ ಇದೆ ಎಂದು ತಿಳಿಸಿದರು.

ಮಹಿಳೆಯರು ಉತ್ತಮ ಗುಣವನ್ನು ಬೆಳೆಸಲು ಮೂಗುತಿಯನ್ನು ಧರಿಸುತ್ತಾರೆ ಮತ್ತು ಇದು ಸಮೃದ್ಧಿಯನ್ನು ತರುತ್ತದೆ ಎಂದು ನಂಬಲಾಗಿದೆ. ಇದು ತುಂಬಾ ಧಾರ್ಮಿಕವಾಗಿದೆ ಎಂದು ಹೇಳಿದರು. ತಮಿಳು ಹಿಂದೂ ವಿದ್ಯಾರ್ಥಿಗೆ ಶಾಲೆಯಲ್ಲಿ ಮೂಗುತಿ ಧರಿಸಲು ಅವಕಾಶ ನೀಡಿದ ದಕ್ಷಿಣ ಆಫ್ರಿಕಾದ ತೀರ್ಪನ್ನು ಕಾಮತ್ ಉಲ್ಲೇಖಿಸಿದ್ದಾರೆ. ಶಾಲೆಯ ಹೊರಗೆ ಮೂಗುತಿ ಧರಿಸುವುದರಿಂದ ವಿದ್ಯಾರ್ಥಿಯ ಹಕ್ಕಿನ ಯಾವುದೇ ಉಲ್ಲಂಘನೆ ಇಲ್ಲ ಎಂದು ಶಾಲೆ ವಾದಿಸಿದೆ ಎಂದು ಕಾಮತ್‌ ಹೇಳಿದ್ದನ್ನು ಕೋರ್ಟ್‌ ತಿರಸ್ಕರಿಸಿತು. ಇದು ಕ್ಲಾಸ್ ಹೊರಗೆ ಹಿಜಾಬ್ ಧರಿಸುವ ವಾದವನ್ನು ಹೋಲುತ್ತದೆ ಎಂದು ಕಾಮತ್ ಹೇಳಿದ್ದಾರೆ.

ಮೂಗುತಿ ತಮಿಳು ಹಿಂದೂ ಸಂಸ್ಕೃತಿಯ ಅಭಿವ್ಯಕ್ತಿಯಾಗಿದೆ ಎಂದು ಹೇಳುವ ತೀರ್ಪಿನ ಭಾಗಗಳನ್ನು ಈ ವೇಳೆ ಉಲ್ಲೇಖ ಮಾಡಿದರು. ಸಮಂಜಸವಾದ ಮಾಹಿತಿಗಾಗಿ ನೀವು ಮೂರು ತೀರ್ಪುಗಳನ್ನು ಉಲ್ಲೇಖಿಸಿರುವಿರಿ. ಆದರೆ, ಈ ಪ್ರಕರಣದಲ್ಲಿ ನಾವು ಇವುಗಳನ್ನು ಪರಿಶೀಲಿಸುವ ಅಗತ್ಯವಿಲ್ಲ ಎಂದು ಕೋರ್ಟ್‌ ಹೇಳಿದೆ.

ಇದೇ ವೇಳೆ ದಕ್ಷಿಣ ಆಫ್ರಿಕಾದ ತೀರ್ಪು ಹಾಗೂ ಅಲ್ಲಿನ ಸಂವಿಧಾನದ ಬಗ್ಗೆ ಉಲ್ಲೇಖ ಮಾಡುತ್ತಿರುವ ನಡುವೆಯೇ ಮಾತನಾಡಿದ ನ್ಯಾಯಮೂರ್ತಿ, ಕಾಮತ್‌ ಅವರೇ, ದಕ್ಷಿಣ ಆಫ್ರಿಕಾದ ವಿಚಾರವನ್ನು ಅಲ್ಲಿಯೇ ಬಿಡಿ. ಭಾರತದ ವಿಚಾರಕ್ಕೆ ಬನ್ನಿ. ಜಗತ್ತಿನ ಎಲ್ಲಾ ದೇಶಗಳು ತನ್ನ ನಾಗರೀಕರಿಗೆ ಸಮಾನವಾದ ಕಾನೂನುಗಳನ್ನು ಹೊಂದಿದೆ. ನೀವು ದಕ್ಷಿಣ ಆಫ್ರಿಕಾದ ಸಂವಿಧಾನವನ್ನು ಓದಿದ್ದೀರಾ? ಎಂದು ಪ್ರಶ್ನೆ ಮಾಡಿದರು. ನನಗೆ ಇದ್ದಿರುವ ತಿಳುವಳಿಕೆಯಲ್ಲಿ ಭಾರತದಷ್ಟು ವೈವಿಧ್ಯಮಯವಾದ ದೇಶ ಇನ್ನೊಂದಿಲ್ಲ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!